ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜಿನಾಮೆ ಕೊಡಿಸಿ ಸರಕಾರ ರಚಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಶಾಸಕರ ರಾಜಿನಾಮೆಗೆ ತಾನು ಕಾರಣವಲ್ಲ, ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಎಷ್ಟೇ ಹೇಳಿಕೊಂಡರೂ ಯಾರೂ ನಂಬುವ ಸ್ಥಿತಿಯಲ್ಲಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 5 ಬಾರಿ ಆಪರೇಶನ್ ಕಮಲ ವಿಫಲವಾದ ಹಿನ್ನೆಲೆಯಲ್ಲಿ ಈ ಬಾರಿ ಬಹಳ ಎಚ್ಚರದ ಹೆಜ್ಜೆ ಇಡುತ್ತಿದ್ದಾರೆ. ಎಲ್ಲೂ ಎಚ್ಚರತಪ್ಪದಂತೆ ಪಕ್ಷದ ಮುಖಂಡರೂ ಜಾಗ್ರತೆ ವಹಿಸಿದ್ದಾರೆ.
ಆದರೆ, ಆಪರೇಶನ್ ಇನ್ನೇನು ಕೊನೆಯ ಹಂತಕ್ಕೆ ಬಂದಿದೆ ಎನ್ನುವಾಗ ಬಿಜೆಪಿ ಹೊಸ ತಲೆನೋವು ಎದುರಿಸುತ್ತಿದೆ. ಬೆಂಗಳೂರು ನಗರ ಶಾಸಕರ ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರೇ ವಿರೋಧಿಸುತ್ತಿದ್ದಾರೆ. ಬೆಂಗಳೂರು ಶಾಸಕರಾದ ಗೋಪಾಲಯ್ಯ, ಭೈರತಿ ಬಸವರಾಜ ಮತ್ತು ಮುನಿರತ್ನ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ಆಯಾ ಕ್ಷೇತ್ರಗಳ ಕಾರ್ಯಕರ್ತರು, ಮಜಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹತ್ತಾರು ವರ್ಷಗಳಿಂದ ಅವರನ್ನು ಎದುರು ಹಾಕಿಕೊಂಡು ಪಕ್ಷ ಸಂಘಟನೆ ಮಾಡಿದ್ದೇವೆ. ಅವರ ವಿರುದ್ಧವೇ ಚುನಾವಣೆ ಎದುರಿಸಿದ್ದೇವೆ. ಈಗ ಅವರನ್ನು ಸೇರಿಸಿಕೊಂಡರೆ ಅವರೊಂದಿಗೆ ಕೆಲಸ ಮಾಡಲು ಮನಸ್ಸು ಹೇಗೆ ಒಪ್ಪುತ್ತದೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಅವರನ್ನೆಲ್ಲ ಸಮಾಧಾನ ಮಾಡುವಲ್ಲಿ ಯಡಿಯೂರಪ್ಪ ಮತ್ತು ಇತರ ಮುಖಂಡರು ಸೋತು ಹೋಗಿದ್ದಾರೆ. ಸಧ್ಯಕ್ಕೆ ಸುಮ್ಮನಿರಿ. ಈಗ ಸರಕಾರ ರಚಿಸುವುದು ನಮ್ಮ ಉದ್ದೇಶ. ನಂತರ ಎಲ್ಲವನ್ನೂ ಸರಿಪಡಿಸೋಣ. ಕುಳಿತು ಮಾತನಾಡೋಣ ಎಂದು ಸಮಾಧಾನಪಡಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ