Kannada NewsKarnataka NewsLatestPolitics

*ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದರು.

ಹಿರಿಯ ಪತ್ರಕರ್ತರುಗಳ ಮನೆಗೆ ಭೇಟಿ ನೀಡಿ ಕೆಯುಡಬ್ಲೂಜೆ ಗೌರವ ನೀಡಿದ್ದಲ್ಲದೆ, ಅವರ ಅನುಭವ ಮತ್ತು ಅಭಿಪ್ರಾಯಗಳನ್ನು ದಾಖಲೀಕರಣ ಮಾಡಿರುವ ವಿಷಯವನ್ನು ವಿಧಾನಸೌಧದಲ್ಲಿ  ಮುಖ್ಯಮಂತ್ರಿಗಳ ಗಮನಕ್ಕೆ ತಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಈ ಬಗ್ಗೆ ಪುಸ್ತಕವನ್ನು ಹೊರತಂದಿರುವುದಾಗಿ ಅವರಿಗೆ ‘ ಮಾಧ್ಯಮ ಲೋಕದ ಅಮೃತ ಬೀಜ’ ಪುಸ್ತಕದ ಪ್ರತಿಯನ್ನು ನೀಡಿದರು.

ಪುಸ್ತಕದಲ್ಲಿದ್ದ ಮೊದಲ ಹೆಸರುಗಳು ಕಲ್ಲೆ ಶಿವೋತ್ತಮರಾವ್ ಮತ್ತು ಟಿಜೆಎಸ್ ಜಾರ್ಜ್ ಅವರದು. ಇದನ್ನು ನೋಡಿದ ಸಿಎಂ, ಇವರಿಗೆಲ್ಲ ತೊಂಬತ್ತು ವರ್ಷ ದಾಟಿರಬೇಕಲ್ವಾ? ಈಗ ಹೇಗಿದ್ದಾರೆ? ಎಂದು ಕುತೂಹಲದಿಂದ ಕೇಳಿ ತಿಳಿದುಕೊಂಡರು. ಆ ಕಾಲಘಟ್ಟದ ಹಿರಿಯರುಗಳ ಅನುಭವ ದೊಡ್ಡದು. ಅದನ್ನು ದಾಖಲೆ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

ತೊಂಬತ್ತು ವಸಂತ ದಾಟಿರುವ ಪಿ.ರಾಮಯ್ಯ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದಾಗ, ಅವರು ಬೇಗ ಗುಣಮುಖರಾಗಲಿ ಎಂದರು.

Home add -Advt

ಹಿರಿಯರನ್ನು ಅವರ ಮನೆಯಲ್ಲಿಯೇ ಗೌರವಿಸಿರುವುದು ನಿಮಗೂ, ಪತ್ರಕರ್ತರ ಸಂಘಕ್ಕೂ ಗೌರವ ತರುವ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮತ್ತಿತರರು ಇದ್ದರು.

ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ ಘೋಷಿಸಿದ ಸಿಎಂಗೆ ಕೆಯುಡಬ್ಲ್ಯೂಜೆ ಧನ್ಯವಾದ

ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ ಬಜೆಟ್‌ನಲ್ಲಿ ಪತ್ರಕರ್ತರಿಗೆ ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಆರೋಗ್ಯ ಯೋಜನೆ ಘೊಷಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಧನ್ಯವಾದ ತಿಳಿಸಿದ್ದಾರೆ.

ಪತ್ರಕರ್ತರಿಗೆ ಪ್ರತ್ಯೇಕ ಹೆಲ್ತ್ ಸ್ಕೀಂ ತರಬೇಕು ಎನ್ನುವುದು ಬಹಳ ವರ್ಷಗಳ ಹೋರಾಟ. ಈ ನಿಟ್ಟಿನಲ್ಲಿ ಯೋಜನೆ ಪ್ರಪ್ರಥಮ ಬಾರಿಗೆ ಘೋಷಣೆಯಾಗಿದೆ. ಇದನ್ನು ಸ್ವಾಗತಿಸೋಣ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನಿವೃತ್ತ ಪತ್ರಕರ್ತರ ಮಾಸಾಶನವನ್ನು 12 ಸಾವಿರದಿಂದ 15 ಸಾವಿರಕ್ಕೆ ಮತ್ತು ಅವಲಂಬಿತರಿಗೆ 6 ಸಾವಿರದಿಂದ 7500ಕ್ಕೆ ಹೆಚ್ಚಳ ಮಾಡಿರುವುದಕ್ಕೂ ಧನ್ಯವಾದ ತಿಳಿಸಿದ್ದಾರೆ.

ಸಂಘದ ಹಕ್ಕೊತ್ತಾಯಕ್ಕೆ ಸ್ಪಂದಿಸಿ ಈ ನಿಟ್ಟಿನಲ್ಲಿ ಬೇಡಿಕೆ ಈಡೇರಿಸಲು ಸಹಕಾರ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ.

ಯೋಜನೆ ವಿಸ್ತರಿಸಲಿ:

ಆರೋಗ್ಯ ಯೋಜನೆಯನ್ನು ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತ ಮಾಡದೇ, ಮುಂದೆ ವಾರ್ತಾ ಇಲಾಖೆಯಿಂದ ಮಾನ್ಯತೆ ಪಡೆದಿರುವ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೆ ವಿಸ್ತರಿಸಬೇಕು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಒತ್ತಾಯಿಸಿದ್ದಾರೆ.

Related Articles

Back to top button