ಮಳೆಗೆ ಸೊರುತ್ತಿರುವ ನಾಡಕಚೇರಿ: ಡೋಂಟ್ ಕೇರ್ ಎನ್ನುತ್ತಿರುವ ಅಧಿಕಾರಿಗಳು
ಪ್ರಗತಿವಾಹಿನಿ ಸುದ್ದಿ, ಸುರೇಬಾನ್ (ರಾಮದುರ್ಗ): ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಇರುವ ನಾಡ ಕಚೇರಿಯ ಛಾವಣಿಯಲ್ಲಿ ರಂದ್ರಗಳಾಗಿದ್ದು, ಮಳೆ, ಬಿಸಿಲಿಗೆ ನಾಡ ಕಚೇರಿ ಸಿಬ್ಬಂದಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ನಾಡ ಕಚೇರಿಯಲ್ಲಿ ಮಳೆಗಾಲದಲ್ಲಿ ಸಿಬ್ಬಂದಿಗೆ ಕಚೇರಿಯ ದಾಖಲೆಗಳು ಹಾಗೂ ಸಲಕರಣೆಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಕಚೇರಿಯ ಮೇಲ್ಚಾವಣೆಯಿಂದ ಮಳೆ ನೀರು ಸೋರುವುದರಿಂದ ನೀರು ಹೊರಹಾಕುವುದೆ ಸಿಬ್ಬಂದಿಯ ಕೆಲಸವಾಗಿದೆ. ಈ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯೂ ಇದೆ. ಅಲ್ಲಿರುವ ದಾಖಲೆಗಳನ್ನು ಸಂಗ್ರಹಿಸಿಟ್ಟ ಕಪಾಟುಗಳ ಮೇಲೆ ಮಳೆ ನೀರು ಸೋರುತ್ತಿದ್ದರೂ ಹಿರಿಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಿಳಿಯದಂತೆ ಇರುವುದು ದುರ್ದೈವದ ಸಂಗತಿಯಾಗಿದೆ.
ಈ ಎಲ್ಲ ಸಂಗತಿಗಳನ್ನು ಅರಿತಿರುವ ಅಧಿಕಾರಿಗಳು, ಈಗಿರುವ ನಾಡ ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಪತ್ರದ ಮೂಲಕ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸದೆ ಇರುವುದು ವಿಪರ್ಯಾಸವೆ ಸರಿ.
ಈ ಹಿಂದೆ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹ ಬಂದಾಗಲೂ ಇದೇ ಗೋಳಾಗಿತ್ತು. ಆದರೆ ಅಧಿಕಾರಿಗಳು ಕಾಟಾಚಾರಕ್ಕೆ ಅಲ್ಪ-ಸ್ವಲ್ಪ ಮೇಲ್ಛಾವಣಿಯನ್ನು ರಿಪೇರಿ ಮಾಡಿ ಕೈ ತೊಳೆದುಕೊಂಡಿದ್ದರು. ಆದರೆ ಈಗ ಮತ್ತೆ ಸುರಿದ ಭಾರಿ ಮಳೆಗೆ ಮೇಲ್ಚಾವಣೆಯಿಂದ ಮಳೆಯ ನೀರು ಸೋರಿ ನಾಡ ಕಚೇರಿಯಲ್ಲಿ ಮೊಣಕಾಲು ಮುಳುಗುವಷ್ಟು ಮಳೆನೀರು ಸಂಗ್ರಹವಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ