ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಹಾಗೂ ಯುಜಿಸಿ (ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ದ ಮೇಲೆ ಒತ್ತಡ ತಂದು ಅನೇಕ ಲೋಪದೋಷಗಳನ್ನು ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಲು ನಾವೆಲ್ಲರೂ ಸೇರಿ ಒತ್ತಡ ಹೇರಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ನಡೆದ ರಾಜ್ಯ ಉನ್ನತ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಲೋಪಗಳಿದ್ದವು. ನಮ್ಮ ಕರ್ನಾಟಕ ಸರ್ಕಾರ ಧೈರ್ಯದಿಂದ ಮುನ್ನುಗ್ಗಿ ಒಂದಷ್ಟು ತಿದ್ದುಪಡಿ ಮಾಡುವ ತೀರ್ಮಾನಗಳನ್ನು ತೆಗೆದುಕೊಂಡಿದೆ” ಎಂದರು.
“ಈ ಸಮ್ಮೇಳನದಿಂದ ಹೊರ ಬರುವ ವಿಚಾರಗಳು ಕೇಂದ್ರ ಸರ್ಕಾರಕ್ಕೆ ಮುಟ್ಟಬೇಕು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಶೈಕ್ಷಣಿಕ ಗುಣಮಟ್ಟ ಅತ್ಯುತ್ತಮವಾಗಿದೆ. ನಾವು ಸೌಲಭ್ಯ ಕೊಡುವುದರಲ್ಲೂ ಮುಂದಿದ್ದೇವೆ. ನನಗೆ ನೆನಪಿರುವಂತೆ ಕಳೆದ 30 ವರ್ಷಗಳ ಹಿಂದೆಯೇ ಉತ್ತರ ಭಾರತದ ವಿದ್ಯಾರ್ಥಿಗಳು ದಕ್ಷಿಣ ಭಾರತ ರಾಜ್ಯಗಳಿಗೆ ಉತ್ತಮ ಶಿಕ್ಷಣ ಪಡೆಯುವ ಸಲುವಾಗಿ ವಲಸೆ ಬರುತ್ತಿದ್ದುದ್ದನ್ನು ಗಮನಿಸಿದ್ದೇನೆ” ಎಂದರು.
“ಕರ್ನಾಟಕದಲ್ಲಿ ಸುಮಾರು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು, 250 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶಗಳು ಹೆಚ್ಚು ಕಾಲೇಜುಗಳನ್ನು ಹೊಂದಿವೆ. ಆದರೆ ನಮ್ಮ ಶಿಕ್ಷಣ ನೀತಿಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಿಗೆ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಗಣತಂತ್ರ ವ್ಯವಸ್ಥೆ ಕಾಪಾಡಬೇಕಿದೆ
“ನಮ್ಮ ಗಣತಂತ್ರ ವ್ಯವಸ್ಥೆ ವಿನೂತನವಾದುದು. ನಮ್ಮ ಸಂವಿಧಾನ ಹಲವಾರು ಹಕ್ಕುಗಳನ್ನು ನಮಗೆ ನೀಡಿದೆ. ಭಾಷೆಗಳ ವಿಚಾರದಲ್ಲಿಯೂ ನಾವು ವೈವಿದ್ಯತೆ ಹೊಂದಿದ್ದೇವೆ. ನಾವುಗಳು ರಾಜ್ಯಗಳ ಮಟ್ಟದಲ್ಲಿ ಸ್ಪರ್ಧಿಸುವುದು ಉತ್ತಮವಾದುದಲ್ಲ. ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಿದೆ. ಈ ಕಾರಣಕ್ಕೆ ವ್ಯವಸ್ಥೆಯನ್ನು ನಾವುಗಳೆಲ್ಲ ಸೇರಿ ಬದಲಾಯಿಸಬೇಕಿದೆ. ಕಳೆದ 30 ವರ್ಷಗಳಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯೇ ಬದಲಾಗಿದೆ. ಜೊತೆಗೆ ಸಾಕಷ್ಟು ಬದಲಾವಣೆಗಳನ್ನೂ ನಾವು ನೋಡಿದ್ದೇವೆ. ಎಐ ತಂತ್ರಜ್ಞಾನ ಹೊಸದಾಗಿ ಬೆರಗು ಹುಟ್ಟಿಸಿದೆ. ಸವಾಲುಗಳನ್ನು ಇಟ್ಟುಕೊಂಡು ಯುವಜನತೆಗೆ ಅವಕಾಶ ಸೃಷ್ಟಿಸುವುದು ನಮ್ಮೆಲ್ಲರ ಗುರಿಯಾಗಬೇಕು” ಎಂದು ಹೇಳಿದರು.
“ವಿಶ್ವವಿದ್ಯಾನಿಲಯಗಳ ಆಡಳಿತ ವಿಚಾರದಲ್ಲಿಯೂ ನಾವು ಸಾಕಷ್ಟು ಸುಧಾರಣೆ ಮಾಡಬೇಕಾಗಿದೆ. ಈ ವಿಚಾರಗಳ ಬಗ್ಗೆಯೂ ನಾವು ಬೆಳಕು ಚೆಲ್ಲಬೇಕಾಗಿದೆ. ಏಕೆಂದರೆ ಕುಲಪತಿಗಳ ನೇಮಕ ಸೇರಿದಂತೆ ಸಾಕಷ್ಟು ವಿಚಾರಗಳು ನಮ್ಮ ಮುಂದಿವೆ. ಕುಲಪತಿಗಳು ಹಾಗೂ ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿಗೆ ಕನಿಷ್ಠ ಮಾನದಂಡಗಳು, ಅರ್ಹತೆಗಳನ್ನು ನಿಗಧಿ ಮಾಡಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಉನ್ನತ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಬೇಕಿದೆ. ಅನೇಕ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಭಾರತೀಯರು ಅತ್ಯುತ್ತಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈ ಸಮ್ಮೇಳನದ ಮೂಲಕ ಜಾಗತಿಕ ಮಟ್ಟಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಬೆಳೆಯಲು ಅನೇಕ ತಜ್ಞರ ಸಲಹೆ ಉಪಯುಕ್ತವಾಗುತ್ತವೆ” ಎಂದರು.
“ಬೆಂಗಳೂರು, ಚೆನ್ನೈ, ಹೈದರಾಬಾದ್ ಇವುಗಳು ತಾಂತ್ರಿಕ ಪರಿಣಿತರನ್ನು ಸೃಷ್ಟಿ ಮಾಡುವುದರಲ್ಲಿ ಮುಂಚೂಣಿಯಲ್ಲಿವೆ. ನಮ್ಮ ದಕ್ಷಿಣ ಭಾರತದ ರಾಜ್ಯಗಳ ಸರಿಸಮಾನವಾಗಿ ಯಾರೂ ನಿಲ್ಲಲು ಸಾಧ್ಯವಿಲ್ಲ. ನಮ್ಮ ರಾಜ್ಯಗಳಿಗೆ ತಮ್ಮದೇ ಆದ ಶಕ್ತಿಗಳನ್ನು ಹೊಂದಿವೆ. ಕೆಲಸ ಮಾಡಲು, ಕಲಿಯಲು, ದುಡಿಯಲು ಪ್ರಸಕ್ತವಾಗಿವೆ. ನಮ್ಮ ಹಿಂದಿನ ನಾಯಕರು ಗುಣಮಟ್ಟದ ಅಡಿಪಾಯವನ್ನು ಶಿಕ್ಷಣ ಕ್ಷೇತ್ರಗಳಿಗೆ ಹಾಕಿಕೊಟ್ಟಿದ್ದಾರೆ. ಇದನ್ನು ನಾವು ಕಾಪಾಡಬೇಕು. ನಮ್ಮ ದೇಶ ಶಿಕ್ಷಣದ ವಿಚಾರದಲ್ಲಿ ಮಹತ್ತರ ಸಾಧನೆ ಮಾಡಿದೆ” ಎಂದು ಹೇಳಿದರು.
“ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಶಿಕ್ಷಣ ಕ್ಷೇತ್ರ ಅದರಲ್ಲೂ ದೇಶದ ಯುವ ಜನತೆಯ ಭವಿಷ್ಯ ಉತ್ತಮವಾಗಿರಬೇಕು ಎನ್ನುವ ಕಾರಣಕ್ಕೆ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ನಾವು ಗುಣಮಟ್ಟದ ಶಿಕ್ಷಣದ ಪರವಾಗಿ ದನಿ ಎತ್ತಲು ಒಂದುಗೂಡಿದ್ದೇವೆ” ಎಂದರು.
“ನಾನು ಮತ್ತು ಸಮಾವೇಶದಲ್ಲಿ ಭಾಗವಹಿಸಿರುವ ಗೃಹ ಸಚಿವರಾದ ಪರಮೇಶ್ವರ್, ನಾವಿಬ್ಬರು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವವರು. ನಮಗೂ ಈ ಕ್ಷೇತ್ರದಲ್ಲಿ ಅನುಭವವಿದೆ. ನಮಗೆ ಈ ಕ್ಷೇತ್ರ ಏನನ್ನು ಬೇಡುತ್ತದೆ ಎನ್ನುವ ಅರಿವಿದೆ. ಇಲ್ಲಿನ ಅನಾನುಕೂಲತೆಗಳ ಬಗ್ಗೆ ನಮಗೂ ತಿಳಿದಿದೆ” ಎಂದು ಹೇಳಿದರು.
“ಮಹಾರಾಷ್ಟ್ರವು ಉನ್ನತ ಶಿಕ್ಷಣ ವಿಚಾರದಲ್ಲಿ ಕರ್ನಾಟಕ ಹಾಗೂ ತೆಲಂಗಾಣಕ್ಕೆ ಹೋಲಿಕೆ ಮಾಡಿದರೆ ಪ್ರತ್ಯೇಕ ಮಾದರಿಯನ್ನು ಹೊಂದಿದೆ. ಉಳಿದ ಅನೇಕ ರಾಜ್ಯಗಳಲ್ಲಿ, ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲಿ ಬೇರೆ ಪಕ್ಷಗಳು ಅಧಿಕಾರದಲ್ಲಿರುವಾಗ ಕುಲಪತಿ ಹಾಗೂ ಉಪಕುಲಪತಿಗಳ ವಿಚಾರದಲ್ಲಿ ತೀರ್ಮಾನ ಮಾಡುವುದು ಕಷ್ಟವಾಗುತ್ತದೆ. ಆದರೂ ನಾವು ನಿಭಾಯಿಸುತ್ತಿದ್ದೇವೆ” ಎಂದರು.
“ನಾವೆಲ್ಲರೂ ಸೇರಿ ಅತ್ಯುತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ಕಾಪಾಡೋಣ, ಯುವ ಜನತೆಗೆ ಉತ್ತಮ ಭವಿಷ್ಯ ನೀಡೋಣ. ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು ಭಾಗವಹಿಸಿರುವುದು ಸಂತದ ವಿಚಾರ. ನಿಮ್ಮ ಅತ್ಯಮೂಲ್ಯ ಸಲಹೆಗಳು ಕೇಂದ್ರ ಸರ್ಕಾರಕ್ಕೆ ತಲುಪಬೇಕು. ಈ ಸಮಾಲೋಚನೆಯನ್ನು ಏರ್ಪಡಿಸಿರುವ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರಿಗೆ ಅಭಿನಂದನೆಗಳು” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ