ಶಾಂತಿಸಾಗರ ಶತಾಬ್ದಿ ಎಕ್ಸಪ್ರೆಸ್ ಎಂದು ನಾಮಕರಣ ಮಾಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕಳೆದ ೧೨೦ ವರ್ಷಗಳಿಂದ ಜೈನ ಸಮಾಜದ ಅಭಿವೃದ್ದಿಗಾಗಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಭಾರತ ಜೈನ ಸಭೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅಭಿಪ್ರಾಯಪಟ್ಟರು.
ರವಿವಾರ ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆದ ದಕ್ಷಿಣ ಭಾರತ ಜೈನ ಸಭೆಯ ೯೯ ನೇ ನೈಮಿತ್ತಿಕ ಅಧಿವೇಶನ ಮತ್ತು ವಿವಿಧ ಪುರಸ್ಕಾರಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಭಾರತ ಜೈನ ಸಭೆಯು ನಿಸ್ವಾರ್ಥ ಭಾವನೆಯಿಂದ ಸಮಾಜದ ಸೇವೆಯನ್ನು ಮಾಡುತ್ತ ಬಂದಿರುವ ಕಾರಣ ಇಂದು ಭಾರತದ ಅತ್ಯುತ್ತಮ ಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.
ಜೈನ ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಸಭೆಯು ಇಂದಿನ ಅಧ್ಯಕ್ಷರಾದ ರಾವಸಾಹೇಬ ಪಾಟೀಲ ಅವರ ಮಾರ್ಗದರ್ಶನದಲ್ಲಿ ಉತ್ತುಂಗ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ಮಾದರಿ ಸಮಾಜ
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಜೈನ ಸಮಾಜ ಎಲ್ಲ ಸಮಾಜದವರೊಂದಿಗೆ ಹೊಂದಿಕೊಂಡು ಹೋಗುವ ಮೂಲಕ ಇತರ ಸಮಾಜಗಳಿಗೆ ಮಾದರಿಯಾಗಿದೆ. ಜೈನ ಸಮಾಜ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವುದರಿಂದ ಸಂಸ್ಥೆಗಳು ಬೆಳೆಯಲು ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದ ಇನ್ನೋರ್ವ ಅತಿಥಿ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಒಗ್ಗೂಡಿಸುವ ಸಂಸ್ಥೆಯಾದ ದಕ್ಷಿಣ ಭಾರತ ಜೈನ ಸಭೆಯು ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರವಾಗಿ ಬೆಳೆಸಬೇಕಾಗಿದೆ.
ಇಂದು ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಸಹ ಹೆಮ್ಮೆಯ ವಿಷಯವಾಗಿದೆ. ಸಮಾಜದ ಸೇವೆ ಮಾಡುವಾಗ ಟೀಕೆ ಮಾಡುವವರು ಹೆಚ್ಚಾಗಿ ಇರುತ್ತಾರೆ. ಇದರ ಬಗ್ಗೆ ಹೆಚ್ಚಿನ ಗಮನ ಕೊಡದೆ ತಮ್ಮ ಕಾಯಕ ಸೇವೆಯಲ್ಲಿ ಮುಂದುವರೆಯಬೇಕೆಂದರು.
ಪುರಸ್ಕಾರ ವಿತರಣಾ
ಸಮಾರಂಭದಲ್ಲಿ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು.
ಡಾ.ಕರ್ಮವೀರ ಭಾವುರಾವ ಪಾಟೀಲ ಶೀಕ್ಷಣ ಸೇವಾ ಪುರಸ್ಕಾರಕ್ಕೆ ಭಾಜನರಾದ ಡಾ. ರಣಜೀತ ಹಿರಾಲಾಲ ಗಾಂಧಿ, ಬಿ.ಬಿ.ಪಾಟೀಲ ಸಮಾಜ ಸೇವಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾಧರ ಬಳವಂತ ಚೌಗುಲೆ, ಪದ್ಮಭೂಷಣ ಕ್ರಾಂತಿವೀರ ನಾಗನಾಥಅಣ್ಣಾ ನಾಯಕವಾಡಿ ಸಮಾಜ ಸೇವಾ ಪುರಸ್ಕಾರಕ್ಕೆ ಭಾಜನರಾದ ಘೋಡಗೇರಿಯ ಪ.ಪೂ.ಕಾಶೀನಾಥ ಮಹಾಸ್ವಾಮೀಜಿ ,
ಆಚಾರ್ಯ ಕುಂದಕುಂದ ಪ್ರಾಕೃತ ಗ್ರಂಥ ಸಂಶೋಧನ ಮತ್ತು ಲೇಖನ ಪುರಸ್ಕಾರಕ್ಕೆ ಭಾಜನರಾದ ಡಾ. ಶಾಂತಿಸಾಗರ ಶಿರಹಟ್ಟಿ , ಆಚಾರ್ಯ ವಿದ್ಯಾನಂದ ಸಾಹಿತ್ಯ (ಮರಾಠಿ) ಪುರಸ್ಕಾರಕ್ಕೆ ಭಾಜನರಾದ ವಿಜಯ ದಾದಾ ಆವಟಿ ಊರ್ಪ ವಿ.ದಾ.ಆವಟಿ , ಆಚಾರ್ಯ ಬಾಹುಬಲಿ ಸಾಹಿತ್ಯ ( ಕನ್ನಡ) ಪುರಸ್ಕಾರಕ್ಕೆ ಭಾಜನರಾದ ಬಾಳಣ್ಣಾ ಎಸ್.ಶೀಗೆಹಳ್ಳಿ,
ಡಾ. ಡಿ.ಎಸ್.ಬರಗಾಲೆ ಸಮಾಜಸೇವಾ ಪುರಸ್ಕಾರಕ್ಕೆ ಭಾಜನರಾದ ಸುವರ್ಣಾ ಸುಕುಮಾರ ಚೌಗುಲೆ , ಪ್ರಭಾತಕಾರ ವಾ.ರಾ.ಕೊಠಾರಿ ಆದರ್ಶ ಪರ್ತಕರ್ತ ಪುರಸ್ಕಾರಕ್ಕೆ ಭಾಜನರಾದ ಅನಿಲ ಜಿನಗೊಂಡಾ ಪಾಟೀಲ, ಪ್ರಾ.ಡಿ.ಎ.ಪಾಟೀಲ (ಸರ) ಆದರ್ಶ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾದ ಎಸ್.ವಿ.ಮುನ್ನೊಳಿ,
ಬಾಳ ಪಾಟೀಲ ಸೋಶಿಯಲ್ ಕಲ್ಚರಲ್ ಅವೇರ್ ನೆಸ್ ಆವಾರ್ಡ ಭಾಜನರಾದ ಸೋನಾಲಿ ಪ್ರಣಂದ ಚೌಗುಲೆ, ವೀರಾಚಾರ್ಯ ಬಾಳಾಸಾಹೇಬ ಕುಚನೂರೆ ಆದರ್ಶ ಯುವ ಪುರಸ್ಕಾರಕ್ಕೆ ಭಾಜನರಾದ ಅಭಯ ಪಾಟೀಲ ಕೊಲ್ಲಾಪುರ,
ಸುಲೋಚನಾ ಸಿದ್ದಪ್ಪ ಚೌಗುಲೆ ಆದರ್ಶ ಉದ್ಯೋಜಿಕಾ ಪುರಸ್ಕಾರಕ್ಕೆ ಭಾಜನರಾದ ಮೇಘಾ ಬಾಳಾಸೋ ಪಾಟೀಲ ಹಾಗೂ ಶ್ರೀ ಅರಿಹಂತ ಕ್ರೇಡಿಟ್ ಸೌಹಾರ್ದ ಸಹಕಾರಿ ಆದರ್ಶ ಸಂಸ್ಥೆ ಪುರಸ್ಕಾರಕ್ಕೆ ಭಾಜನರಾದ ಎ.ಪಿ.ಪಾಟೀಲ ಸರ್ವೋದಯ ಗ್ರಾಮೀಣ ಸಹಕಾರಿ ಪತ್ ಸಂಸ್ಥಾ ಮರ್ಯಾದಿತ ಹಸೂರ ಇವರಿಗೆ ಪುರಸ್ಕಾರಗಳನ್ನು ವಿತರಿಸಿ ಗೌರವಿಸಲಾಯಿತು.
ಶಾಂತಿಸಾಗರ ಶತಾಬ್ದಿ ಹೆಸರಿಡಿ
ಸಮಾರಂಭದಲ್ಲಿ ಡಾ. ರಣಜೀತ ಹಿರಾಲಾಲ ಗಾಂಧಿ ಅವರು ಭಾವುಸಾಹೇಬ ಗಾಂಧಿ ಪ್ರತಿಷ್ಠಾನದ ವತಿಯಿಂದ ದಕ್ಷಿಣ ಭಾರತ ಜೈನ ಸಭೆಗೆ ೧ ಲಕ್ಷ ರೂ. ದೇಣಿಗೆಯನ್ನು ನೀಡಿದರು. ಸಮಾರಂಭದಲ್ಲಿ ಸಭೆಯ ಮುಖ್ಯಮಹಾಮಂತ್ರಿ ಡಾ. ಅಜೀತ ಪಾಟೀಲ ಅತಿಥಿಗಳನ್ನು ಸ್ವಾಗತಿಸಿದರು.
ಚೇರಮನ್ ರಾವಸಾಹೇಬ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಭಾಲಚಂದ್ರ ಪಾಟೀಲ ಸಭೆಯ ಉದ್ದೇಶಗಳ ಬಗ್ಗೆ ಮಾತನಾಡಿದರು. ವ್ಹಾ. ಚೇರಮನ್ ದತ್ತಾ ಡೋರ್ಲೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಖಜಾಂಚಿ ಸಂಜಯ ಶೇಟೆ ವಂದಿಸಿದರು. ವೇದಿಕೆ ಮೇಲೆ ಟ್ರಸ್ಟಿ ಅಶೋಕ ಜೈನ, ಮಹಾಮಂತ್ರಿ ಬಾಳಾಸಾಹೇಬ ಪಾಟೀಲ, ವಿಭಾಗೀಯ ಉಪಾಧ್ಯಕ್ಷ ಸಿದ್ದಣ್ಣಾ ನಾಗನೂರ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ಕೀರ್ತಿಕುಮಾರ ಕಾಗವಾಡ, ಉಪಾಧ್ಯಕ್ಷ ಪುಷ್ಪಕ ಹನಮಣ್ಣವರ, ಕಾರ್ಯದರ್ಶಿ ಬಾಹುಬಲಿ ಸಾವಂತ ಮೊದಲಾದವರು ಉಪಸ್ಥಿತರಿದ್ದರು.
ಡಾ.ಎ.ಆರ್.ರೊಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರಗತಿ ಮತ್ತು ಜಿನವಿಜಯ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಹಾಗೂ ಬೆಳಗಾವಿ-ಬೆಂಗಳೂರು ಸುಪರ ಫಾಸ್ಟ್ ಹೊಸ ರೈಲ್ವೆಗೆ ಶಾಂತಿಸಾಗರ ಶತಾಬ್ದಿ ಎಕ್ಸಪ್ರೇಸ್ ಎಂದು ನಾಮಕರಣ ಮಾಡುವಂತೆ ಆಗ್ರಹಿಸುವ ಗೊತ್ತುವಳಿಯನ್ನು ಸ್ವೀಕರಿಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ