ಪ್ರಗತಿವಾಹಿನಿ ಸುದ್ದಿ; ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಶುಕ್ರವಾರ ಹಿಜಾಬ್-ಕೇಸರಿ ಶಾಲು ವಿವಾದ ಪ್ರತಿಧ್ವನಿಸಿದ್ದು, ವಿಷಯದ ಗಂಭೀರತೆಯನ್ನು ಅರಿತ ಕಾಲೇಜಿನ ಆಡಳಿತ ಮಂಡಳಿ ಶುಕ್ರವಾರ ಕಾಲೇಜಿಗೆ ರಜೆ ಘೋಷಿಸುವ ಮೂಲಕ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದಿದೆ.
ಪ್ರಕರಣದ ವಿವರ
ನಂದಗಡ ಕಾಲೇಜಿನಲ್ಲಿ ಪಿಯು ಓದುತ್ತಿರುವ ಒಂದು ಕೋಮಿಗೆ ಸೇರಿದ ವಿದ್ಯಾರ್ಥಿಗಳು ಶುಕ್ರವಾರ ಕೇಸರಿ ಶಾಲು ಧರಿಸಿ ಕಾಲೇಜು ಪ್ರವೇಶಿಸಿದ್ದು, ಮತ್ತೊಂದು ಕೋಮಿಗೆ ಸೇರಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದರು. ವಿಷಯ ಅರಿತ ಕಾಲೇಜಿನ ಪ್ರಾಂಶುಪಾಲರು ಎರಡೂ ಕೋಮಿನ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗಿ ಸಭೆ ನಡೆಸಿದರು. ಸಧ್ಯ ನ್ಯಾಯಾಲಯ ಮತ್ತು ಸರ್ಕಾರದ ಆದೇಶದನ್ವಯ ಕಾಲೇಜಿನಲ್ಲಿ ಸಮವಸ್ತ್ರ ಹೊರತುಪಡಿಸಿ ಉಳಿದ ಯಾವುದೇ ಧರ್ಮವನ್ನು ಪ್ರತಿನಿಧಿಸುವ ಉಡುಪುಗಳಿಗೆ ಅವಕಾಶ ಇಲ್ಲ. ಹೀಗಾಗಿ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಪ್ರಾಂಶುಪಾಲರ ಮನವರಿಕೆಗೆ ಬೆಲೆಕೊಡದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಧಾರ್ಮಿಕ ದಿರಿಸುಗಳನ್ನು ಧರಿಸಿಯೇ ಪಾಠ ಕೇಳುತ್ತೇವೆ ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರಾಂಶುಪಾಲರು ಅವಕಾಶ ನೀಡುವುದಿಲ್ಲ ಎಂದರು. ಆಗ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿ ಕಾಲೇಜು ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ವಿದ್ಯಾರ್ಥಿಗಳ ಪ್ರತಿಭಟನೆಯ ವಿಷಯ ತಿಳಿದ ಪಾಲಕರು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಜೊತೆ ಚರ್ಚೆ ನಡೆಸಿದರು.
ಕಾಲೇಜಿನಲ್ಲಿ ಮುಂಜಾನೆಯಿಂದ ನಡೆದ ಬೆಳವಣಿಗೆಗಳ ವಿಷಯವನ್ನು ಪ್ರಾಂಶುಪಾಲರು ಕಾಲೇಜಿನ ಆಡಳಿತ ಮಂಡಳಿಗೆ ಮುಟ್ಟಿಸಿದರು. ಆಡಳಿತ ಮಂಡಳಿಯವರು ಮಧ್ಯಾಹ್ನ ಕಾಲೇಜಿನಲ್ಲಿ ಪಾಲಕರ ಸಭೆ ನಡೆಸಿ ನ್ಯಾಯಾಲಯದ ಆದೇಶದ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿದರು. ಎರಡೂ ಕೋಮಿನವರು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದ ಬಳಿಕ ಪಾಲಕರು ತಮ್ಮ ಮಕ್ಕಳಿಗೆ ಸಮವಸ್ತ್ರ ಹೊರತುಪಡಿಸಿ ಉಳಿದ ಬಟ್ಟೆ ಧರಿಸದಂತೆ ತಿಳುವಳಿಕೆ ಹೇಳುವುದಾಗಿ ಆಡಳಿತ ಮಂಡಳಿಗೆ ಭರವಸೆ ನೀಡಿದ ಬಳಿಕ ಸಭೆ ಮುಕ್ತಾಯಗೊಂಡಿತು.
ಕಾಲೇಜಿನಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ತಡವಾಗಿ ವಿಷಯ ತಿಳಿದ ನಂದಗಡ ಠಾಣೆಯ ಕೆಲ ಸಿಬ್ಬಂದಿ ಕಾಲೇಜಿಗೆ ಬಂದು ಗುಂಪು ಚದುರಿಸಲು ಪ್ರಯತ್ನ ಪಟ್ಟರು. ನಂದಗಡದಲ್ಲಿ ಇಷ್ಟೊಂದು ಮಟ್ಟದ ಘಟನೆ ನಡೆದರೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ ವಹಿಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಂಜಿ ಕಾಲೇಜಿನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಉಪನ್ಯಾಸಕರು, ನಂದಗಡ ಗ್ರಾಮಸ್ಥರು, ಪಾಲಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ