Belagavi NewsBelgaum NewsKannada NewsKarnataka NewsNationalPolitics

*ಹಾಲಸಿದ್ಧನಾಥ ಕಾರ್ಖಾನೆಯಿಂದ ರೈತರಿಗೆ ನ್ಯಾನೋ ತಂತ್ರಜ್ಞಾನ ಸೌಲಭ್ಯಗಳನ್ನು ಕಲ್ಪಿಸಲಾಗುವುದು: ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ (ಬಹುರಾಜ್ಯ) ಯು ವಿವಿಧ ಹಂತಗಳಲ್ಲಿ ನ್ಯಾನೊ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದ್ದು, ಇದರಿಂದ ರೈತರು ಕಡಿಮೆ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಉತ್ಪಾದಿಸಬಹುದು. ಅಲ್ಲದೆ ರೈತರಿಗೆ ಹಾಗೂ ಸದಸ್ಯರಿಗೆ ವಿವಿಧ ನ್ಯಾನೋ ತಂತ್ರಜ್ಞಾನದ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ವೇದಗಂಗಾ ರೈತ ಉತ್ಪಾದಕರ ಒಕ್ಕೂಟ ಹಾಗೂ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಡ್ರೋನ್ ಮೂಲಕ ಔಷಧ ಸಿಂಪಡಣೆ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕಾರ್ಖಾನೆಗಳು ಹಾಗೂ ರೈತರ ಅಭಿವೃದ್ಧಿಗೆ ಎಲ್ಲ ಹಂತಗಳಲ್ಲಿ ಶ್ರಮಿಸಲಾಗುತ್ತಿದೆ. ಕಾರ್ಖಾನೆಯ ಆರ್ಥಿಕ ಸ್ಥಿತಿಯು ಸರಿ ಇಲ್ಲದಿದ್ದರೂ, ಕಾರ್ಖಾನೆಯು ಎಥೆನಾಲ್ ಮೂಲಕ ವರ್ಷವಿಡೀ ಆದಾಯದ ಮೂಲವನ್ನು ಸೃಷ್ಟಿಸಿದೆ. ಕಾರ್ಮಿಕ ವೇತನ ಸೇರಿದಂತೆ ನಿಯಮಿತ ವೆಚ್ಚಗಳನ್ನು ಅದರ ಮೂಲಕ ಸಂದಾಯವಾಗುತ್ತವೆ. ಮುಂಬರುವ ಹಂಗಾಮಿನಲ್ಲಿ ಪ್ರತಿದಿನ 8500 ಟನ್ ಕಬ್ಬು ಅರೆಯುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಕಬ್ಬು ಉತ್ಪಾದನೆ ಹೆಚ್ಚಿಸಲು ಸದಸ್ಯರಿಗೆ ಬಡ್ಡಿ ರಹಿತ ರಸಗೊಬ್ಬರ, ಬೇಸಾಯಕ್ಕೆ ಹತ್ತು ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಇಫ್ಕೋ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ರಸಗೊಬ್ಬರ ಹಾಗೂ ಔಷಧಗಳನ್ನು ನೀಡಲಾಗುತ್ತಿದೆ. ನ್ಯಾನೊ ತಂತ್ರಜ್ಞಾನ ಅಳವಡಿಕೆಯ ಆರಂಭದಲ್ಲಿ ನ್ಯಾನೊ ಯೂರಿಯಾ, ನ್ಯಾನೊ ಡಿಎಪಿ ನೀಡುತ್ತಿದ್ದೇವೆ. ರೈತರ ಬಳಿ ತೆರಳಿ ಅವರಿಗೆ ವಿಶೇಷ ಮಾರ್ಗದರ್ಶನ ನೀಡಲು ವಿಶೇಷ ಅಧಿಕಾರಿಯಾಗಿ ವಿಶ್ವಜಿತ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.

ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಮಾತನಾಡಿ, ಕಾರ್ಖಾನೆಯ ಇತಿಹಾಸದಲ್ಲಿ ಪ್ರಥಮ ಬಾರಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರಿಂದಾಗಿ ಕಾರ್ಮಿಕರು ಮತ್ತು ರೈತರಿಗೆ ಪ್ರಥಮ ಬಾರಿಗೆ ಹಲವು ಸೌಲಭ್ಯಗಳು ಆರಂಭಗೊಂಡಿವೆ. ಇನ್ನು ಮುಂದೆ ಡ್ರೋನ್ ಯಂತ್ರಗಳ ಮೂಲಕ ಔಷಧ ಸಿಂಪಡಿಸುವ ಸೇವೆ ರಿಯಾಯಿತಿ ದರದಲ್ಲಿ ದೊರೆಯಲಿದೆ. 

ಕೃಷಿ ಅಧಿಕಾರಿ ಮಂಜುನಾಥ ಕಿತ್ತೂರು ಮಾತನಾಡಿ, ಸಕ್ಕರೆ ಕಾರ್ಖಾನೆ, ವೇದಗಂಗಾ ಸಂಘದ ವತಿಯಿಂದ ನಡೆಯುವ ಕೃಷಿ ಚಟುವಟಿಕೆಗಳಿಗೆ ಇಲಾಖೆ ಸದಾ ಬೆಂಬಲ ನೀಡಲಿದೆ.

ಉಪಾಧ್ಯಕ್ಷ ಪವನ ಪಾಟೀಲ, ಕೃಷಿ ಅಧಿಕಾರಿ ನಾಮದೇವ ಬನ್ನೆ, ಪ್ರವೀಣ ಮಾನೆ ಮಾತನಾಡಿದರು. ಸಿದ್ದು ನರಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಡ್ರೋನ್‌ಗಳಿಂದ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆ ನಡೆಯಿತು. 

ಕಾರ್ಯಕ್ರಮದಲ್ಲಿ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ಸಮಿತ ಸಾಸನೆ, ಮಹಾಲಿಂಗ ಕೋಠಿವಾಲೆ, ಪ್ರಕಾಶ ಶಿಂಧೆ, ಜಯವಂತ ಭಾಟಲೆ, ರಾಜು ಗುಂಡೇಶಾ, ರಮೇಶ ಪಾಟೀಲ, ರಾವಸಾಹೇಬ ಫರಾಳೆ, ಶರದ ಜಂಗಟೆ, ಸುಹಾಸ ಗೂಗೆ, ಬಾಳಾಸಾಹೇಬ ಕದಮ ಹಾಗೂ ಗಣ್ಯರು ಉಪಸ್ಥಿತರಿದ್ದರು. ಶ್ರೀಕಾಂತ ಬನ್ನೆ ಸ್ವಾಗತಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button