* ರಾಜ್ಯಾದ್ಯಂತ ಅನ್ವಯಿಸುವ ಏಕಸ್ವರೂಪ ದರಪಟ್ಟಿಗಳ ಪುಸ್ತಕ ಬಿಡುಗಡೆ
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಅನ್ವಯಿಸುವಂತೆ ರಾಜ್ಯಾದ್ಯಂತ ಏಕಸ್ವರೂಪ ದರಪಟ್ಟಿಗಳ ಪುಸ್ತಕವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಿಡುಗಡೆಗೊಳಿಸಿದರು.
ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡ (ದಕ್ಷಿಣ)ದ ಮುಖ್ಯ ಎಂಜನೀಯರ್ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಚಿವರು, ಕಾಮಗಾರಿಗಳ ಅನುಷ್ಠಾನದ ಪರಿಷ್ಕೃತ ಹೊಸ ನೀತಿಯ ಪುಸ್ತಕವನ್ನು ಬಿಡುಗಡೆ ಮಾಡಿದರು.
ಬಳಿಕ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಅನ್ವಯವಾಗುವಂತೆ ಏಕ ಸ್ವರೂಪ ದರಪಟ್ಟಿ ಪುಸ್ತಕ ಹೊರತಂದಿದ್ದು ಇದರಿಂದ ರಾಜ್ಯದ ಎಲ್ಲಾ ಕಡೆಗಳಲ್ಲಿ ಪಾರದರ್ಶಕ, ಸುಗಮ ಆಡಳಿತ ಮತ್ತು ಗುಣಮಟ್ಟದ ಕಾಮಗಾರಿಗಳಿಗೆ ಮತ್ತಷ್ಟು ವೇಗ ಸಿಗಲಿದೆ. ಈ ನಿಯಮವನ್ನು ನೀರಾವರಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಬೇಕು ಎಂದರು.
ಇಲಾಖೆ ಅಧಿಕಾರಿಗಳು ಪ್ರಸ್ತಾಪಿಸಿದ ವಿವಿಧ ವೃಂದಗಳ ಹುದ್ದೆಗಳ ನಿಯೋಜನೆಗೆ ಸಚಿವರು ತಾತ್ವಿಕ ಒಪ್ಪಿಗೆ ನೀಡಿ, ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಇದಕ್ಕೂ ಮೊದಲು ಕಚೇರಿಯಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.
ವಲಯ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ, ಕಾರ್ಯದರ್ಶಿ ಸಿ.ಸತ್ಯನಾರಾಯಣ, ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ.ಎಸ್.ಕೃಷ್ಣಾ ರೆಡ್ಡಿ,
ಸಿಪಿಒ ಶಿವಯೋಗಿ ಹಿರೇಮಠ, ಪ್ರಧಾನ ಅಭಿಯಂತರ ಪ್ರದೀಪ ಮಿತ್ರ ಮಂಜುನಾಥ, ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಪಾಟೀಲ, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ವಿ.ಎನ್.ಪಾಟೀಲ, ಮುಖ್ಯ ಎಂಜನೀಯರ್ ದುರ್ಗಪ್ಪ, ಉಪಮುಖ್ಯ ಎಂಜನೀಯರ್ ಕೃಷ್ಣಾ ಅಗ್ನಿಹೋತ್ರಿ, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ