*ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಸತೀಶ್ ಜಾರಕಿಹೊಳಿ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತೀವ್ರ ಕೂತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರ ಹೆಸರು ಘೋಷಣೆ ಮಾಡಲಾಗಿದ್ದು, ಎಲ್ಲ ಡಿಸಿಸಿ ಬ್ಯಾಂಕ್ ನಿರ್ದೇಶಕರು, ಸದಸ್ಯರು ಹಾಗೂ ಶಾಸಕರ ಸಲಹೆ ಪಡೆದು ಅಪ್ಪಾಸಾಹೇಬ ಕುಲಗುಡೆ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಕುರಿತು ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ನಡೆಸಿದ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ನಾಯಕರ ಜೊತೆಗೆ ಚರ್ಚೆ ಮಾಡಿ ನೂತನ ಅಧ್ಯಕ್ಷರಾಗಿ ರಾಯಬಾಗ ತಾಲೂಕಿನ ಅಪ್ಪಾಸಾಹೇಬ ಕುಲಗುಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.
ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ನನ್ನ ಬೆಂಬಲಿತರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದರು. ಈ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ಈಗ ಅಧ್ಯಕ್ಷರಾದವರು ಎಲ್ಲ ಬಣದ ಆತ್ಮೀಯರಾಗಿದ್ದಾರೆ. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ ಅವರೇ ಮುಂದುವರೆಯುತ್ತಾರೆ. ಎಲ್ಲ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಸದಸ್ಯರು, ಶಾಸಕರ ನಿರ್ಣಯ ಪಡೆದು ನೇಮಕ ಮಾಡಲಾಗಿದೆ ಎಂದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು: ಸತೀಶ್ ವಿಶ್ವಾಸ
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಇಂದು ಚುನಾವಣೆ ನಡೆಯುತ್ತಿದೆ. ಶಿಗ್ಗಾವಿ ಮತಕ್ಷೇತ್ರದಲ್ಲಿ 105 ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಅಪ್ಪಾಸಾಹೇಬ ಕುಲಗುಡೆ ಆಯ್ಕೆ
ಅಪ್ಪಾಸಾಹೇಬ್ ಕುಲಗೋಡೆ ಬೆಳಗಾವಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ರಾಯಭಾಗ ಮೂಲದ ಕಾಂಗ್ರೆಸ್ ನಾಯಕ ಅಪ್ಪಾಸಾಹೇಬ್ ಕುಲಗೊಡೆ ಅವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ್ ಅವರೇ ಮುಂದುವರೆಯಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ