Latest

ಉತ್ತರ ಕರ್ನಾಟಕ ಸಮೃದ್ದಗೊಳಿಸಲು ಹೊಸ ನೀರಾವರಿ ಅವಕಾಶಗಳು

ಸಂಗಮೇಶ ಆರ್. ನಿರಾಣಿ 
(ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ)

ಕರ್ನಾಟಕದ ಉತ್ತರದ ಭಾಗ ಕೃಷಿಯನ್ನೇ ಅವಲಂಭಿಸಿರುವ ಪ್ರದೇಶ. ಸಮೃದ್ದ ಕೃಷಿಗಾಗಿ ಉತ್ತರ ಕರ್ನಾಟಕದಲ್ಲಿ ಹಲವಾರು ನೀರಾವರಿ ಯೋಜನೆಗಳ ಅವಶ್ಯಕತೆ ಇದೆ. ಅದಕ್ಕೆ ಸಾಕಷ್ಟು ಪೂರಕ ಅವಕಾಶಗಳಿವೆ. ಹೀಗಾಗಿ ಈ ಬಾರಿಯ ಬಜೇಟ್‌ನಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು.

ಈ ಭಾಗದ ಹೆಚ್ಚಿನ ಜನ ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಲ್ಲಿ ಬದುಕು ಕಟ್ಟಿಕೊಂಡಿರುವುದರಿಂದ ನೀರಾವರಿಗೆ ಪ್ರಾತಿನಿಧ್ಯ ನೀಡದೇ ನಮ್ಮ ಜನರ ಆರ್ಥಿಕ ಮಟ್ಟವನ್ನು ಉನ್ನತಿಕರಿಸಲು ಸಾಧ್ಯವಿಲ್ಲ. ಅದ್ದರಿಂದ ಬಹುಕಾಲದಿಂದ ಹಿಂದುಳಿದಿರುವ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಚಾಲ್ತಿಯಲ್ಲಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದರೊಂದಿಗೆ ಹೊಸ ನೀರಾವರಿ ಅವಕಾಶಗಳನ್ನು ಬಳಸಿಕೊಂಡು ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಲು ಸಾಧ್ಯವಿದೆ.

ಜಗದ ಮೂಲವೇ ಜೀವಜಲ:

ನೀರು ಜೀವ ಜಗತ್ತಿನ ಮೂಲ ಆಧಾರ. ನೀರಿಲ್ಲದೇ ಭೂಮಿಯ ಮೇಲೆ ಯಾವುದೂ ಸಾಧ್ಯವಿಲ್ಲ. ಭೂಮಿಯ ಮೇಲೆ ೩/೧ ಭಾಗ ನೀರಿದ್ದರೂ ಒಟ್ಟು ಜಲ ರಾಶಿಯಲ್ಲಿ ೯೭% ಸಮುದ್ರದ ಉಪ್ಪು ನೀರು. ಕೇವಲ ೩% ಮಾತ್ರ ಸಿಹಿ ನೀರಿನ ಲಭ್ಯತೆ ಇದೆ. ಇರುವ ೩% ನೀರಿನಲ್ಲಿ ೨.೭% ನೀರು ಹಿಮ ಮತ್ತು ಮಂಜುಗಡ್ಡೆಯಾಗಿದೆ. ಇನ್ನುಳಿದುದದ್ದು ೦.೩% ಮಾತ್ರ. ಇದರಲ್ಲಿ ೦.೨% ಕೃಷಿ ಚಟುವಟಿಕೆಗಳಿಗಾಗಿ ಬಳಸುತ್ತೇವೆ. ಉಳಿದ ೦.೧% ನೀರನ್ನು ಕುಡಿಯುವ ನೀರು ಹಾಗೂ ಕಾರ್ಖಾನೆಗಳಿಗಾಗಿ ಬಳಸುತ್ತೇವೆ.

ಆದರೆ ಈ ೦.೩% ನೀರು ಜಗತ್ತಿನಾದ್ಯಂತ ಸರಿಸಮಾನವಾಗಿ ಹಂಚಿಕೆಯಾಗಿಲ್ಲ. ಬ್ರೆಜಿಲ್ ಒಂದೇ ದೇಶದಲ್ಲಿ ೦.೩% ಸಿಹಿನೀರಿನ ೨೦% ಲಭ್ಯವಿದೆ. ಆದರೆ ಅಲ್ಲಿಯ ಜನಸಂಖ್ಯೆಯ ಜಗತ್ತಿನ ಜನಸಂಖ್ಯೆಯ ೨.೫% ಮಾತ್ರ. ಭಾರತದ ಜನಸಂಖ್ಯೆ ಜಗತ್ತಿನ ಜನಸಂಖ್ಯೆಯ ೧೭% ಆದರೆ ನಮಗೆ ದೊರೆತ ನೀರಿನ ಪ್ರಮಾಣ ೪% ಮಾತ್ರ. ಚೀನಾದ್ದು ೧೯% ಜನಸಂಖ್ಯೆ ಅವರಿಗೆ ಲಭ್ಯವಿರುವ ನೀರಿನ ಪ್ರಮಾಣ ೬% ಮಾತ್ರ. ಹೀಗಾಗಿ ಇರುವ ನೀರಿನ ಲಭ್ಯತೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೊಸ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದು ನಮ್ಮ ಆದ್ಯತೆಯಾಗಬೇಕು.

ಕರ್ನಾಟಕ ನೀರಾವರಿ ವ್ಯವಸ್ಥೆ:

ಕರ್ನಾಟಕದಲ್ಲಿ ಪ್ರಮುಖವಾಗಿ ೭ ನದಿ ಕಣಿವೆಗಳಿವೆ. ದಕ್ಷಿಣದಲ್ಲಿ ಉತ್ತರ ಪೆನ್ನಾರ, ದಕ್ಷಿಣ ಪೆನ್ನಾರ ಹಾಗೂ ಪಾಲಾರ್ ಕಣ ವೆ ಮತ್ತು ಉತ್ತರದಲ್ಲಿ ಗೋದಾವರಿ ನದಿ ಕಣ ವೆಗಳಿಂದ ದೊರೆಯುವ ನೀರು ಅತ್ಯಲ್ಪ ಪ್ರಮಾಣದ್ದು. ಪಶ್ಚಿಮ ಘಟ್ಟದ ಕಣ ವೆಯಲ್ಲಿ ಹುಟ್ಟುವ ನದಿಗಳ ನೀರು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹರಿದು ಸಮುದ್ರ ಸೇರುತ್ತದೆ. ಹೀಗಾಗಿ ಉತ್ತರದಲ್ಲಿ ಕೃಷ್ಣೆ ಮತ್ತು ದಕ್ಷಿಣದಲ್ಲಿ ಕಾವೇರಿ ಕಣ ವೆ ಪ್ರದೇಶಗಳು ಬೃಹತ್ ನೀರಾವರಿ ಯೋಜನೆಗಳನ್ನು ಹೊಂದಿರುವ ಕಣ ವೆ ಪ್ರದೇಶಗಳಾಗಿವೆ.

ಇಡೀ ಉತ್ತರ ಕರ್ನಾಟಕವನ್ನು ಸಲಹುತಿದೆ ಕೃಷ್ಣಾ ಕಣಿವೆ

ಕೃಷ್ಣಾ ಕಣಿವೆಯಲ್ಲಿ ದೊರೆಯುವ ೨,೫೨೮ ಟಿ.ಎಂ.ಸಿ ನೀರಿನಲ್ಲಿ ಬಚಾವತ್ ಆಯೋಗದ ಸ್ಕೀಂ ಎ ಮತ್ತು ಬಿ ನಡಿಯಲ್ಲಿ ದೊರೆತ ಒಟ್ಟು ನೀರು ೯೦೪ ಟಿಎಂಸಿ. ಇದರಲ್ಲಿ ೩೬೦ ಟಿಎಂಸಿಯನ್ನು ಮೀರದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ, ೩೦೩ ಟಿಎಂಸಿ ನೀರನ್ನು ಆಲಮಟ್ಟಿ ಹಾಗೂ ನಾರಾಯಣಪುರ ಹಾಗೂ ಅವುಗಳ ಏತ ನೀರಾವರಿ ಯೋಜನೆಗೆ, ಉಳಿದ ೨೪೧ ಟಿಎಂಸಿ ನೀರನ್ನು ಘಟಪ್ರಭಾ, ಮಲಪ್ರಭಾ, ದೂದ್‌ಗಂಗಾ ಹಾಗೂ ಕೃಷ್ಣಾ ಕಣಿವೆಯ ಉಳಿದ ಇತರ ಎಲ್ಲಾ ನೀರಾವರಿ ಯೋಜನೆಗಳಿಗೆ ಉಪಯೋಗಿಸಲು ನಿರ್ಬಂಧ ಹೇರಲಾಗಿದೆ.

ಉತ್ತರ ಕರ್ನಾಟಕದಲ್ಲಿ ೭೪ ನದಿಗಳಿವೆ!

ಕರ್ನಾಟಕದ ಕೃಷಿ ಭೂಮಿಯ ಸುಮಾರು ಶೇ. ೬೨ರಷ್ಟು ಬಯಲುಸೀಮೆಯ ಪ್ರದೇಶ ಉತ್ತರ ಕರ್ನಾಟಕದಲ್ಲಿದೆ. ಸುದೈವದಿಂದ ದಕ್ಷಿಣ ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ, ವರದಾ, ಧರ್ಮಾ ಸೇರಿದಂತೆ ಒಟ್ಟು ೭೪ ನದಿಗಳು ಉತ್ತರ ಕರ್ನಾಟಕದಲ್ಲಿ ಹರಿದಿವೆ. ಅನುಕೂಲಕರವಾದ ನೈಸರ್ಗಿಕ ಪರಿಸರವನ್ನು ಉಪಯೋಗಿಸಿಕೊಂಡು ನೀರಾವರಿ ಸದ್ಬಳಕೆ ಮಾಡಿಕೊಂಡು ಕೃಷಿ ಅಭಿವೃದ್ದಿ ಪಡಿಸಿದರೆ ಉತ್ತರ ಕರ್ನಾಟಕದ ಅಭಿವೃದ್ದಿಯ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ನೀರಾವರಿ ಯೋಜನೆಗಳಲ್ಲಿ ಉತ್ತರಕ್ಕೆ ಅನ್ಯಾಯ!

ಕರ್ನಾಟಕಕ್ಕೆ ಕೃಷ್ಣಾ ಕಣ ವೆಯ ನೀರಿನ ಪಾಲು ೯೦೪ ಟಿಎಂಸಿ. ಕಾವೇರಿ ಕಣಿವೆಯ ನೀರಿನ ಪಾಲು ೨೮೦ ಟಿಎಂಸಿ. ಕಾವೇರಿಗಿಂತ ಕೃಷ್ಣೆಯ ಜಲಾನಯನ ಪ್ರದೇಶಗಳಲ್ಲಿಯ ಆಣೆಕಟ್ಟುಗಳಿಂದ ೩ಪಟ್ಟು ಹೆಚ್ಚು ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು. ಕಾವೇರಿ ನೀರಿನ ಪಾಲಿನಲ್ಲಿ ಹೆಚ್ಚೆಂದರೆ ೧೨-೧೩ ದಶಲಕ್ಷ ಹೆಕ್ಟೇರ್ ಭೂಮಿಗೆ ನೀರೊದಗಿಸಲು ಸಾಧ್ಯ. ಆದರೆ ಕೃಷ್ಣಾ ಕಣಿವೆಯಲ್ಲಿ ನಮಗೆ ದೊರೆತಿರುವ ನೀರಿನಿಂದ ಅಂದಾಜು ೪೦ ರಿಂದ ೪೫ ದಶಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು.
ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ನೀರಾವರಿ ಯೋಜನೆಗಳು ಕರ್ನಾಟಕ ಏಕೀಕರಣದ ನಂತರವೇ ಪ್ರಾರಂಭವಾಗಿವೆ. ಆದರೆ ಸಮತೋಲಿತವಾದ ಕಾರ್ಯಾಚರಣೆ ನಡೆದಿಲ್ಲ. ಉತ್ತರ ಮತ್ತು ದಕ್ಷೀಣದ ನೀರಾವರಿ ಯೋಜನೆಗಳಲ್ಲಿ ಬಹಳಷ್ಟು ತಾರತಮ್ಯವಾಗಿದೆ. ಆಡಳಿತಾತ್ಮಕ ಅನುಮೋದನೆ, ಗಂಭೀರ ಮೇಲ್ವಿಚಾರಣೆ, ಮಾರ್ಗದರ್ಶನ, ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಯೋಜನೆಗೆ ಅಗತ್ಯ ಹಣಕಾಸು ಸೌಲಭ್ಯ ಒದಗಿಸುವುದು ಅತ್ಯವಶ್ಯ. ಈ ವಿಷಯದಲ್ಲಿ ಪ್ರಾರಂಭದಿಂದಲೂ ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಅಧಿಕಾರಸ್ಥ ರಾಜಕಾರಣ ಗಳು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ವಿಶೇಷ ಗಮನ ಹರಿಸಿಲ್ಲ. ೩-೪ ದಶಕಗಳಿಂದ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಹೇಮಾವತಿ ಹಾಗೂ ಅದರ ೧೪ ಯೋಜನೆಗಳಿಗೆ ಆದ್ಯತೆ ಮೇರೆಗೆ ಹಣಕಾಸು ನೀಡಿ ಯೋಜನೆ ಪೂರ್ಣಗೊಳಿಸಿದೆ. ಯೋಜನೆ ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಿ ೧೨ ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ದೊರೆತಿದೆ. ಆದರೆ ಕೃಷ್ಣಾ ಮೆಲ್ದಂಡೆ ಯೋಜನೆ ೧೯೬೯ರ ಬಚಾವತ್ ಆಯೋಗದ ತಿರ್ಪು ೧೯೭೬ರಲ್ಲಿ ಬಂದಿತ್ತು ೨ನೇ ಹಂತದ ನೀರನ್ನು ಬಳಕೆ ಮಾಡಿಕೊಳ್ಳಲು ೨೦ ವರ್ಷಗಳ ಕಾಲಾವಕಾಶ ನೀಡಿ ೧೯೯೭ರ ವೇಳೆಗೆ ಯೋಜನೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ಇದ್ದರೂ ೧೯೯೪ರವರೆಗೆ ಯೋಜನೆ ಕುಂಟುತ್ತ ಸಾಗಿತ್ತು. ನಂತರ ಕೆಲಸದ ವೇಗ ಹೆಚ್ಚಾದರೂ ಪೂರ್ಣ ಪ್ರಮಾಣದ ಯೋಜನೆ ಅನುಷ್ಠಾನಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಇದೇ ಅವಧಿಯಲ್ಲಿ ಕಾವೇರಿ ಕಣ ವೆಯ ಕಬಿನಿ, ಹೇಮಾವತಿ ಸೇರಿದಂತೆ ಇತರ ಸಣ್ಣಪುಟ್ಟ ಯೋಜನೆಗಳು ವೇಗವಾಗಿ ನಡೆದು ಪೂರ್ಣಗೊಂಡವು ಇದು ನಿಶ್ಚಿತವಾಗಿಯೂ ಉತ್ತರ ಕರ್ನಾಟಕದ ಮೇಲಿನ ನಿರ್ಲಕ್ಷವಲ್ಲವೇ?

ನಮಗಾದ ಅನ್ಯಾಯಕ್ಕೆ ಇಲ್ಲಿವೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು!

ಘಟಪ್ರಭಾ-ಮಲಪ್ರಭಾ ಆಣೆಕಟ್ಟು ಕಾಮಗಾರಿಗಳು ೧೯೮೧-೮೨ರಲ್ಲಿ ಪೂರ್ಣಗೊಂಡರೂ ಶಾಖಾ ಕಾಲುವೆ, ಉಪ ಕಾಲುವೆ ಹಾಗೂ ವಿತರಣಾ ಕಾಲುವೆಗಳ ನಿರ್ಮಾಣ ಕೆಲಸ ೨೦೦೨ರಲ್ಲಿ ಪೂರ್ಣಗೊಂಡಿತು. ಯುಕೆಪಿ-೩ರಲ್ಲಿ ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಉಪಯೋಜನೆಗಳು ಸೇರಿದಂತೆ ಕೃಷ್ಣಾ ಕಣಿವೆಯ ೪೦ಕ್ಕೂ ಅಧಿಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ದೂದಗಂಗಾ, ರಾಮಥಾಳ, ಸೊಂತಿ, ಬಸಾಪೂರ, ಬಳ್ಳಾರಿ ನಾಲಾ, ತಿಮ್ಮಾಪೂರ, ಗುಡ್ಡದ ಮಲ್ಲಾಪೂರ, ಹಿರಣ್ಯಕೇಶಿ, ದಂಡಾವತಿ ಏತ ನೀರಾವರಿ ಯೋಜನೆಗಳಲ್ಲಿ ಕೆಲವು ಅಪೂರ್ಣವಾಗಿವೆ. ಕೆಲವು ಪ್ರಾರಂಭವೇ ಆಗಿಲ್ಲ. ೩ ದಶಕಗಳ ನಂತರ ಮಹಾದಾಯಿ ಯೊಜನೆಗೆ ಸುಪ್ರೀಂಕೋರ್ಟ್ ನಿರ್ದೇಶನದ ನಂತರ ರಾಜ್ಯ ಸರ್ಕಾರದ ವಿಶೇಷ ಪ್ರಯತ್ನದ ಫಲವಾಗಿ ಕೇಂದ್ರಸರ್ಕಾರ ಗೆಜೆಟ್ ಪ್ರಕಟಿಸಿರುವುದು ಹರ್ಷದಾಯಕವಾಗಿದೆ.

ಉ.ಕ ಸಮಗ್ರ ನೀರಾವರಿಗೆ ಹೊಸ ಅವಕಾಶಗಳು:

ಕರ್ನಾಟಕದಲ್ಲಿ ದಕ್ಷಿಣಕ್ಕಿಂತ ಉತ್ತರದಲ್ಲಿ ಬಹಳಷ್ಟು ವಿಶಾಲವಾದ ಕೃಷಿ ಭೂಮಿ ಇದೆ. ಕೃಷ್ಣಾ ಕಣ ವೆಯ ಲಭ್ಯವಿರುವ ಒಟ್ಟು ಜಲ ಸಂಪನ್ಮೂಲದ ಜೊತೆಗೆ ಹೊಸ ನೀರಾವರಿ ಯೋಜನೆಗಳೊಂದಿಗೆ ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಲು ದಕ್ಷಿಣಕ್ಕಿಂತ ಉತ್ತರದಲ್ಲಿ ಬಹುದೊಡ್ಡ ಅವಕಾಶಗಳಿವೆ. ಬಚಾವತ್ ಆಯೋಗ ಸ್ಕಿಂ ಬಿ ತೀರ್ಪಿನನ್ವಯ ೧೩೦ ಟಿಎಂಸಿ ನೀರು ಬಳಕೆ ಮಾಡಲು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಶೀಘ್ರ ಕೆಲಸ ಪ್ರಾರಂಭಿಸಬೇಕು. ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಿಸಿದೆ. ಸರ್ಕಾರ ಬಜೇಟ್‌ನಲ್ಲಿ ವಿಶೇಷ ಅನುದಾನ ಮೀಸಲಿರಿಸಿ ಯೋಜನೆ ಅನುಷ್ಠಾನಗೊಳಿಸಬೇಕು. ಪೆನಿನ್ಸೂಲಾರ್ ಯೋಜನೆಯಡಿಯಲ್ಲಿ ಗೋದಾವರಿ-ಮಹಾನದಿ-ಕೃಷ್ಣಾ-ಕಾವೇರಿ ನದಿಜೋಡಣೆ ಯೋಜನೆಯಲ್ಲಿ ದೊರೆಯಬೇಕಾದ ನ್ಯಾಯಯುತವಾದ ಪಾಲನ್ನು ಪಡೆದುಕೊಂಡು ಮಲಪ್ರಭಾ ಅಚ್ಚುಕಟ್ಟು ಪ್ರದೇಶವಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದು.
ಕೊಯ್ನಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಸಮುದ್ರ ಸೇರಿಸುವ ೬೭.೫ ಟಿಎಂಸಿ ನೀರನ್ನು ಕರ್ನಾಟಕ ಪಡೆದು ವಿದ್ಯುತ್ ನೀಡುವ ಒಡಂಬಡಿಕೆ ಮಾಡಿಕೊಂಡು ಆ ನೀರನ್ನು ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಬರಡು ಭೂಮಿಗಳನ್ನು ನೀರಾವರಿ ಮಾಡಲು ಉಪಯೋಗಿಸಬೇಕು. ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲು ಅಥವಾ ಪರ್ಯಾಯವಾಗಿ ಮತ್ತೊಂದು ಕಿರು ಅಣೆಕಟ್ಟು ನಿರ್ಮಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಅದು ಶೀಘ್ರ ಅನುಷ್ಠಾನಕ್ಕೆ ಬರಬೇಕು. ಹಾಗೂ ಪಶ್ಚಿಮ ಘಟ್ಟದ ಶರಾವತಿ ನದಿ ನೀರನ್ನು ವರದಾ ನದಿಗೆ ಹರಿಸಿದರೆ ಆ ಮೂಲಕ ತುಂಗಭದ್ರೆಯನ್ನು ಸಮೃದ್ದಗೊಳಿಸಬಹುದು

ಎಂ.ಆರ್.ಎನ್ (ನಿರಾಣಿ ) ಫೌಂಡೇಶನ್ ೩ ನೀರಾವರಿ ಯೋಜನೆಗಳು:

ಮುರುಗೇಶ ನಿರಾಣಿಯವರು ಉತ್ತರ ಕನಾಟಕ ಸಮಗ್ರ ನೀರಾವರಿಯಾಗಿ ರೈತರ ಬದುಕು ಸದೃಢವಾಗಲಿ, ನಮ್ಮ ಭಾಗದಲ್ಲಿ ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮಗಳು ಬೆಳೆಯಲಿ ಎಂಬ ಮಹತ್ವಾಕಾಂಕ್ಷೆಯಿಂದ ಪ್ರಥಮ ಹಂತದಲ್ಲಿ ತಮ್ಮ ಬೀಳಗಿ ಮತಕ್ಷೇತ್ರದಲ್ಲಿ ೧ ಲಕ್ಷ ಎಕರೆ ಹೊಸ ನೀರಾವರಿ ಪ್ರದೇಶ ಸೃಷ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉತ್ತರ ಕರ್ನಾಟಕ ಸಮಗ್ರ ನೀರಾವರಿಗಾಗಿ ಎಂ.ಆರ್.ಎನ್ (ನಿರಾಣ ) ಫೌಂಡೇಶನ್ ಮೂಲಕ ೩ ನದಿ ಜೋಡಣೆ ಯೋಜನೆಗಳ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅಮೃತಧಾರೆ ಹೆಸರಿನಡಿ ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಕಾಳಿ ನದಿಯ ೨೫ ಟಿಎಂಸಿ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗಳನ್ನು ಸದೃಢಗೊಳಿಸುವುದು ಈ ಯೋಜನೆ ಉದ್ದೇಶ. ಬಸವಧಾರೆ ಯೋಜನೆಯಡಿ ಕೃಷ್ಣೆಯ ೩೦ ಟಿಎಂಸಿ ಪ್ರವಾಹದ ನೀರನ್ನು ಉಪಯೋಗಿಸಿಕೊಂಡು ಘಟಪ್ರಭಾ, ಮಲಪ್ರಭಾ ನದಿಗಳಿಗೆ ಹರಿಸಬಹುದು. ವಿಜಯಧಾರೆ ಹಿರಣ್ಯಕೇಶಿ ನದಿಯ ೧೦ ಟಿಎಂಸಿ ಪ್ರವಾಹದ ನೀರನ್ನು ಹಿಡಕಲ್ ಜಲಾಶಯದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ಈ ಮೂರು ಯೋಜನೆಗಳಿಂದ ಘಟಪ್ರಭಾ ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶವನ್ನು ಪೂರ್ಣ ೧೨ ತಿಂಗಳು ನೀರಾವರಿಗೆ ಒಳಪಡಿಸಲು ಸಾಧ್ಯವಿದೆ. ಉತ್ತರ ಕರ್ನಾಟಕದ ಮೂಲಕ ಅವರು ತಮ್ಮ ಫೌಂಡೇಶನ್ ಸ್ವಂತ ಖರ್ಚಿನಲ್ಲಿ ೩ ಡಿಪಿಆರ್ ತಯಾರಿಸಿ ಜಲಯಜ್ಞ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ.

ಈ ಎಲ್ಲಾ ಮೂಲಗಳಿಂದ ಉತ್ತರ ಕರ್ನಾಟಕಕ್ಕೆ ಅಂದಾಜು ೪೫೮ ಟಿಎಂಸಿಯಷ್ಟು ನೀರಿನ ಲಭ್ಯತೆ ಇದೆ. ಇದರಿಂದ ಅಂದಾಜು ೪೫ ಲಕ್ಷಕ್ಕೂ ಅಧಿಕ ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಬಹುದು. ರಾಜ್ಯದಲ್ಲಿರುವ ಒಟ್ಟು ಜಲರಾಶಿಯನ್ನು ಕ್ರೋಢಿಕರಿಸಿ ಸದ್ಬಳಕೆ ಮಾಡಿಕೊಳ್ಳುವ ಕಾರ್ಯದಲ್ಲಿ ಆಂದ್ರ, ತೆಲಂಗಾಣ ಸರ್ಕಾರಗಲು ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಕಾಲೇಶ್ವರಂ, ಪಟ್ಟೆಸಿಮಾದಂತಹ ಮಾದರಿ ಯೋಜನೆಗಳನ್ನು ಕರ್ನಾಟಕದಲ್ಲಿಯೂ ಅಳವಡಿಸಿಕೊಳ್ಳಬೇಕು. ತೆಲಂಗಾಣ ಸರ್ಕಾರವು ೮೦,೦೦೦ ಕೋಟಿ ವೆಚ್ಚದ ಕಾಲೇಶ್ವರಂ ಯೋಜನೆಯನ್ನು ಸರ್ಕಾರದ ಹಣದೊಂದಿಗೆ ಖಾಸಗಿ ಹಣಕಾಸು ಸಂಸ್ಥೆಗಳ ನೆರವು ಪಡೆದು ಅನುಷ್ಠಾನಗೊಳಿಸಿದಂತೆ ಯುಕೆಪಿಗೂ ನಮ್ಮ ಸರ್ಕಾರ ಈ ಸೂತ್ರ ಅನುಸರಿಸಬಹುದು.
ಮೈಸೂರು ಮಹಾರಾಜರ ಜಲಸಂರಕ್ಷಣೆಯ ಕಾಳಜಿಯಿಂದ ಹಳೆ ಮೈಸೂರು ಭಾಗದಲ್ಲಿ ೨೫೦೦೦ಕ್ಕೂ ಅಧಿಕ ಕೆರೆಗಳಿವೆ. ಆದರೆ ಉತ್ತರ ಕರ್ನಾಟಕಕ್ಕೆ ಈ ಸೌಭಾಗ್ಯವಿಲ್ಲ. ಹೀಗಾಗಿ ನಮ್ಮ ಭಾಗದಲ್ಲಿ ಅಂತರ್ಜಲ ಪ್ರಮಾಣ ದಾಖಲೆಯಲ್ಲಿ ಕುಸಿದಿದೆ. ಅಂತರ್ಜಲಕ್ಕೆ ಕಾಯಕಲ್ಪ ನೀಡುವ ವಿನೂತನ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಉತ್ತರ ಕರ್ನಾಟಕದ ಅಷ್ಟು ಯೋಜನೆಗಳನ್ನು ಒಂದೇ ಬಜೆಟ್‌ನಲ್ಲಿ ಕಾರ್ಯರೂಪಕ್ಕೆ ತರಲೂ ಸಾಧ್ಯವಿಲ್ಲ. ಬದಲಾಗಿ ೩-೪ ವರ್ಷಗಳವರೆಗೆ ಬಜೇಟ್‌ನಲ್ಲಿ ದೊಡ್ಡ ಪ್ರಮಾಣದ ಅನುದಾನವನ್ನು ಮೀಸಲಿಟ್ಟು ಯೋಜನೆಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಬಹುದು.
ಕೇಂದ್ರ ಸರ್ಕಾರ ಈ ವರ್ಷದ ಬಜೇಟ್‌ನಲ್ಲಿ ೨೦೨೨ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹಾತ್ವಾಕಾಂಕ್ಷೆ ಹೊಂದಿದೆ. ೨೦೨೦-೨೧ನೇ ಸಾಲಿಗಾಗಿ ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಮಾ.೫ರಂದು ಬಜೇಟ್ ಮಂಡಿಸಲಿದ್ದಾರೆ. ಉತ್ತರ ಕರ್ನಾಟಕದ ಮೇಲೆ ಯಡಿಯೂರಪ್ಪನವರಿಗೆ ವಿಶೇಷ ಪ್ರೀತಿ ಇದೆ. ಮಹಾದಾಯಿ ಮಸ್ಯೆ ಇತ್ಯರ್ಥದೊಂದಿಗೆ ಈ ಭಾಗದ ನೀರಾವರಿಗಾಗಿ ಬಿಎಸ್‌ವೈ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವಿಶೇಷವೆಂದರೆ ಉತ್ತರ ಕರ್ನಾಟಕದವರೇ ಆದ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದರೆ, ಬಿ. ಸಿ. ಪಾಟೀಲ ಕೃಷಿ ಸಚಿವರಾಗಿದ್ದಾರೆ. ಈ ಎಲ್ಲರ ಸಮಾಗಮ ಉತ್ತರ ಕರ್ನಾಟಕದ ನೀರಾವರಿ ಕ್ಷೇತ್ರದ ದೆಸೆ ಬದಲಿಸಿ ನೀರಾವರಿ ಕ್ರಾಂತಿ ಮಾಡಲು ಸಾಧ್ಯವಾಗಲಿ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಮೇಲೆ ಕವಿದಿರುವ ಗ್ರಹಣ ಕಳೆಯಲಿ. ಬೆಳಕು ಮೂಡಲಿ. ಬಸವಣ್ಣನ ನಾಡು ಸಮೃದ್ದವಾಗಲಿ. ರೈತರ ಬದುಕು ಹಸಿರಾಗಲಿ. ಕಲ್ಯಾಣ ಕರ್ನಾಟಕ ನಿರ್ಮಾಣವಾಗಲಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button