ಅಥಣಿ ಕ್ಷೇತ್ರದಲ್ಲಿ ದಾಖಲೆ ಸೃಷ್ಟಿಸಿದ ಮಹೇಶ ಕುಮಠಳ್ಳಿ
ಪ್ರಗತಿವಾಹಿನಿ ಸುದ್ದಿ, ಅಥಣಿ-
ಸತತವಾಗಿ ಹದಿನೈದು ವರ್ಷಗಳ ಬಿ.ಜೆ.ಪಿ ಆಡಳಿತದ ನಂತರ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ ಪಕ್ಷದಿಂದ ಮಹೇಶ ಕುಮಠಳ್ಳಿ ಅವರನ್ನು ಶಾಸಕರನ್ನಾಗಿ ಆಯ್ಕೆಮಾಡಲಾಗಿತ್ತು.
ಒಂದಿಷ್ಟು ಅಭಿವೃದ್ಧಿ ಮಾಡಲೆಂದು ಅವರನ್ನು ಕ್ಷೇತ್ರದ ಜನತೆಯು ವಿಧಾನಸಭೆಗೆ ಕಳುಹಿಸಿದರೆ ಅವರು ತಮ್ಮ ಶಾಸಕ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಇದರಿಂದಾಗಿ ಅಥಣಿಯ ಗಲ್ಲಿ ಗಲ್ಲಿಗಳಲ್ಲಿ ಉಪಚುನಾವಣೆ ಕುರಿತು ಹಾಗೂ ಅಭ್ಯರ್ಥಿಗಳ ಬಗೆಗೆ ಚರ್ಚೆಗಳು ಆರಂಭಗೊಂಡಿವೆ.
ಅಥಣಿ ಮತಕ್ಷೇತ್ರದಲ್ಲಿ ೧೯೬೭ರಿಂದ ೨೦೧೮ ರವರೆಗೆ ೧೨ಬಾರಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಅಥಣಿಯ ಇತಿಹಾಸದಲ್ಲಿಯೇ ಇದುವರೆಗೂ ಯಾವ ಶಾಸಕರೂ ರಾಜೀನಾಮೆ ನೀಡಿದ್ದು ಅಥವಾ ಶಾಸಕ ಸ್ಥಾನದಿಂದ ಅನರ್ಹಗೊಂಡ ವಿದ್ಯಮಾನ ನಡೆದಿರಲಿಲ್ಲ. ಈ ರೀತಿ ಅನರ್ಹಗೊಂಡು ಅಥಣಿಯ ಇತಿಹಾಸದಲ್ಲಿ ಕುಮಟಳ್ಳಿ ದಾಖಲೆ ಮಾಡಿದ್ದಾರೆ.
೨೦೧೩ರ ವಿಧಾನಸಭೆಯ ಚುಣಾವಣೆಯಲ್ಲಿ ಸೋತಿದ್ದ ಮಹೇಶ ಕುಮಠಳ್ಳಿ ಅವರು ಮೊದಲ ಬಾರಿಗೆ ೨೦೧೮ ರ ಚುಣಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ವಿರುದ್ದ ದಾಖಲೆಯ ಮತಗಳನ್ನು ಪಡೆದು ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು.
ಅವಕಾಶ ಬಳಸಿಕೊಂಡು ಜನಸೇವೆ ಕೈಗೊಳ್ಳದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.
ಅಕ್ರೋಶಕ್ಕೂ ಒಳಗಾಗಿದ್ದಾರೆ:
ಅಥಣಿ ಕ್ಷೇತ್ರದಲ್ಲಿ ಯಾವುದೇ ಶಾಸಕ ರಾಜೀನಾಮೆ ನೀಡಿದ್ದು ಹಾಗೂ ಅನರ್ಹಗೊಳ್ಳುವಂತಹ ಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಇದರೊಂದಿಗೆ ಕುಮಠಳ್ಳಿ ಅವರು ಅಲ್ಲಿನ ಕಾಂಗ್ರೆಸ್‌ನ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರ ಅದಲ್ಲದೆ ಸಾರ್ವಜನಿಕರ ಅಕ್ರೋಶಕ್ಕೆ ಒಳಗಾಗಿದ್ದಾರೆ. ಜನರ ಅಸಮಾಧಾನಕ್ಕೂ ತುತ್ತಾಗಿದ್ದಾರೆ.
ಅಥಣಿ ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ನಡೆಯದಂತಹ ಘಟನೆಗಳಿಗೆ ಮಹೇಶ ಕುಮಠಳ್ಳಿ ಕಾರಣವಾಗಿದ್ದಾರೆ. ಅನಾರೋಗ್ಯ ಅಥವಾ ಇತರ ಅನಿವಾರ್ಯ ಕಾರಣಗಳಿಂದ ಯಾರೊಬ್ಬರೂ ರಾಜೀನಾಮೆ ನೀಡಿರಲಿಲ್ಲ, ಅನರ್ಹಗೊಂಡಿರಲು ಇಲ್ಲ. ಈ ಮೂಲಕ ಅವರು ಕ್ಷೇತ್ರಕ್ಕೆ ಕಳಂಕ ತಂದಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಮತದಾರರ ನಂಬಿಕೆಯನ್ನೂ ಉಳಿಸಿಕೊಳ್ಳಲಿಲ್ಲ ಎಂದು ಕಾಂಗ್ರೇಸ್ ಮುಖಂಡರು ಆರೋಪಿಸುತ್ತಾರೆ.
೨೦೧೮ ರ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರನ್ನು ಗೆಲ್ಲಿಸಲು ಸಾವಿರಾರು ಕಾರ್ಯಕರ್ತರು, ಮುಖಂಡರು ಶ್ರಮಿಸಿದ್ದರು. ಮುಖ್ಯವಾಗಿ ಜನರೂ ಕೂಡ ಅಥಣಿಯಲ್ಲಿ ಬದಲಾವಣೆ ಮಾಡಬೇಕೆಂಬ ಮನಸ್ಸಿನಿಂದ ಆಶೀರ್ವಾದ ಮಾಡಿದ್ದರು. ಇದನ್ನು ಸದ್ಬಳಕೆ ಮಾಡಿಕೊಂಡು ಕುಮಠಳ್ಳಿ ಅವರು ಜನಪರ ಕೆಲಸ ಮಾಡಬೇಕಿತ್ತು. ಇದನ್ನು ಬಿಟ್ಟು ಯಾರೋ ಒಬ್ಬರನ್ನು ಹಿಂಬಾಲಿಸಿಕೊಂಡು ಹೋಗಿ ಅವಕಾಶವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗುತ್ತದೆ ಎನ್ನುವ ಸೂಚನೆ ಮೊದಲೇ ಇತ್ತು. ಅವರ ನಡೆ ಆ ಗತಿಯಲ್ಲಿತ್ತು. ಎಷ್ಟೇ ತಿಳಿಸಿದರೂ ಅವರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಹೆಸರು ಬಹಿರಂಗಪಡಿಸಲೊಪ್ಪದ ಮುಖಂಡರೊಬ್ಬರು ಹೇಳಿದರು.
ಉಪಚುಣಾವಣೆಯ ತಯಾರಿ..
ಒಂದು ವೇಳೆ ಕ್ಷೇತ್ರದಲ್ಲಿ ಕುಮಠಳ್ಳಿ ಅವರಿಂದ ತೆರವಾದ ಸ್ಥಾನಕ್ಕೆ ಮರುಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಸವರಾಜ ಬುಟಾಳೆ ಅವರು ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಹೋದ ಚುನಾವಣೆಯಲ್ಲೂ ಆಕಾಂಕ್ಷಿಯಾಗಿದ್ದ ಅವರು ಕುಮಠಳ್ಳಿ ಪರವಾಗಿ ಕೆಲಸ ಮಾಡಿದ್ದರು. ಪಕ್ಷದ ವರಿಷ್ಠರ ಬಳಿ ಈಗಾಗಲೇ ವಿಷಯ ಪ್ರಸ್ತಾಪಿಸಿದ್ದೇನೆ. ಉಪಚುನಾವಣೆ ಎದುರಾದರೆ ನನಗೇ ಟಿಕೆಟ್ ಕೊಡಬೇಕು ಎಂದು ಕೇಳಿದ್ದೇನೆ ಎಂದಿದ್ದಾರೆ.
ಅದರ ಜೊತೆಗೆ ಇನ್ನಿತರ ಕಾಂಗ್ರೇಸ್ಸಿನ ಮುಖಂಡರಾದ ಗಜಾನನ ಮಂಗಸೂಳಿ, ಸತ್ಯಪ್ಪಾ ಬಾಗೆನ್ನವರ, ಮಾಜಿ ಶಾಸಕ ಷಹಜಹಾನ ಡೊಂಗರಗಾವ, ಎಸ್ ಎಮ್ ನಾಯಿಕ ಅದಲ್ಲದೆ ಕಾಂಗ್ರೇಸಿನ ಯುವ ನಾಯಕರಾದ ಪ್ರಬಲ ಸಮುದಾಯದ ಧರೆಪ್ಪ ಠಕ್ಕನ್ನವರ, ಶಿವಾನಂದ ಗುಡ್ಡಾಪೂರ, ನಿಶಾಂತ ದಳವಾಯಿ ಅವರೂ ಕೂಡ ರೇಸಿನಲ್ಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ