
ಪ್ರಗತಿವಾಹಿನಿ ಸುದ್ದಿ: ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡುವ ಕನಸು ಕಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್ ನಲ್ಲಿರುವ “ದ ಎಡ್ಜ್” ಸ್ಕೈ ಡೆಕ್ ಗೆ ಭೇಟಿ ಮಾಡಿ ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳನ್ನು ಪರಿಶೀಲಿಸಿದರು.
ಪತ್ನಿ ಉಷಾ ಅವರ ಜತೆ ಸ್ಕೈ ಡೆಕ್ ವೀಕ್ಷಿಸಿದ ಶಿವಕುಮಾರ್ ಅವರು ಅದರ ಮನೋಹರ ನೋಟವನ್ನು ಕಣ್ತುಂಬಿಕೊಂಡರು. ಹಡ್ಸನ್ ಯಾರ್ಡ್ಸ್ 30 ವೆಸ್ಟರ್ನ್ ಹೆಮಿಸ್ಫರ್ ನಲ್ಲಿರುವ ಕಟ್ಟಡದ 100 ನೇ ಮಹಡಿಯಲ್ಲಿ 7500 ಚದರಡಿಯ ಈ ಡೆಕ್ ಅನ್ನು ವೀಕ್ಷಣೆ ನಡೆಸಿದರು. ಈ ಡೆಕ್ ಫ್ಲೋರ್ ನಿಂದ ಹಿಡಿದು ಸೀಲಿಂಗ್ ವರೆಗೂ ಪಾರದರ್ಶಕ ಗಾಜಿನಿಂದ ಕೂಡಿದ್ದು, ಇದು ನ್ಯೂಯಾರ್ಕ್ ನಗರದ ವಿಹಂಗಮ ನೋಟಕ್ಕೆ ವೇದಿಕೆಯಾಗಿದೆ.

ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಶಿವಕುಮಾರ್ ಅವರು ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಡಾ. ಬಾಬು ಕೀಲಾರ ಅವರೊಂದಿಗೆ ಚರ್ಚಿಸಿದರು. ಈ ಪ್ರವಾಸದಲ್ಲಿ ಶಿವಕುಮಾರ್ ಅವರು ಕೀಲಾರ ಅವರ ಜತೆಗೂಡಿ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳ ವೀಕ್ಷಣೆ ನಡೆಸಿದರು.
ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ಹೆಚ್ಓಕೆಯ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಅವರ ಜತೆ ಡಿಸಿಎಂ ಚರ್ಚೆ ನಡೆಸಿದರು.
ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ಆಲೋಚನೆಗಳನ್ನು ಒಟ್ಟುಗೂಡಿಸಿದರೆ ಬೆಂಗಳೂರಿನ ಸ್ಕೈ ಲೈನ್ ಗೆ ಹೊಸ ವ್ಯಾಖ್ಯಾನ ನೀಡುವುದರ ಜೊತೆಗೆ ನಗರಾಭಿವೃದ್ಧಿಯ ಗುಣಮಟ್ಟವನ್ನು ಹೆಚ್ಚಿಸಲಿದೆ” ಎಂದು ಅಭಿಪ್ರಾಯಪಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ