ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನಾಚರಣೆಯನ್ನು ಮಂಗಳವಾರ ಕೆ.ಎಲ್.ಇ. ಸಂಸ್ಥೆಯ ಬಿ.ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.
ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ರೋಟರಿ ಕ್ಲಬ್ ಬೆಳಗಾವಿ ದಕ್ಷಿಣ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು.
ದಿವಾನಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ವಿವಿಧ ಪ್ರಮಾಣಪತ್ರಗಳ ಮಹತ್ವದ ಕುರಿತು ವಿವರಿಸಿದರು ಹಾಗೂ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಕಾನೂನಾತ್ಮಕ ಪ್ರಕ್ರಿಯೆಯನ್ನು ವಿವರಿಸಿದರು.
ಅದೇ ರೀತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಡಮಾಡುವ ವಿವಿಧ ಸೌಲತ್ತುಗಳು, ಉಚಿತ ಕಾನೂನು ಸೇವೆಗಳ ವಿವರವನ್ನು ನೀಡಿದರು. ವಿದ್ಯಾರ್ಥಿಗಳು ಲೋಕ ಅದಾಲತ್‌ಗಳ ಮುಖಾಂತರ ವ್ಯಾಜ್ಯಗಳನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕೆ.ಎಲ್.ಇ. ಸಂಸ್ಥೆಯ ಬಿ.ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯ, ಬೆಳಗಾವಿಯ ಪ್ರಾಚಾರ್ಯ ಡಾ. ಬಿ. ಜಯಸಿಂಹ ಇವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಶಿಕ್ಷಿತ ಎಂಬ ಪದದ ಅರ್ಥವು ಸಾಕಷ್ಟು ಬದಲಾವಣೆಗೊಂಡಿದ್ದು ಕೇವಲ ಶಿಕ್ಷಣವನ್ನು ಹೊಂದುವುದಷ್ಟೇ ಅಲ್ಲ ಬದಲಾದ ವ್ಯವಸ್ಥೆಯಲ್ಲಿ ಯಾವ ವಿಷಯಗಳ ತಿಳುವಳಿಕೆಯು ಸಮಾಜಕ್ಕೆ ಮಾರಕವೊ ಅವುಗಳನ್ನು ತಿರಸ್ಕರಿಸುವದು ಕೂಡ ಆಗಿರುತ್ತದೆ.
ಸಮಾಜದಲ್ಲಿ ಆರ್ಥಿಕ ರಾಜಕೀಯ ಹಾಗೂ ಸಾಮಾಜಿಕ ಸಮಾನತೆಯನ್ನು ಉಂಟುಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯೊನ್ಮುಖರಾಗಬೇಕೆಂದು ಕರೆ ಕೊಟ್ಟರು.
ಈ ಸಮಾರಂಭವು ವಿದ್ಯಾರ್ಥಿನಿಯರಾದ ನಿಶ್ರಾ ಮತ್ತು ಸಂಗಡಿಗರಿಂದ ಗಾಯನದಿಂದ ಆರಂಭಗೊಂಡಿತು. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಂಜುನಾಥ ಅಲ್ಲಪ್ಪನವರ ಅಥಿತಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿ ವೀರೇಶ ಮಳಿಮಠ ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿನಿ ರುಬಿನಾ ನದಾಫ್ ನಿರೂಪಿಸಿದರು. ಈ ಸಂದರ್ಭದಲ್ಲಿ ಬಿ.ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ