Belagavi NewsBelgaum NewsKannada NewsKarnataka NewsLatestPolitics

ಜೈನಮುನಿ ಹತ್ಯೆ ಕೇಸ್; ಪಾರದರ್ಶಕ ತನಿಖೆ ಅನುಮಾನ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ನಳೀನ್ ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ಸತ್ಯಶೋಧನಾ ಸಮಿತಿ ಬೆಳಗಾವಿಗೆ ಭೇಟಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗಲೂ ಹಲವು ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ, ಶೋಷಣೆ ನಡೆದಿತ್ತು. ಈಗ ಮತ್ತೆ ಅದೇ ಮರುಕಳಿಸುವ ಮುನ್ಸೂಚನೆ‌ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ತಿಳಿಸಿದ್ದಾರೆ.

ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕೊಲೆಗಡುಕರ ರಕ್ಷಣೆಗೆ ಕಾಂಗ್ರೆಸ್ ಸರಕಾರ ನಿಲ್ಲುತ್ತದೆ. ಪಾಕಿಸ್ತಾನ ಪರ ಘೋಷಣೆ ಕೂಗುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರಕಾರ ರಾಷ್ಟ್ರ ಭಕ್ತರ ಮೇಲೆ ಪ್ರಕರಣ ದಾಖಲಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎನ್ನುವುದು ಚರ್ಚೆಯ ವಿಷಯ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂಬ ಕಾರಣಕ್ಕೆ ಸತ್ಯಸಂಶೋಧನಾ ತಂಡ ಮಾಡಿಕೊಂಡು ಕ್ಷೇತ್ರಕ್ಕೆ ಹೋಗಿ ವರದಿ ತೆಗೆದುಕೊಂಡು ಬರುತ್ತೇವೆ ಎಂದರು‌.

ನಮ್ಮ ಸರಕಾರ ಇದ್ದಾಗ ಪೊಲೀಸ್ ಇಲಾಖೆಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಪೊಲೀಸ್ ಇಲಾಖೆ ಒತ್ತಡದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಇಂಥ ಪ್ರಕರಣಗಳು ಪಾರದರ್ಶಕವಾಗಿ ತನಿಖೆ ನಡೆಸುವುದು ಅನುಮಾನ ಇದೆ ಎಂದು ಹೇಳಿದರು.

ನಮಗೆ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ. ಆದರೆ ಪೊಲೀಸರನ್ನು ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಸರಕಾರದ ಮೇಲೆ ಇಲ್ಲ ಎಂದರು.

ವರ್ಗಾವಣೆ ದಂಧೆ ಅವ್ಯಾಹತವಾಗಿ ಬೆಳೆದಿದೆ. ಕಾಂಗ್ರೆಸ್ ಗೆ ಅಹಂ ಮದ ಸಾಕಷ್ಟು ಇದೆ. ನಮ್ಮ ಸರಕಾರಕ್ಕೆ 40% ಸರಕಾರ ಎಂದು ಆರೋಪ ಮಾಡುತ್ತಿದ್ದರು. ಈಗ ಅವರ ಸರಕಾರ 80% ಇದೆ. ವರ್ಗಾವಣೆ ದಂಧೆಯ ಅಂಗಡಿ ತೆರೆದುಕೊಂಡು ಕಾಂಗ್ರೆಸ್ ಕುಳಿತುಕೊಂಡಿದೆ. ರಾಜಕಾರಣ ವಿರೋಧ ಮಾಡುವುದು ರಾಜಕಾರಣ ಅಲ್ಲ. ಜನಪರ ಆಡಳಿತ ನಡೆಸಿದರೆ ಅಭಿನಂದಿಸುತ್ತೇವೆ ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button