ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಣಿಜ್ಯ ವಿದ್ಯಾರ್ಥಿಗಳಿಗೆ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದಾಗಿ ಉದ್ಯೋಗಗಳ ಅವಕಾಶಗಳು ತೆರೆದುಕೊಂಡಿದ್ದವು. ಆದರೆ ಸಮಕಾಲೀನ ಆರ್ಥಿಕ ಹಿಂಜರಿತದಿಂದ ಕಂಪನಿಗಳಲ್ಲಿ ಉದ್ಯೋಗಗಳು ಕ್ರಮೇಣ ಕಡಿತಗೊಳ್ಳುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಕೇವಲ ವಾಣಿಜ್ಯ ಸಂಸ್ಥೆಗಳ ಮೇಲೆ ಅವಲಂಬಿತವಾಗದೆ, ಇತರ ಕ್ಷೇತ್ರಗಳಲ್ಲಿರುವ ಉದ್ಯೋಗಗಳತ್ತ ಗಮನಹರಿಸಬೇಕೆಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ರಾಮಚಂದ್ರ ಗೌಡ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣಘಟಕ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಮಹಾವಿದ್ಯಾಲಯದ ಸಭಾ ಭವನದಲ್ಲಿ ’ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಪ್ರೊ.ಎಂ.ರಾಮಚಂದ್ರ ಗೌಡ ಅವರು ಮಾತನಾಡುತ್ತಾ, ಪ್ರತಿ ವರ್ಷ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ನೆಟ್-ಸೆಟ್) ನಡೆಯುತ್ತವೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕು.ಇಂತಹ ಪರೀಕ್ಷೆಗಳನ್ನು ಎದುಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ವಿಷಯಗಳನ್ನು ಕಷ್ಟಪಟ್ಟುಓದದೇ ಇಷ್ಟಪಟ್ಟು ಪ್ರೀತಿಯಿಂದ ಓದಬೇಕು ಎಂದರು.
ಹೀಗೆ ಮಾಡುವುದರಿಂದ ವಾಣಿಜ್ಯ ವಿದ್ಯಾರ್ಥಿಗಳು ಕೂಡ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಉದ್ಯೋಗದ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂದಿನ ಜಾಗತೀಕರಣದ ಜಗತ್ತಿನಲ್ಲಿ ವಿದ್ಯಾರ್ಥಿಗಳು ಜ್ಞಾನದಜೊತೆಗೆ ಇತರೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸ್ಮರ್ಧಾತ್ಮಕ ಯುಗದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯಅತಿಥಿಯಾಗಿ ಆಗಮಿಸಿದ ಡಾ.ದಾನಯ್ಯ ಕವಂಟಗಿಮಠ ಅವರು ಮಾತನಾಡುತ್ತ ಇಂದಿನ ವಿದ್ಯಾ ಸಂಸ್ಥೆಗಳು ಕ್ವಾಂಟಿಟಿಗಿಂತ ಕ್ವಾಲಿಟಿ ವಿದ್ಯಾರ್ಥಿಗಳನ್ನು ಸೃಷ್ಟಿಸಬೇಕು. ಬದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕೆಂದು ನುಡಿದರು. ಸಾಧನೆಯು ನಿರಂತರ ಪ್ರಯತ್ನವನ್ನು ಬಯಸುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನುಗ್ಗಿ ತಮ್ಮ ಗುರಿ ಮುಟ್ಟಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಬಿ.ಎಸ್. ನಾವಿ ಅವರು ವಿದ್ಯಾರ್ಥಿಗಳು ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಲ್ಲಿ ಮಾತ್ರ ಅವರಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಆತ್ಮಶಕ್ತಿಯು ವೃದ್ಧಿಸುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ದೌರ್ಬಲ್ಯದ ಕಡೆಗೆ ಗಮನಹರಿಸದೇ ಸಾಮರ್ಥ್ಯದ ಕಡೆಗೆ ಲಕ್ಷ್ಯವಹಿಸಬೇಕೆಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವದರ ಮೂಲಕ ಗುರಿಯನ್ನು ತಲುಪಲು ಸಾಧ್ಯ. ಇಂತಹ ಕಾರ್ಯಾಗಾರಗಳ ಉಪಯೋಗವನ್ನು ಸ್ನಾತಕೋತ್ತರದ ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ನುಡಿದರು.
ಸಮಾರೋಪ ಸಮಾರಂಭದಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಡಿ. ಎನ್. ಪಾಟೀಲ, ಜಮಖಂಡಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ ಮಲ್ಲಿಕಾರ್ಜುನ ಎಂ. ಮರಡಿ ಅವರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಅಶ್ವಿನಿ ಎಂ.ಜಾಮುನಿ ಮಾತನಾಡಿದರು. ಶಿವಾನಂದ ಬೇವೂರ ಪ್ರಾರ್ಥಿಸಿದರು. ಯಾಸ್ಮಿನ್ ಬೇಗಂ ನಧಾಫ ಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರಿಯಾಂಕಾಕುಬಡ್ಡಿ ವಂದಿಸಿದರು. ನಾಜೀಯಾ ಪಟವೇಗಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರದಲ್ಲಿ ವಿವಿಧ ಮಹಾವಿದ್ಯಾಲಯಗಳ ವಾಣಿಜ್ಯ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ