ಬಣ್ಣಗಳ ಜೊತೆಗಿನ ಬದುಕು ಹಿಂದಿನಿಂದಲೇ ಜೊತೆಯಾಗಿ ಬಂದಿದೆ
ವಿದ್ವಾನ್ ಅರುಣ ಹೆಗಡೆ, ದೇವಿಮನೆ, ಬೆಳಗಾವಿ (ಮೊಬೈಲ್ -9880217765)
ಪ್ರತಿಯೊಂದು ಬಣ್ಣಗಳೂ ನಮ್ಮ ಭಾವನೆಗಳಿಗೆ ಜೊತೆಯಾಗಿಬಿಟ್ಟಿವೆ. ಅಳೆಯಲಾಗದ ಸೂಕ್ಷ್ಮ ಸಂಬಂಧ ಬಣ್ಣಗಳ ಜೊತೆಗೆ ನಮಗಿದೆ.
ಬಣ್ಣಗಳೆಂದರೆ ಭಗವಂತನು ಪ್ರೀತಿಯಿಂದ ಕೊಟ್ಟಿರುವ ವರವೆಂದರ್ಥ.
ಬಣ್ಣಗಳ ಜೊತೆಗಿನ ಬದುಕು ಹಿಂದಿನಿಂದಲೇ ಜೊತೆಯಾಗಿ ಬಂದಿದೆ.
ಕೆಲವೊಂದು ಬಣ್ಣಗಳು ಶುಭ ಸೂಚಕವೆಂದೂ ಕೆಲವೊಂದು ಬಣ್ಣಗಳು ಅಶುಭ ಸೂಚಕವೆಂದು ಹೇಳುವುದು ಕೇಳಿದ್ದೇವೆ. ಅಷ್ಟೆಲ್ಲಾ ಉಪಕಾರ ಮಾಡುವ ಕಪ್ಪು ಕಾಗೆಯೂ ಕೂಡಾ ಬಣ್ಣದಿಂದಾಗಿಯೇ ದೂಷಿಸಲ್ಪಡುತ್ತದೆ. ನವಗ್ರಹಾರಾಧನೆಯ ಸಂದರ್ಭದಲ್ಲಿ 9 ಬಣ್ಣಗಳು ಮುಖ್ಯವೆನಿಸುತ್ತದೆ. ಮುತ್ತೈದೆಯರ ಹಣೆಯಲ್ಲಿ ಸಿಗುವ ಸಿಂಧೂರ ಶುಭ ಸೂಚಕ. ಬಿಳಿ ಬಣ್ಣ ನೈರ್ಮಲ್ಯ ಅಥವಾ ತಟಸ್ಥ ಭಾವವನ್ನು ಸೂಚಿಸುತ್ತದೆ. ಇನ್ನು ಖಾವಿ ವೈರಾಗ್ಯವನ್ನು ಸೂಚಿಸುವುದರಿಂದಲೇ ಜೀವನ ಮಾರ್ಗದಲ್ಲಿ ವಿರಕ್ತಿಹೊಂದಿದವರು ಆ ಬಣ್ಣದ ಉಪಯೋಗವನ್ನೇ ಮಾಡುತ್ತಾರೆ.
ವಾಸ್ತು ಪ್ರಕಾರ ಪೂರ್ವಕ್ಕೆ ನಸುಕೆಂಪು ಅಂದರೆ ಅರುಣ ವರ್ಣ, ಉತ್ತರಕ್ಕೆ ಚಿಗುರೆಲೆ ಹಸಿರು. ಪಶ್ಚಿಮಕ್ಕೆ ನೀಲಿ. ದಕ್ಷಿಣಕ್ಕೆ ಕುಂಕುಮ ವರ್ಣ. ಈಶಾನ್ಯಕ್ಕೆ ಲಿಂಬೆ ಹಳದಿ ಅಥವಾ ಬಂಗಾರದ ವರ್ಣ. ಆಗ್ನೇಯಕ್ಕೆ ದಂತ ವರ್ಣ ಅಥವಾ ಬಿಳಿ ಮುತ್ತಿನ ಬಣ್ಣ, ನೈರುತ್ಯಕ್ಕೆ ನೇರಳೆ ಹಳದಿ ಅಥವಾ ಗೋಧಿ ಬಣ್ಣ, ವಾಯುವ್ಯಕ್ಕೆ ಬಿಳಿ ಅಥವಾ ಕೆನೆ ಬಣ್ಣ ಶುಭ ಪರಿಣಾಮ ಕೊಡುವುದು.
ದೇವರ ಮನೆಗೆ ಬಿಳಿ ಅಥವಾ ನಸು ನೇರಳೆ ಬಹು ಪ್ರಭಾವಿ. ಅಡುಗೆ ಮನೆಗೆ ನಸು ಗುಲಾಬಿ ಅಥವಾ ಕಿತ್ತಳೆ ಬಣ್ಣ ಉತ್ತಮ. ಸ್ನಾನ ಗೃಹ ಮತ್ತು ಶೌಚಾಲಯಕ್ಕೆ ಕೆನೆ ಬಣ್ಣ ಪ್ರಯೋಜನಕಾರಿ. ವಾಹನ ನಿಲುಗಡೆ ಮಾಡುವಲ್ಲಿ ಗುಲಾಬಿ ಅಥವಾ ನಸು ಕೆಂಪು. ಪ್ರಾಣಿ ಪಕ್ಷಗಳನ್ನು ಸಾಕುವಲ್ಲಿ ನಸು ನೀಲಿ ಅಥವಾ ಹಸಿರು ಬಣ್ಣ ಉತ್ತಮ.
ಹೀಗೆ ಬಣ್ಣದ ಲೋಕ ಬದುಕಿಗೊಂದು ಅರ್ಥ, ಜೀವನಕ್ಕೊಂದು ರೂಪ ಕೊಡುವುದರಲ್ಲಿ ಸಂಶಯವಿಲ್ಲ. ಹಾಗೇನೆ ಬಣ್ಣ ಬದಲಿಸುವುದರಿಂದ ಅದೃಷ್ಟವನ್ನು ಕೂಡ ಬದಲಾಯಿಸಬಹುದು ಎಂಬುದು ನಿರ್ವಿವಾದ.
ನವರಾತ್ರಿಯಲ್ಲಿ ಆಯಾ ಬಣ್ಣದ ವಸ್ತ್ರವನ್ನು ಧರಿಸಿ ಆಯಾ ಗ್ರಹಕ್ಕೆ ಹಾಗೂ ಆಯಾದೇವಿಗೆ ತಕ್ಕಂತೆ ಆರಾಧನೆ ಮಾಡಿ ನೈವೇದ್ಯವನ್ನು ಇಡುವುದರಿಂದ ಶ್ರೀದೇವಿಯ ಕೃಪೆ ಉಂಟಾಗುತ್ತದೆ.
ಮೊದಲ ದಿನ -ಕೆಂಪು ಬಣ್ಣ
ನವರಾತ್ರಿಯ ಮೊದಲ ದಿನಕ್ಕೆ ‘ಪ್ರತಿಪದ’ ಎನ್ನುತ್ತಾರೆ. ದುರ್ಗಮಾತೆಗೆ ‘ಶೈಲಪುತ್ರಿ’ ಎಂದು ಕರೆಯುತ್ತಾರೆ(ಪರ್ವತಗಳ ಸುಪುತ್ರಿ). ಈ ದಿನದಂದು ದುರ್ಗೆಯನ್ನು ಶಿವನ ಪತ್ನಿಯಾಗಿ ಪೂಜಿಸಲಾಗುತ್ತದೆ. ಕೆಂಪು ಬಣ್ಣವು ಉತ್ಸಾಹ ಮತ್ತು ಸಂಭ್ರಮಗಳನ್ನು ಪ್ರತಿಬಿಂಬಿಸುತ್ತದೆ, ಹಬ್ಬವನ್ನು ಪ್ರಾರಂಭಿಸಲು ಅತಿ ಸೂಕ್ತವಾದ ಬಣ್ಣ.
ಎರಡನೆಯ ದಿನ -ಕಡುನೀಲಿ ಬಣ್ಣ
ದ್ವಿತೀಯ ದಿನ ದುರ್ಗೆಯು ಬ್ರಹ್ಮಚಾರಿಣಿಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಸಂತೋಷ ಮತ್ತು ಸಮೃದ್ಧಿಯನ್ನು ಕೊಡುತ್ತಾಳೆ. ಕಡುನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯನ್ನು ಪ್ರತಿಪಾದಿಸುತ್ತದೆ.
ಮೂರನೆಯ ದಿನ- ಹಳದಿ ಬಣ್ಣ
ತೃತಿಯ ದಿನದಂದು ದೇವಿಯು ‘ಚಂದ್ರಕಾಂತೆ’ಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ರೂಪದಲ್ಲಿ ದುರ್ಗೆಯ ಹಣೆಯ ಮೇಲೆ ಅರ್ಧಚಂದ್ರಾಕೃತಿಯಿಂದ ಅಲಂಕಾರ ಮಾಡುತ್ತಾರೆ. ಇದು ಸೌಂದರ್ಯ ಮತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ‘ಚಂದ್ರಕಾಂತೆ’ಯು ರಾಕ್ಷಸರೊಂದಿಗೆ(ದುಷ್ಟ ಶಕ್ತಿಗಳೊಂದಿಗೆ) ಹೋರಾಡುತ್ತಾಳೆ ಎಂಬ ಪ್ರತೀತಿ ಇದೆ. ಎಲ್ಲರ ಮನಸ್ಸಿನಲ್ಲಿ ಹಳದಿ ಬಣ್ಣವು ಉತ್ಸಾಹವನ್ನು ತುಂಬುತ್ತದೆ.
ನಾಲ್ಕನೆಯ ದಿನ -ಹಸಿರು ಬಣ್ಣ
ಚತುರ್ಥಿಯ ದಿನದಂದು ದೇವಿಯು ‘ಕುಶ್ಮಾಂಡೆ’ಯ ರೂಪ ಪಡೆಯುತ್ತಾಳೆ. ಈಕೆಯನ್ನು ಜಗತ್ತಿನ ಸೃಷ್ಟಿಕರ್ತೆ ಎನ್ನಲಾಗುತ್ತದೆ. ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತಾಳೆ ಎಂಬ ನಂಬಿಕೆಯಿದೆ.
ಐದನೆಯ ದಿನ -ಬೂದು ಬಣ್ಣ
ಪಂಚಮಿಯಂದು ದೇವಿಯು ‘ಸ್ಕಂದ ಮಾತೆ’ಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಕಾರ್ತಿಕೇಯನನ್ನು ತನ್ನ ಶಕ್ತಿಯುತವಾದ ಕೈಯಲ್ಲಿ ಹಿಡಿದಿರುತ್ತಾಳೆ. ಬೂದು ಬಣ್ಣವು ತಾಯಿ ಮಗುವನ್ನು ರಕ್ಷಿಸಲು ಯಾವುದೇ ಹಂತಕ್ಕು ಹೋಗಲೂ ತಯಾರಿರುತ್ತಾಳೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಆರನೆಯ ದಿನ -ಕೇಸರಿ
ಆರನೆಯ ದಿನದಂದು ದೇವಿಯು ‘ಕಾತ್ಯಾಯನಿ’ಯ ರೂಪ ಧರಿಸುತ್ತಾಳೆ. ಕೆಲವು ದಂತಕತೆಗಳ ಪ್ರಕಾರ ‘ಕಾತ’ ಎಂಬ ಋಷಿಯು ದೇವಿ ದುರ್ಗೆಯನ್ನು ಮಗಳಾಗಿ ಪಡೆಯಲು ಯಜ್ಞ್ ಮಾಡಿದ. ಅವನ ಭಕ್ತಿಗೆ ಮೆಚ್ಚಿ ದುರ್ಗೆಯು ಪ್ರಸನ್ನಳಾಗಿ, ಕೇಸರಿ ಬಣ್ಣದ ದಿರಿಸು ಧರಿಸಿ ಮಗಳಾಗಿ ಜನಿಸಿ ಬರುತ್ತಾಳೆ. ಈ ಬಣ್ಣವು ಧೈರ್ಯವನ್ನು ಪ್ರತಿಬಿಂಬಿಸಿತ್ತದೆ.
ಏಳನೆಯ ದಿನ -ಬಿಳಿಯ ಬಣ್ಣ
ಏಳನೆಯ ದಿನದಂದು ದೇವಿಯನ್ನು ‘ಕಾಳರಾತ್ರಿ’ ಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಂದು ದೇವಿಯನ್ನು ಬಿಳಿಯ ಬಣ್ಣದ ಸೀರೆಯನ್ನು ಉಡಿಸಿ, ಕ್ರೋಧಭರಿತ ಕಣ್ಣುಗಳಿಂದ ಅಲಂಕರಿಸುತ್ತಾರೆ. ಬಿಳಿಯ ಬಣ್ಣವು ಭಕ್ತಿ ಮತ್ತು ಶಾಂತಿಯ ಪ್ರತೀಕವಾಗಿದೆ. ದೇವಿಯು ಭಕ್ತರನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆಯನ್ನು ಪ್ರತಿಪಾದಿಸಲು ಈ ಅಲಂಕಾರ ಮಾಡುತ್ತಾರೆ.
ಎಂಟನೆಯ ದಿನ -ಗುಲಾಬಿ ಬಣ್ಣ
ಅಷ್ಟಮಿಯಂದು ದೇವಿಯನ್ನು ಎಲ್ಲ ‘ಪಾಪ-ಪರಿಹಾರಕಳು’ ಎಂದು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವು ಭರವಸೆ ಮತ್ತು ನವೀನತೆಯ ಪ್ರತೀಕವಾಗಿದೆ.
ಒಂಬತ್ತನೆಯ ದಿನ -ತಿಳಿ ನೀಲಿ
ನವಮಿಯಂದು ದೇವಿಯು ‘ಸಿದ್ಧಿಧಾತ್ರಿ’ಯ ರೂಪ ಧರಿಸುತ್ತಾಳೆ. ತಿಳಿನೀಲಿ ಬಣ್ಣದಿಂದ ಅಲಂಕರಿಸಲಾಗುತ್ತದೆ. ‘ಸಿದ್ಧಿಧಾತ್ರಿ’ಗೆ, ಚಮತ್ಕಾರಕ ಶಕ್ತಿಗಳಿವೆಯೆಂದು ನಂಬಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ