Latest

ವಿಧಾನಸೌಧದ ಮುಂಭಾಗದಲ್ಲಿ ನೇತಾಜಿ ಪ್ರತಿಮೆ ಸ್ಥಳಾಂತರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಸೂಕ್ತ ಜಾಗಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚಾರಣೆಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

ಸೂಕ್ತ ಸ್ಥಳದಲ್ಲಿ ಅವರ ಪ್ರತಿಮೆ ಇರುವುದು ಅವರಿಗೆ ನಾವು ಸಲ್ಲಿಸಬೇಕಾದ ಗೌರವ. ಈ ಬಗ್ಗೆ ಕೂಡಲೇ ತೀರ್ಮಾನವನ್ನು ಕೈಗೊಳ್ಳಲಾಗುವುದು. ನೇತಾಜಿ ಅವರ ಮುಂದಿನ ಜನ್ಮದಿನಾಚರಣೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪ್ರೀತಿ, ವಿಶ್ವಾಸದಿಂದ ಕಟ್ಟಿರುವ ಹಲವಾರು ಸಂಘ ಸಂಸ್ಥೆಗಳ ಉದ್ದೇಶ ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ನುಡಿದರು.

ಅಪ್ರತಿಮ ನಾಯಕ:ಭಾರತದ ದೇಶದ ಧೀರ ಶೂರ ಸುಪುತ್ರ ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿ ಹೋರಾಟ ಮಾಡಿದ ಅಪ್ರತಿಮ ನಾಯಕ. ಇಡೀ ವಿಶ್ವದ ಶಕ್ತಿಗಳನ್ನು ಒಗ್ಗೂಡಿಸಿ , ದೈತ್ಯ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಂಘಟಿಸಿ, ಭಾರತ ದೇಶದಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ಅಂದಿನ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಶಕ್ತಿಯನ್ನು ತುಂಬಿದರು. ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರ ಹಿರಿದಿದೆ ಎಂದರು.

ವಿಶ್ವಮಾನ್ಯರು: ‘ನನಗೆ ಸ್ವಲ್ಪ ರಕ್ತವನ್ನು ನೀಡಿ, ನಿಮಗೆ ಸ್ವಾತಂತ್ರ್ಯ ಕೊಡುವೆ’ ಎನ್ನುವ ಕರೆ ನೀಡಿ ಯುವಕರಿಗೆ ಪ್ರೇರಣೆ ನೀಡಿದರು. ಆಜಾದ್ ಹಿಂದ್ ಫೌಜ್ ನಲ್ಲಿ ಸುಮಾರು 60 ಸಾವಿರ ಯುವಕರನ್ನು ಸೇರ್ಪಡೆ ಮಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಭದ್ರ ಬುನಾದಿ ಹಾಕಿದರು. ಅವರ ಸಾವು ಇಂದಿಗೂ ನಿಗೂಢವಾಗಿದೆ. ಆದರೆ ವಿಶ್ವಮಾನ್ಯರಾಗಿದ್ದಾರೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಜೀವಂತವಾಗಿದ್ದಾರೆ.

ಯುವಕರಿಗೆ ಧ್ಯೇಯ, ಆದರ್ಶಗಳ ಪರಿಚಯ: ನೇತಾಜಿ ಅವರ ಧ್ಯೇಯ, ಆದರ್ಶ, ದೇಶಭಕ್ತಿ ಹಾಗೂ ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವವನ್ನು ಇಂದಿನ ಯುವಕರಲ್ಲಿ ಬಿತ್ತಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯನ್ನು ವರ್ಷಪೂರ್ತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಶಾಲಾ ಕಾಲೇಜುಗಳಲ್ಲಿ ನೇತಾಜಿ ಅವರ ಕುರಿತು ಚರ್ಚೆ, ವಸ್ತುಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತ್ತೊಮ್ಮೆ ಸುಭಾಷ್ ಚಂದ್ರ ಬೋಸ್ ಅವರ ಧ್ಯೇಯ ಆದರ್ಶಗಳ ಪರಿಚಯವನ್ನು ಇಂದಿನ ಮಕ್ಕಳಿಗೆ ಮಾಡಿಕೊಡಲಾಗುವುದು. ಅಲ್ಲದೇ ನೇತಾಜಿ ಅವರ ಬಗ್ಗೆ ವಿವಿಧ ಲೇಖಕರು ಬರೆದ ಕೃತಿಗಳನ್ನು ಕನ್ನಡದಲ್ಲಿ ಮುದ್ರಣ ಮಾಡಿ ಎಲ್ಲಾ ಯುವಕರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು.

ಇಂದು ಸಂಜೆ 4.00 ಗಂಟೆಗೆ ಎನ್.ಸಿ.ಸಿ ಕೆಡೆಟ್ ಗಳೊಂದಿಗೆ ವಿಶೇಷ ಕಾರ್ಯಕ್ರಮವಿದ್ದು, ಇದೆ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಫ್ಲೈಯಿಂಗ್ ಶಾಲೆಯನ್ನು ಪುನರಾರಂಭ ಮಾಡಲಾಗುವುದು. ಇದರೊಂದಿಗೆ ಯುವಕರ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮತ್ತು ಇತರರು ಈ ಸಂದರ್ಭದಲ್ಲಿ ಬೋಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಸಿಎಂ ಪ್ರತಿಜ್ನಾ ವಿಧಿ ಬೋಧಿಸಿದರು.
ಕವಟಗಿಮಠ, ವಿಶ್ವನಾಥ ಪಾಟೀಲ್ ಗೆ ಕೊರೋನಾ: ಸಭೆಯಲ್ಲಿದ್ದ ಬಿಜೆಪಿ ಮುಖಂಡರಿಗೆಲ್ಲ ಆತಂಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button