Education

​*ಎ​ಲ್ಲರೂ ಕೈ ಜೋಡಿಸದಿದ್ದರೆ ಯೋಜನೆಗಳು ವಿಧಾನಸೌಧಕ್ಕೇ ಸೀಮಿತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಬಡಮಕ್ಕಳ ಶಿಕ್ಷಣಕ್ಕೆ ಕಾಂಗ್ರೆಸ್ ಸರ್ಕಾರಗಳಿಂದ ಹೆಚ್ಚು ಉತ್ತೇಜನ: ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ

 ಪ್ರಗತಿವಾಹಿನಿ ಸುದ್ದಿ: ಸಮಾಜ, ರಾಜ್ಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ಸರ್ಕಾರಿ ಶಾಲೆಗಳ ಕೊಡುಗೆ ಅಪಾರ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬ​ರೂ ಕೈ​ ಜೋಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಬೆಳಗಾವಿಯ ಸುವರ್ಣ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಲೋಗೊ ಅನಾವರಣ ಮತ್ತು ದಾನಿಗಳಿಗೆ ಗೌರವ ಸಮರ್ಪಣೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಚಿವರು ಮಾತನಾಡಿದರು. 

ಸರ್ಕಾರದ ಬಹುನಿರೀಕ್ಷಿತ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಕನಸಿನ ಯೋಜನೆಯಾದ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಸರ್ಕಾರ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡು ಈ ಯೋಜನೆ ರೂಪಿಸಿದೆ​. ನಾನೂ ಸಹ ಯೋಜನೆಗೆ ಕೈ ಜೊಡಿಸುತ್ತೇನೆ. ಈಗಾಗಲೆ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಶೈಕ್ಷಣಿಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಅಧಿಕಾರಿಗಳು, ಜನರ​ ಸಹಕಾರದಿಂದ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಇಲ್ಲವಾದರೆ ಈ ಯೋಜನೆಗಳು ರೂಪುಗೊಂಡ ವಿಧಾನಸೌಧದ ಮೂರನೇ ಮಹಡಿಗಷ್ಟೇ ​ಸ​ೀಮಿತವಾಗುತ್ತವೆ. ಕರ್ನಾಟಕಕ್ಕೆ ಬಸವಣ್ಣನವರನ್ನು ಸಾಂಸ್ಕೃತಿ​ಕ ರಾಯಭಾರಿ ಅಂತ ಘೋಷಿಸಿದ್ದೇವೆ.​ ಬಸವಣ್ಣನವ ತತ್ವದಂತೆ ಬೇರೆಯವರ ಕಡೆಗೆ ನಾವು ಬೊಟ್ಟು ಮಾಡುವ ಮೊದಲು ನಾವು ಮಾಡಿ ತೋರಿಸಬೇಕು ಎಂದರು.

​ಮಕ್ಕಳಲ್ಲಿ ರಾಜಕಾರಣಿಗಳ ಕುರಿತು ಇರುವ ಭಾವನೆ ಬದಲಾಗಬೇಕು. ಎಲ್ಲರ ಉದ್ದೇಶವೂ ಸಮಾಜ ಸೇವೆಯೇ ಆಗಿರುತ್ತದೆ. ಮಕ್ಕಳ ಭವಿಷ್ಯ, ರಾಜ್ಯದ ಭವಿಷ್ಯ, ದೇಶದ ಭವಿಷ್ಯದ ದೃಷ್ಟಿಯಿಂದಲೇ ರಾಜಕಾರಣಿಗಳೂ ಕೆಲಸ ಮಾಡುತ್ತಾರೆ.  ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬುದೇ ಸರ್ಕಾರದ ಆಶಯವಾಗಿದೆ. ಎಲ್ಲ ಸರಕಾರಗಳೂ ಉತ್ತಮ ಕೆಲಸ ಮಾಡಿದರೂ ಕೆಲವೊಮ್ಮೆ ಅವು ಜಾರಿಯಾಗುವ ಸಂದರ್ಭದಲ್ಲಿ ಲೋಪದೋಷಗಳಾಗುತ್ತವೆ ಎಂದು ಸಚಿವರು ಹೇಳಿದರು.

ಇಂದು ಶ್ರೀಮಂತರ ಮಕ್ಕಳಿಗಷ್ಟೇ ಶಿಕ್ಷಣ ಮೀಸಲಾಗಿಲ್ಲ, ಕ್ಷೀರಭಾಗ್ಯ, ಶೂ ಭಾಗ್ಯ, ಅಕ್ಷರ ದಾಸೋಹ ಅಂತ ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ​ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕೆ ಹಿಂದಿನಿಂದಲೂ ಉತ್ತೇಜನ ನೀಡುತ್ತಿದೆ. ಕಾಲಕ್ಕೆ ತಕ್ಕಂತೆ  ಸರ್ಕಾರಿ ಶಾಲೆಗಳಲ್ಲೂ ಕಲಿಕಾ ವಿಧಾನ, ಪಠ್ಯಗಳ ಪರಿಷ್ಕರಣೆಯಾಗುತ್ತಿದ್ದು, ಶಾಲಾ ಮಟ್ಟದಲ್ಲೆ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

​ ಹೆಚ್ಚುವರಿ ಶಾಲೆಗಳಿಗೆ ಮನವಿ 

ಬೆಳಗಾವಿ ಗ್ರಾಮೀಣ ​ಭಾಗದಲ್ಲಿ ​ಪ್ರೌಢ ಶಾಲೆಗಳ ಕೊರತೆ ಕಾಡುತ್ತಿದ್ದು, ಹೆಚ್ಚುವರಿಯಾಗಿ ಹೈಸ್ಕೂಲ್ ಆರಂಭಿಸಲು ಅನುಮತಿ ನೀಡಬೇಕು ಎಂದು ಸಚಿವರು ವೇದಿಕೆಯಲ್ಲಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಮಾಡಿದರು. 

ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಜಿಲ್ಲೆಯ ಶಾಸಕರುಗಳಾದ ಮಹಾಂತೇಶ ಕೌಜಲಗಿ, ವಿಶ್ವಾಸ್ ವೈದ್ಯ,  ಬಾಬಾಸಾಹೇಬ್ ಪಾಟೀಲ, ಆಸೀಫ್ ಸೇಠ್, ವಿಠ್ಠಲ ಹಲಗೇಕರ್, ಮಳವಳ್ಳಿ ಶಾಸಕರಾದ ನರೇಂದ್ರ ಸ್ವಾಮಿ, ಬ್ಯಾಡಗಿ ಶಾಸಕರಾದ ಬಸವರಾಜ ಶಿವಣ್ಣವರ, ರಾಜ್ಯ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ,  ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್,​ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ ಶಿಂಧೆ, ಶಾಲಾ ಶಿಕ್ಷಣ ಇಲಾಖೆಯ​ ಪ್ರಧಾನ ಕಾರ್ಯದರ್ಶಿ​ ರಿತೇಶ್ ಕುಮಾರ್,​ ಆಯುಕ್ತರಾದ ಬಿ.ಕಾವೇರಿ,​ ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ​, ಶಿಕ್ಷಣ ಇಲಾಖೆಯ ಅಧಿಕಾರಿಗ​ಳಾದ ಜಯಶ್ರೀ ಶಿಂತ್ರಿ, ಲೀಲಾವತಿ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button