*ಮೃಗಾಲಯ ವೀಕ್ಷಣೆಗೆ ಬಂದಿದ್ದ ನವವಿವಾಹಿತೆ ಲವರ್ ಜೊತೆ ಪರಾರಿ*: *ಗಂಡ ಬೈಕ್ ಪಾರ್ಕ್ ಮಾಡಿ ಬರೋ ಗ್ಯಾಪಲ್ಲೇ ಎಸ್ಕೇಪ್*

ಪ್ರಗತಿವಾಹಿನಿ ಸುದ್ದಿ: ನವವಿವಾಹಿತ ಜೋಡಿಯೊಂದು ಮೃಗಾಲಯ ವೀಕ್ಷಣೆಗೆ ಬಂದಾಗ ವಿಚಿತ್ರ ಘಟನೆಯೊಂದು ನಡೆದಿದೆ. ಪತಿ ಬೈಕ್ ಪಾರ್ಕ್ ಮಾಡಲು ತೆರಳಿದ ಕೆಲವೇ ಕ್ಷಣಗಳಲ್ಲಿ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ ಎನ್ನಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ಮೃಗಾಲಯದ ಹೊರಭಾಗದಲ್ಲಿ ಘಟನೆ ನಡೆದಿದೆ. ಶಿವಪುರಿ ಜಿಲ್ಲೆಯ ನರ್ವಾರ್ ನಿವಾಸಿಯಾದ 21 ವರ್ಷದ ಯುವಕ, 18 ವರ್ಷದ ಪತ್ನಿಯೊಂದಿಗೆ ಗ್ವಾಲಿಯರ್‌ಗೆ ಬಂದಿದ್ದ. ಮೃಗಾಲಯ ವೀಕ್ಷಿಸಿದ ಬಳಿಕ ಸಂಬಂಧಿಕರನ್ನು ಭೇಟಿಯಾಗುವ ಯೋಜನೆಯೂ ಇತ್ತು ಎನ್ನಲಾಗಿದೆ.
ಮೃಗಾಲಯದ ಪ್ರವೇಶದ್ವಾರದ ಬಳಿ ಪತ್ನಿಗೆ ಕಾಯುವಂತೆ ಹೇಳಿ ಪತಿ ಬೈಕ್ ನಿಲ್ಲಿಸಲು ತೆರಳಿದ್ದ. ಕೆಲವೇ ನಿಮಿಷಗಳಲ್ಲಿ ವಾಪಸ್ ಬಂದಾಗ ಪತ್ನಿ ಕಾಣೆಯಾಗಿದ್ದಳು. ಸುತ್ತಮುತ್ತ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ ಎಂದು ವರದಿಯಾಗಿದೆ.
ಘಟನೆ ಕೇವಲ 26 ಸೆಕೆಂಡ್‌ಗಳಲ್ಲಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಪತ್ನಿಯನ್ನು ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಯುವಕ ತನ್ನ ಚಿಕ್ಕಪ್ಪನೊಂದಿಗೆ ಪಡಾವ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ.
ದೂರಿನಲ್ಲಿ ಅರ್ಮಾನ್ ಖಾನ್ ಎಂಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿರುವ ಪತಿ, ಆತ ತನ್ನ ಪತ್ನಿಯನ್ನು ಆಮಿಷವೊಡ್ಡಿ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾನೆ. ಪತ್ನಿಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದಿರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾನೆ.
ಪಡಾವ್ ಪೊಲೀಸ್ ಠಾಣೆಯ ಉಸ್ತುವಾರಿ ಶೈಲೇಂದ್ರ ಭಾರ್ಗವ್ ಮಾಹಿತಿ ಪ್ರಕಾರ, ಮೃಗಾಲಯದ ಆವರಣ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಮಹಿಳೆ ಯಾವ ದಿಕ್ಕಿನಲ್ಲಿ ತೆರಳಿದ್ದಾಳೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಮಹಿಳೆ ಮತ್ತು ಅರ್ಮಾನ್ ಖಾನ್ ಅವರ ಮೊಬೈಲ್ ಫೋನ್‌ಗಳ ಸ್ಥಳ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ. ಮಹಿಳೆ ಸ್ವಯಂಪ್ರೇರಿತವಾಗಿ ತೆರಳಿದ್ದಾಳೆಯೇ ಅಥವಾ ಯಾರಾದರೂ ಆಮಿಷವೊಡ್ಡಿ ಕರೆದೊಯ್ದಿದ್ದಾರೆಯೇ ಎಂಬುದು ಆಕೆಯ ಹೇಳಿಕೆ ದಾಖಲಿಸಿದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




