ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ‘ಜೊಲ್ಲೆ ಗ್ರುಪ್ ವತಿಯಿಂದ ಮಕರ ಸಂಕ್ರಮಣದ ಅಂಗವಾಗಿ ಇದೆ ಜ.23 ಮತ್ತು 24ರಂದು ಸ್ಥಳೀಯ ಜೊಲ್ಲೆ ಎಜುಕೇಶನ್ ಕಾಂಪ್ಲೇಕ್ಸ್ (ನಾಗನೂರ) ನಲ್ಲಿ ‘ನಿಪ್ಪಾಣಿ ಅಂತರರಾಷ್ಟ್ರೀಯ ಗಾಳಿಪಟ ಮಹೋತ್ಸವ’ವನ್ನು ಆಯೋಜಿಸಲಾಗಿದೆ’ ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಜಯವಂತ ಭಾಟಲೆ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಸ್ಥಳೀಯ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜ.23ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ಜ.24ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗಾಳಿಪಟ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸುಮಾರು 45 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನಮ್ಮ ರಾಜ್ಯ ಸೇರಿದಂತೆ ರಾಜಸ್ಥಾನ, ಓರಿಸ್ಸಾ, ಮೇಘಾಲಯ, ಪಂಜಾಬ, ಗುಜರಾತ, ಮಹಾರಾಷ್ಟ್ರ, ಮೊದಲಾದ ರಾಜ್ಯಗಳಲ್ಲಿಯ ಹಾಗೂ ಇಂಗ್ಲೆಂಡ್, ಸ್ಲೋವೇನಿಯಾ, ನೆದರಲ್ಯಾಂಡ್, ಗ್ರೀಸ್, ಸ್ವಿಟ್ಜರಲ್ಯಾಂಡ್, ಮೊದಲಾದ ವಿದೇಶಗಳಿಂದ ವಿವಿಧ ಬಗೆಯ ಗಾಳಿಪಟ ಹಾರಿಸಲು ಕ್ರೀಡಾಪಟುಗಳು ಆಗಮಿಸಲಿದ್ದಾರೆ.
ಈ ಅಂತರರಾಷ್ಟ್ರೀಯ ಗಾಳಿಪಟ ಸ್ಪರ್ಧೆಯಲ್ಲಿ ಕ್ರೀಡಾಪಟುಗಳು ಸುಮಾರು 50 ಸಾವಿರ ರೂ.ಗಳಿಬ್ದ 2.5 ಲಕ್ಷ ರೂ.ವರೆಗಿನ ಗಾಳಿಪಟ ಉಪಯೋಗಿಸಲಿದ್ದಾರೆ. ಜ.23ರಂದು ರಾತ್ರಿ ಕೆಲ ಗಾಳಿಪಟಗಳು ಎಲ್‌ಇಡಿನಲ್ಲಿ ಮಿಂಚಲಿವೆ’ ಎಂದರು.
ಜೊಲ್ಲೆ ಗ್ರುಪ್‌ನ ಇವೆಂಟ್ ನಿರ್ದೇಶಕ ವಿಜಯ ರಾವುತ ಮಾತನಾಡಿ ‘ಕಳೆದ ಸಾಲಿನಲ್ಲಿಯೂ ಜೊಲ್ಲೆ ಗ್ರುಪ್‌ದಿಂದ ಅಂತರರಾಷ್ಟ್ರೀಯ ಗಾಳಿಪಟ ಮಹೋತ್ಸವ ಆಯೋಜಿಸಲಾಗಿತ್ತು. ಅದಕ್ಕೆ ಅದ್ದೂರಿಯಾಗಿ ಪ್ರೋತ್ಸಾಹನ ದೊರೆತಿತ್ತು. ಇನ್ನುಮುಂದೆ ಪ್ರತಿ ವರ್ಷ ಜೊಲ್ಲೆ ಗ್ರುಪ್‌ದಿಂದ ಗಾಳಿಪಟ ಉತ್ಸವ ಆಯೋಜಿಸಲಾಗುವುದು. ಈ ಬಾರಿಯೂ ಗಾಳಿಪಟ ಉತ್ಸವದಲ್ಲಿ ಆಹಾರದ ಮಳಿಗೆಗಳು ಇರಲಿವೆ.
ಪೆಂಡಾಲ್ ಹಾಕಲಾಗುವುದು ಹಾಗೂ ಗ್ರೀನ್ ಮ್ಯಾಟ್ ಬಳಸಲಾಗುವುದು. ಗಾಳಿಪಟ ಆಸಕ್ತರು ಹಾಗೂ ಸ್ಥಳೀಯರು ಈ ವಿಶೇಷವಾದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಮಹೋತ್ಸವವನ್ನು ಯಶಸ್ವಿಗೊಳಸಿಬೇಕು’ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಸಂಚಾಲಕ ರಾಜೇಂದ್ರ ಗುಂದೇಶಾ, ಪ್ರಣವ ಮಾನವಿ, ದೀಪಕ ಪಾಟೀಲ, ವಿಜಯ ಟವಳೆ, ಬಂಡಾ ಘೋರ್ಪಡೆ, ಪಿಂಟು ಬಗಾಡೆ, ಪ್ರಶಾಂತ ಕೇಸ್ತೆ, ಪ್ರಸಾದ ಔಂಧಕರ, ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ