ಗಿರೀಶ್ ಬಿ.
ಕೋವಿಡ್-೧೯ ಮಹಾಮಾರಿ ನಡುವೆ ನಮ್ಮ ಹಬ್ಬಗಳ ಸಾಲು ಹೊತ್ತು ತರುವ ಶ್ರಾವಣ ಪ್ರಾರಂಭವಾಗಿ ನಾಗರ ಪಂಚಮಿ ಹಬ್ಬ ಬಂದೇ ಬಿಟ್ಟಿದೆ. ಯುಗಾದಿಯಿಂದ ಶುರುವಾದ ಕರೋನಾ ನಮ್ಮ ರಾಜ್ಯದಲ್ಲೀಗ ನಾಗರ ಪಂಚಮಿಯ ಸಂದರ್ಭದಲ್ಲಿ ಉತ್ತುಂಗಕ್ಕೇರಿದೆ. ದಿನಕ್ಕೆ ೫ ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಸಿಗುತ್ತಿವೆ. ಪ್ರತಿ ವರ್ಷವಾದರೆ ಸರಿಯಾಗಿ ಸಂಬಳ ಸಿಗುತ್ತಿತ್ತು. ಆದರೆ ಈಗ ಕೆಲವು ಜನರಿಗೆ ಕೆಲಸವಿಲ್ಲ. ಇನ್ನೂ ಹಲವು ಜನರಿಗೆ ಕೆಲಸ ಮಾಡಿದರೂ ಸಂಬಳ ಕಡಿಮೆ ಸಿಗುತ್ತಿದೆ. ಆದರೆ ಹಬ್ಬ-ಹರಿದಿನಗಳು ಬಂದಾಗ ಒಂದಷ್ಟು ಹೆಚ್ಚು ಖರ್ಚು ಬಂದೇ ಬರುತ್ತದೆ.
ನಾಗ ಪಂಚಮಿ ಎಂಬುದು ಭಾರತ, ನೇಪಾಳ ಮತ್ತು ಹಿಂದೂ ಅನುಯಾಯಿಗಳು ವಾಸಿಸುವ ಇತರ ದೇಶಗಳಲ್ಲಿ ಹಿಂದೂಗಳು ಆಚರಿಸುವ ನಾಗರ ಅಥವಾ ಹಾವುಗಳ ಸಾಂಪ್ರದಾಯಿಕ ಪೂಜೆಯ ದಿನವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರ್ರಾವಣ ತಿಂಗಳ (ಜುಲೈ /ಆಗಸ್ಟ್) ಪ್ರಕಾಶಮಾನವಾದ ಅರ್ಧದ ಐದನೇ ದಿನದಂದು ಪೂಜೆಯನ್ನು ಸಲ್ಲಿಸಲಾಗುತ್ತದೆ. ನಾಗರಪಂಚಮಿಯ ಉತ್ಸವಗಳ ಭಾಗವಾಗಿ, ಬೆಳ್ಳಿ, ಕಲ್ಲು, ಮರ ಅಥವಾ ಹಾವುಗಳ ವರ್ಣಚಿತ್ರದಿಂದ ಮಾಡಿದ ನಾಗ ಅಥವಾ ಸರ್ಪ ದೇವತೆಗೆ ಹಾಲಿನೊಂದಿಗೆ ಸ್ನಾನ ಮಾಡಿಸಿ, ಪೂಜಿಸಲಾಗುತ್ತದೆ. ಈ ದಿನ ನಿಜವಾದ (ಜೀವಂತ) ನಾಗರ ಹಾವುಗಳನ್ನೂ ಸಹ ಪೂಜಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ನಾಗಗಳನ್ನು ಆರಾಧಿಸಿಕೊಂಡು ಬರಲಾಗಿದ್ದು, ನಾಗರ ಪಂಚಮಿಯಂದು ನಾಗರವನ್ನು ಪೂಜಿಸಲಾಗುತ್ತದೆ. ಹಸುವಿನ ಹಾಲಿನಿಂದ ನಾಗರ ಕಲ್ಲುಗಳಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಈ ಮೂಲಕ ತಾಯಿಯ ಹಾಲಿನ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಹುತ್ತಕ್ಕೆ ಹಾಲೆರೆಯುವುದರಿಂದ ಸಂತಾನೋತ್ಪತ್ತಿಗೆ ನೆರವಾಗುತ್ತದೆಯಂತೆ.
ನಾಗರ ಪಂಚಮಿ ದಿನ ಯಾವುದೇ ಪದಾರ್ಥಗಳನ್ನು ಹೆಚ್ಚಬಾರದು, ಕೊಯ್ಯಬಾರದು, ತಿಂಡಿಗಳನ್ನು ಕರಿಯಬಾರದು, ಒಲೆ ಮೇಲೆ ತವೆ ಇಡಬಾರದು, ಭೂಮಿ ಅಗೆಯಬಾರದು ಹೀಗೆ ಈ ದಿನ ಕೆಲವು ನಿಯಮಗಳನ್ನು ಪಾಲಿಸಲಾಗುತ್ತದೆ. ನಮ್ಮ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಈ ಧರ್ಮದಲ್ಲಿ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ನಾಗರ ಪಂಚಮಿ ದಿನದಂದು ನಾಗಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸುವುದು ಮಾತ್ರವಲ್ಲ, ಉಪವಾಸ ವ್ರತವನ್ನು ಕೂಡ ಕೈಗೊಳ್ಳಲಾಗುತ್ತದೆ. ದೇವಿ ಭಾಗವತ ಪುರಾಣದಲ್ಲಿ ನಾವು ಕೆಲವೊಂದು ಸರ್ಪಗಳ ಹೆಸರುಗಳನ್ನು ಕೇಳಬಹುದು. ನಾಗರ ಪಂಚಮಿ ಹಬ್ಬವನ್ನು ಕೇವಲ ಹಾವುಗಳನ್ನು ರಕ್ಷಿಸಲು ಮಾತ್ರವಲ್ಲ, ಪ್ರಾಣಿ ಸಂಕುಲವನ್ನು ಮತ್ತು ಸೃಷ್ಟಿಯನ್ನು ರಕ್ಷಿಸುವುದರ ಕುರಿತು ಜ್ಞಾನವನ್ನು ಮೂಡಿಸುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಾಗರ ಎಂಬ ಒಂದು ಚರ್ಮವ್ಯಾಧಿ ಬಂದಾಗ, ಜನರು ಹುತ್ತಕ್ಕೆ ಹಾಲೆರೆದು ಆ ಹುತ್ತದ ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಅಂದರೆ, ಹುತ್ತದ ಮಣ್ಣಿನಲ್ಲಿ ಔಷಧೀಯ ಗುಣವಿದೆ ಎಂಬುದನ್ನು ಇದು ಸಾಬೀತುಮಾಡುತ್ತದೆ. ಜಗತ್ತಿನಲ್ಲಿರುವ ಎಲ್ಲ ಜೀವ ಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿದೆ. ಎಲ್ಲವೂ ಭಗವಂತನ ಸೃಷ್ಟಿಯೇ ಆಗಿವೆ. ನಾಗರ ಪಂಚಮಿ ದಿನ ನಾಗಗಳನ್ನು ಪೂಜೆ ಮಾಡುವುದರಿಂದ ಭಗವಂತನು ಅವುಗಳ ಮೂಲಕ ಎಲ್ಲಾ ಕಾರ್ಯವನ್ನು ನೆರವೇರಿಸುತ್ತಿದ್ದಾನೆ ಎಂಬ ನಂಬಿಕೆ ಇದೆ.
ನಾಗರ ಪೂಜೆಯ ವಿಧಾನಗಳು:
ಅಕ್ಕಿಹಿಟ್ಟಿನಿಂದ ಎರಡು ನಾಗರ ಹಾವಿನ ಪ್ರತಿಮೆಯನ್ನು ಮಾಡಿ ಪೂಜೆ ಮಾಡುವುದು. ನಾಗರ ಪ್ರತಿಮೆಗೆ ಪಂಚಾಮೃತ ಅಭಿಷೇಕವನ್ನು ಮಾಡಿ ಪೂಜೆ ಮಾಡುವುದು. ಮೊಸರು, ಗರಿಕೆ, ಗಂಧ, ದರ್ಬೆ, ಅಕ್ಷತೆ, ಹೂ, ಮೋದಕ ಅರ್ಪಿಸಿ, ಈ ದಿನ ಬ್ರಾಹ್ಮಣರಿಗೆ ಆಹಾರವನ್ನು ನೀಡಿ, ಉಪವಾಸ ಕೈಗೊಳ್ಳುವುದು ಉತ್ತಮ. ರಂಗೋಲಿಯಿಂದ ಬರೆದ, ಅಕ್ಕಿ ಹಿಟ್ಟಿನಿಂದ ಮಾಡಿದ ನಾಗರ ಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ ಹಾಲೆರೆಯುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯ. ನಾಗರ ಪಂಚಮಿ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ. ಅಶ್ವತ್ಥಕಟ್ಟೆ ಕೆಳಗೆ ಪ್ರತಿಷ್ಠಾಪಿಸಿದ ನಾಗರಕಲ್ಲುಗಳಿಗೆ ಪಂಚಮಿಯ ದಿನ ಮುತ್ತೈದೆಯರು ಮಡಿಯಲ್ಲಿ ಹಾಲೆರೆದು ಪೂಜಿಸುತ್ತಾರೆ.
ನಾಗರ ಪಂಚಮಿಯಂದು ವಿಶೇಷ ಖಾದ್ಯಗಳು:
ಉದ್ದಿನ ಕಡುಬು ಹಾಗೂ ಸಿಹಿ ಕಡುಬು, ವಣೆ ಉಂಡೆ, ಅರಳುಂಡೆ, ಎಳ್ಳು ಉಂಡಿ, ಸೇಂಗಾ ಉಂಡಿ, ಡಾಣಿ ಉಂಡಿ, ಹುರಗಡ್ಲಿ ಉಂಡಿ, ಮಂಡಳು ಉಂಡಿ, ಅವಲಕ್ಕಿ ಉಂಡಿ, ರವೆ ಉಂಡೆ, ಬೇಸನ್ ಉಂಡೆ, ಅಂಟಿನ ಉಂಡಿ ಸಿಕೇದುಂಡಿ ಮತ್ತು ಅಳ್ಳಿಟ್ಟಿನ ಉಂಡಿ.
ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಉಲ್ಲೇಖವಿದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಏಕೆ ಆಚರಿಸಲಾಗುತ್ತದೆ ಎಂದು ಪ್ರಶ್ನಿಸಿದಾಗ ಒಂದು ಕಥೆ ಬರುತ್ತದೆ. ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನಿದ್ದನು. ಆತನಿಗೆ ೮ ಗಂಡು ಮಕ್ಕಳು ಹಾಗೂ ಒಬ್ಬಳು ಪುತ್ರಿ. ಒಂದು ದಿನ ಗರುಡನಿಂದ ಬೆನ್ನಟ್ಟಲ್ಪಟ್ಟ ನಾಗರಹಾವು ಆ ಪುತ್ರಿಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಆ ಹೆಣ್ಣುಮಗಳು ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ಪ್ರತಿ ದಿನವೂ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ಹೆಚ್ಚು ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನನ್ನು ಸೇರಿದಂತೆ ಇತರ ಏಳು ಜನರನ್ನು ಕಚ್ಚಿ, ಕೊಂದು ಹಾಕಿ, ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಹುಡುಗಿ ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಸಹೋದರಿ ಯಶಸ್ವಿಯಾದ ದಿನವೇ ನಾಗರ ಪಂಚಮಿ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ.
ಮತ್ತೊಂದು ಕಥೆಯಲ್ಲಿ ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ನಾಗರ ಹಾವು ಕಾರಣವಾಗಿದ್ದರಿಂದ, ಭೂಲೋಕದಲ್ಲಿ ಸರ್ಪಸಂಕುಲವನ್ನು ಸರ್ವನಾಶ ಮಾಡಲು ಸರ್ಪಯಜ್ಞವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮ ಮಾಡಲು ಆರಂಭಿಸಿದಾಗ ಸರ್ಪಗಳು ಒಂದೊಂದಾಗಿ ಬಂದು ಅಗ್ನಿಕುಂಡಕ್ಕೆ ಆಹುತಿಯಾಗ ತೊಡಗಿದವು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನಿಂದ ರಕ್ಷಿಸು ಎಂದು ಬೇಡಿಕೊಂಡವಂತೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸುವಂತೆ ಸೂಚಿಸುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸುತ್ತಾನೆ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನವೇ ನಾಗರ ಪಂಚಮಿಯಾಗಿದೆಯಂತೆ. ದೇವರಾದ ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವರತವೆಂಬ ಕಡಗೋಲಿಗೆ ಹಗ್ಗವಾಗಿ ನಾಗ ಕಾಣಿಸಿಕೊಳ್ಳುತ್ತಾನೆ.
ಒಂದು ದಿನ ಬಾಲಕ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದನು. ಆಗ ಅವನು ಆಟವಾಡುತ್ತಿದ್ದ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಆಗ ಕಾಳಿಯ ಎಂಬ ಹಾವು ಅವನ ಮೇಲೆ ಆಕ್ರಮಣ ಮಾಡಿತು. ಆಗ ಕೃಷ್ಣನು ಆ ಹಾವಿನ ವಿರುದ್ಧ ಸೆಣಸಿದನು. ಸ್ವಲ್ಪ ಸಮಯದ ನಂತರ ಆ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂಬ ಅರಿವಾಯಿತು. ಆಗ ಆ ಸರ್ಪ ಕೃಷ್ಣನಲ್ಲಿ ತನ್ನನ್ನು ಕೊಲ್ಲಬೇಡವೆಂದು ಬೇಡಿಕೊಂಡಿತು. ಈ ಮಾತಿಗೆ ಒಪ್ಪಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟನು. ಹೀಗೆ ನಾಗರ ಪಂಚಮಿಯನ್ನು ಕೃಷ್ಣನು ಕಾಳಿಯಾ ಎಂಬ ಭಯಾನಕ ಸರ್ಪವನ್ನು ಗೆದ್ದ ಸಂತೋಷವನ್ನು ನೆನಪಿಸಿಕೊಳ್ಳುವ ಸಲುವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಹಿಂದೆ ಸತ್ಯೇಶ್ವರಿ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರ ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರ ಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿ ಆಹಾರ ಸ್ವೀಕರಿಸುವುದಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಸಹೋದರನಿಗೆ ಉತ್ತಮ ಆಯುಷ್ಯ ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ದುಃಖ ಸಂಕಟಗಳಿಂದ ಪಾರಾಗಲಿ ಎನ್ನುವುದೂ ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರ ಪಂಚಮಿ ದಿನದಂದು ಪ್ರತಿಯೊಬ್ಬ ಸಹೋದರಿ ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಆತನ ರಕ್ಷಣೆಯಾಗುತ್ತದೆ ಎಂಬ ನಂಬಿಕೆ. ಹಾಗಾಗಿ ಇದು ರಕ್ಷಾ ಬಂಧನದಂತೆ ಅಣ್ಣ ತಂಗಿಯರ ಹಬ್ಬವೆಂದೇ ಆಚರಿಸಲಾಗುತ್ತದೆ.
ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ಶ್ರೀ ವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀ ವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ಶ್ರೀ ವಿಷ್ಣು ರಾಮನಾಗಿ, ಶೇಷನು ಲಕ್ಷ್ಮಣನಾಗಿ ಅವತಾರವೆತ್ತಿದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ನಾಗಗಳಲ್ಲಿ ಶ್ರೇಷ್ಠನಾದ ಅನಂತನೇ ನಾನು, ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ. ಈ ಹಬ್ಬವನ್ನು ಇದೇ ತಿಂಗಳಿನಲ್ಲಿ ಆಚರಿಸಲು ಹಿಂದಿರುವ ಪ್ರಮುಖ ಕಾರಣ, ಈ ಅವಧಿಯಲ್ಲಿ ಹಾವುಗಳು ಜನರಿಗೆ ಭಯ-ಭೀತಿ ಉಂಟುಮಾಡುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.
ಶಿವನು ಹಾವುಗಳಿಗೆ ತನ್ನ ಪ್ರೀತಿ ಮತ್ತು ಆಶಿರ್ವಾದಗಳನ್ನು ನೀಡಿದ್ದಾನಂತೆ. ಹಾಗಾಗಿ ಹಾವುಗಳನ್ನು ಪೂಜಿಸುವುದರಿಂದ ಶಿವನನ್ನು ಸಹ ಮೆಚ್ಚಿಸಬಹುದು ಎಂಬ ಭಾವನೆ ಇದೆ. ಶಿವನು ತನ್ನ ಉಗ್ರ ಕೋಪಕ್ಕೆ ಹೆಸರುವಾಸಿ. ಆತನಿಗೆ ಕೋಪ ಬಂದರೆ ಪ್ರಳಯವೇ ಆಗಿ ಹೋಗುತ್ತದೆ ಎಂಬ ಭಾವನೆ ಜನರಲ್ಲಿದೆ. ಕೇರಳದಲ್ಲಿ ಜನರು ಈ ದಿನದಂದು ನಾಗ ದೇವತೆಗಳನ್ನು ಪ್ರತಿಷ್ಠಾಪಿಸಿರುವ ದೇವಾಲಯಗಳಿಗೆ ಭೇಟಿ ನೀಡಿ, ಕಲ್ಲಿನ ಅಥವಾ ಲೋಹದ ನಾಗಗಳನ್ನು ಪೂಜಿಸುತ್ತಾರೆ. ಇದರಿಂದ ವರ್ಷಪೂರ್ತಿ ಅವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಹಾವುಗಳು ಕಚ್ಚುವುದಿಲ್ಲ ಎಂಬ ನಂಬಿಕೆ ಅವರಲ್ಲಿ ಬಲವಾಗಿದೆ. ಮದುವೆಯಾಗದ ಯುವತಿಯರು ನಾಗಗಳಿಗೆ ಹಾಲೆರೆಯುವುದರಿಂದ ಅವರು ಬಯಸಿದಂತಹ ಒಳ್ಳೆಯ ಗಂಡ ಅವರಿಗೆ ದೊರಕುತ್ತಾನೆ ಎಂಬ ನಂಬಿಕೆಯೂ ಇದೆ. ಇದರಿಂದ ಅವರ ಬಾಳು ಸುಖಮಯವಾಗುತ್ತದೆ. ಇನ್ನು ಮುತ್ತೈದೆಯರು ನಾಗಗಳಿಗೆ ಹಾಲೆರೆಯುವ ಹಿಂದೆ ಕುತೂಹಲಕಾರಿ ವಿಚಾರ ಅಡಗಿದೆ. ಅದೇನೆಂದರೆ ಹಾವುಗಳು ತಮಗೆ ನೋವನ್ನುಂಟು ಮಾಡಿದವರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಮತ್ತು ಅವರು ಇಲ್ಲದಿದ್ದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಛಲವನ್ನು ಹೊಂದಿರುತ್ತವೆಯಂತೆ. ಹಾಗಾಗಿ ಮುತ್ತೈದೆಯರು ನಾಗ ದೇವತೆಗಳನ್ನು ಪೂಜಿಸಿ, ತಮ್ಮ ಕುಟುಂಬ ಸದಸ್ಯರು ತಿಳಿದೊ ಅಥವಾ ತಿಳಿಯದೆಯೋ ಮಾಡಿದ ಅಪರಾಧವನ್ನು ಕ್ಷಮಿಸುವಂತೆ ಕೋರುತ್ತಾರೆ.
ಒಟ್ಟಿನಲ್ಲಿ ಕೋವಿಡ್ ಹಾವಳಿಯಿಂದಾಗಿ ನಮಗೆ ಮತ್ತು ಮನೆಯಲ್ಲಿ ಯಾರಿಗೂ ಕೋವಿಡ್ ಬರದೇ ಇರಲಪ್ಪ ನಾಗದೇವ ಎಂಬ ಹೊಸ ಬೇಡಿಕೆಯೊಂದಿಗೆ ಈ ಸಲದ ನಾಗರಪಂಚಮಿಯನ್ನು ಆಚರಿಸುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ