Kannada NewsKarnataka NewsLatest

*ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ; ಧನ್ಯವಾದ ಹೇಳಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಮ್ಮ ಮೆಟ್ರೋ ವಿಸ್ತೃತ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ.

ನಮ್ಮ ಮೆಟ್ರೋದ ಎರಡು ಮಾರ್ಗಗಳಾದ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟವರೆಗಿನ ವಿಸ್ತೃತ ಮಾರ್ಗವನ್ನು ಪ್ರಧನೈ ಮೋದಿ ಉದ್ಘಾಟಿಸಿದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರಿಗೆ ರಾಜ್ಯದ ಜನರ ಪರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರವು ಆಹ್ಲಾದಕರ ಹವಾಮಾನ, ಹಸಿರು ಉದ್ಯಾನವನಗಳು ಮತ್ತು ದೇಶದ ಐಟಿ ರಾಜಧಾನಿ ಎಂದು ಹೆಸರುವಾಸಿಯಾಗಿದೆ. ವಿಶ್ವದರ್ಜೆಯ ಮೆಟ್ರೋ ರೈಲು ವ್ಯವಸ್ಥೆಯನ್ನು ಸೇರಿಸುವುದರೊಂದಿಗೆ, ಕರ್ನಾಟಕದ ಜನತೆಗೆ ಹೆಮ್ಮೆಯ ವಿಷಯವಾಗಿದೆ.

ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಪ್ರಯತ್ನದಿಂದ ಪ್ರಮುಖ ಎರಡು ಮಾರ್ಗಗಳಾದ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ನಡುವಿನ 2.10 ಕಿ.ಮೀ.ಗಳ ಉದ್ದ ಮತ್ತು ಕೆಂಗೇರಿಯಿಂದ ಚಲ್ಲಘಟ್ಟವರೆಗಿನ 2.05 ಕಿ.ಮೀ.ಗಳ ಉದ್ದದ ಮಾರ್ಗವನ್ನು ದಿನಾಂಕ: 09.10.2023ರಂದು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಯಿತು.

ಈ ಎರಡು ಪ್ರಮುಖ ಮಾರ್ಗಗಳನ್ನು ತೆರೆಯುವುದರೊಂದಿಗೆ, ನಗರವು ಪೂರ್ವದಿಂದ ಪಶ್ಚಿಮಕ್ಕೆ ತಡೆರಹಿತ ಸಂಪರ್ಕ ಹೊಂದಿದೆ ಮತ್ತು ಮೆಟ್ರೋ ಜಾಲವನ್ನು 74 ಕಿ.ಮೀ.ಗಳಿಗೆ ವಿಸ್ತರಿಸಿದೆ. ಪ್ರತಿದಿನ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-1ರ 42.3 ಕಿ.ಮೀ.ಗಳ ಉದ್ದದ ಮಾರ್ಗವನ್ನು ರೂ. 14,133 ಕೋಟಿ ವೆಚ್ಚದಲ್ಲಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇತರ ಗಣ್ಯರೊಂದಿಗೆ ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಗಾಗಿ ಕರ್ನಾಟಕ ಸರ್ಕಾರವು ರೂ. 5630 ಕೋಟಿಗಳಷ್ಟು ವೆಚ್ಚ ಮಾಡಿದೆ.

ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-2ರಲ್ಲಿ 75.06 ಕಿ.ಮೀ.ಗಳ ಉದ್ದದ ಮಾರ್ಗ ಹೊಂದಿದ್ದು, ಸದರಿ ಯೋಜನೆಗೆ ರೂ. 30,695 ಕೋಟಿಗಳ ವೆಚ್ಚವಾಗಲಿದೆ. ಈಗಾಗಲೇ ಕಾಮಗಾರಿಗಳು ಭರದಿಂದ ನಿರ್ಮಾಣವಾಗುತ್ತಿದ್ದು, 32 ಕಿ.ಮೀ.ಗಳ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ ಎಂದು ನಿಮಗೆ ತಿಳಿಸಲು ನಾನು ಹರ್ಷಿಸುತ್ತೇನೆ. ಪ್ರಸ್ತುತ ಬೆಂಗಳೂರು ಮೆಟ್ರೋ ಜಾಲದ ಕಾರ್ಯಾಚರಣೆಯು 74 ಕಿ.ಮೀ.ಗಳಿಗೆ ಏರಿಕೆಯಾಗಿದೆ.

ನಾಗಸಂದ್ರದಿಂದ ಮಾದವಾರದವರೆಗಿನ ಉತ್ತರ ವಿಸ್ತರಣೆ 3.14 ಕಿ.ಮೀ.ಗಳ ಉದ್ದದ ಮಾರ್ಗವು ಮತ್ತು ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ.ಗಳ ಉದ್ದದ ಹೊಸ ಮಾರ್ಗಗಳು ಮುಕ್ತಾಯದ ಹಂತದಲ್ಲಿದ್ದು, ಏಪ್ರಿಲ್ 2024ರ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ.

ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ.ಗಳ ಉದ್ದದ ಹೊಸ ಮಾರ್ಗವನ್ನು ಮಾರ್ಚ್-2025ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗಗಳನ್ನು ಪೂರ್ಣಗೊಳಿಸುವುದರೊಂದಿಗೆ, ಕಾರ್ಯಾಚರಣೆಯ ಜಾಲವು 117 ಕಿ.ಮೀ.ಗಳಿಗೆ ವಿಸ್ತಾರಗೊಳ್ಳುತ್ತದೆ ಮತ್ತು 12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ.

ಹಂತ-2 ಯೋಜನೆಗಾಗಿ, ಕರ್ನಾಟಕ ಸರ್ಕಾರವು ರೂ. 11583.08 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಓಆರ್‌ಆರ್-ಏರ್‌ಪೋರ್ಟ್ ಮೆಟ್ರೋ ಎಂದು ಕರೆಯಲ್ಪಡುವ 58 ಕಿ.ಮೀ.ಗಳ ಉದ್ದದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ 2ಎ ಮತ್ತು 2ಬಿ ಯೋಜನೆಯನ್ನು ಅಂದಾಜು ರೂ. 14788.1 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕರ್ನಾಟಕ ಸರ್ಕಾರವು ಇದುವರೆಗೆ ರೂ. 4775.36 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಮೆಟ್ರೋ ಜಾಲವು 176 ಕಿ.ಮೀ.ಗಳು ಆಗಲಿದೆ ಮತ್ತು ಪ್ರತಿದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ.

ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬೆಂಗಳೂರು ಮೆಟ್ರೊ ರೈಲು ಯೋಜನೆಯ 3ನೇ ಹಂತದಲ್ಲಿ 45 ಕಿ.ಮೀ.ಗಳ ಉದ್ದದ ಮಾರ್ಗವನ್ನು ಅಂದಾಜು ರೂ. 15,611 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಡಿಪಿಆರ್‌ನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ನಾನು ಮಾನ್ಯ ಪ್ರಧಾನ ಮಂತ್ರಿಯವರನ್ನು ಕೋರುತ್ತೇನೆ.

ಅಲ್ಲದೆ, ಸರ್ಜಾಪುರದಿಂದ ಹೆಬ್ಬಾಳದವರೆಗಿನ 37 ಕಿ.ಮೀ.ಗಳ ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ಎಗೆ ಡಿಪಿಆರ್ ತಯಾರಿಸಲಾಗುತ್ತಿದೆ.

ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿದ್ದು, ಕರ್ನಾಟಕ ಸರ್ಕಾರವು 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಸಿಎಂಪಿ ಪ್ಲಾನ್‌ನಲ್ಲಿ ಅನುಮೋದಿಸಿದೆ. ಈಗಾಗಲೇ 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದೆ. ಇನ್ನುಳಿದ 60 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು.

ರಾಜ್ಯ ಸರ್ಕಾರವು ಗೌರವಾನ್ವಿತ ಪ್ರಧಾನ ಮಂತ್ರಿಗಳು, ಗೌರವಾನ್ವಿತ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಹಾಗೂ ಇನ್ನಿತರ ಸಚಿವರುಗಳು ಬೆಂಗಳೂರು ಅಭಿವೃದ್ಧಿಗೆ ಸಹಕರಿಸುತ್ತಿರುವುದಕ್ಕಾಗಿ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಸಾಧಾರಣ ಬಡ್ಡಿದರಗಳೊಂದಿಗೆ ದೀರ್ಘಾವಧಿ ಸಾಲವನ್ನು ಒದಗಿಸುವ ಮೂಲಕ ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ಬೆಂಬಲ ನೀಡಿದ ಎಲ್ಲಾ ವಿದೇಶೀ ಹಣಕಾಸು ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಈ ಯೋಜನೆಯಲ್ಲಿ ಕೆಲಸ ಮಾಡಿದ ಎಲ್ಲಾ ಗುತ್ತಿಗೆದಾರರಿಗೆ ಹಾಗೂ ಈ ಯೋಜನೆಗಳಲ್ಲಿ ತೊಡಗಿರುವ 14 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ವೇಗವಾದ, ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಗುರಿಗಳನ್ನು ಸಾಧಿಸುವ ಬಲವಾದ ಸಂಕಲ್ಪ ನಮ್ಮದು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button