ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರತಿ ಬಾರಿ ಸಚಿವಸಂಪುಟ ವಿಸ್ತರಣೆಯಾಗುವಾಗಲೂ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿರುತ್ತದೆ. ಆದರೆ ಅಂತಿಮ ಪಟ್ಟಿಯಲ್ಲಿ ಮಾತ್ರ ಅವರ ಹೆಸರಿರುವುದಿಲ್ಲ.
ಈ ಬಾರಿಯೂ ಸಂಭಾವ್ಯ ಸಚಿವರೆಂದು ಮಾಧ್ಯಮಗಳು ಪ್ರಕಟಿಸುತ್ತಿರುವ ಪಟ್ಟಿಯಲ್ಲಿ ಅಭಯ ಪಾಟೀಲ ಹೆಸರಿದೆ. ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಅಭಯ ಪಾಟೀಲ ಸೇರಲಿದ್ದಾರೆ ಎಂದು ಅನೇಕ ಮಾಧ್ಯಮಗಳು ಉಲ್ಲೇಖಿಸಿವೆ. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಹೆಸರಿರುತ್ತದೆ ಎಂದು ಅಭಯ ಪಾಟೀಲ ಸಚಿವರಾಗುವುದಕ್ಕೆ ಅರ್ಹರಾಗಿದ್ದಾರೆ ಎಂದೇ ಅರ್ಥ.
ಆದರೆ ಬೊಮ್ಮಾಯಿ ಸಚಿವ ಸಂಪುಟದ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಹೈಕಮಾಂಡ್ ಇನ್ನೂ ಸಂಪುಟ ರಚನೆಗೆ ಗ್ರೀನ್ ಸಿಗ್ನಲಿ ನೀಡಿಲ್ಲ.
ಅಭಯ ಪಾಟೀಲ ಒಳ್ಳೆಯ ಕೆಲಸಗಾರರೆನ್ನುವುದರಲ್ಲಿ ಯಾರದ್ದೂ ಭಿನ್ನಾಭಿಪ್ರಾಯವಿಲ್ಲ. ಅವರು ಮೊದಲು ಪ್ರತಿನಿಧಿಸುತ್ತಿದ್ದ ಉಚಗಾಂವ್ ಕ್ಷೇತ್ರವಾಗಲಿ, ಈಗಿನ ಬೆಳಗಾವಿ ದಕ್ಷಿಣ ಕ್ಷೇತ್ರವಾಗಲಿ ಸಾಕಷ್ಟು ಅಭಿವೃದ್ಧಿ ಕಂಡಿವೆ. ನಿರ್ಲಕ್ಷಿತವಾಗಿದ್ದ ಈ ಕ್ಷೇತ್ರಗಳನ್ನು ಅವರು ಮಾದರಿ ಕ್ಷೇತ್ರವಾಗಿಸುವತ್ತ ಕೊಂಡೊಯ್ದಿದ್ದಾರೆ. ಕೆಲವು ವಿನೂತನ ಯೋಜನೆಗಳ ಮೂಲಕ ಕ್ಷೇತ್ರ ರಾಜ್ಯದಲ್ಲೇ ಹೆಸರಾಗುವಂತೆ ಮಾಡಿದ್ದಿದೆ. ಅಂದಿನ ಉಚಗಾವಿ ಕ್ಷೇತ್ರದ ಹುಲಿಕವಿ ಮತ್ತು ಜಾಫರವಾಡಿ ಗ್ರಾಮಗಳನ್ನು ನಗರದ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದರು.
ಒಳ್ಳೆಯ ಕೆಲಸಗಾರ ಎನ್ನುವುದರ ಜೊತೆಗೆ ಜಾತಿ ಆಧಾರದ ಮೇಲೂ ಅವರನ್ನು ಸಂಭಾವ್ಯ ಸಚಿವರ ಪಟ್ಟಿಗೆ ಸೇರಿಸಲಾಗುತ್ತದೆ. ಜೈನ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕೆನ್ನುವ ವಿಚಾರ ಬಂದಾಗ ಅಭಯ ಪಾಟೀಲ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಪಕ್ಷ ನಿಷ್ಠೆ, ಅಭಿವೃದ್ಧಿ ಕೆಲಸವಷ್ಟೆ ನನಗೆ ಗೊತ್ತು. ಪಕ್ಷ, ಸಂಘ ಪರಿವಾರ ಏನು ಹೇಳುತ್ತದೆಯೋ ಅದನ್ನು ಮಾಡುವವನು ನಾನು. ಸಚಿವನನ್ನಾಗಿ ಮಾಡಲಿ, ಬಿಡಲಿ, ನಾನಂತೂ ಭಿನ್ನಮತೀಯನಾಗುವುದಿಲ್ಲ, ಪಕ್ಷ ಬಿಟ್ಟು ಹೋಗುವುದಿಲ್ಲ. ಇದು ಎಲ್ಲ ನಾಯಕರಿಗೂ ಗೊತ್ತಿದೆ. ಸಾಧನೆ, ಕೆಲಸ, ಪಕ್ಷ ನಿಷ್ಠೆ ನೋಡಿ ಸಚಿವಸ್ಥಾನ ನೀಡಬೇಕು. ಯಾರು ಕೆಲಸ ಮಾಡುತ್ತಾರೋ ಅವರಿಗೆ ಮನ್ನಣೆ ನೀಡಬೇಕು ಎನ್ನುತ್ತಾರೆ ಅಭಯ ಪಾಟೀಲ.
ಅಭಯ ಪಾಟೀಲ ಅವರನ್ನು ಈವರೆಗೂ ಸಂಪುಟಕ್ಕೆ ಗಂಭೀರವಾಗಿ ಪರಿಗಣಿಸದಿರುವುದಕ್ಕೆ ಅವರು ಹೇಗಿದ್ದರೂ ಸರಕಾರಕ್ಕೆ ಅಪಾಯ ತರುವವರಲ್ಲ ಎನ್ನುವುದೂ ಕಾರಣವಾಗಿರಬಹುದು.
ಈ ಬಾರಿಯಾದರೂ ಅಂತಿಮ ಪಟ್ಟಿಯಲ್ಲಿ ಅಭಯ ಪಾಟೀಲ ಹೆಸರಿರಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಬಹಿರಂಗ ಸಭೆಯಲ್ಲಿ ನೋವು ತೋಡಿಕೊಂಡ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಳಗಾವಿ ಬಸ್, ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ