ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಅಂಬಿಗರ ಚೌಡಯ್ಯನವರಿಗೆ ಇನ್ನೊಂದು ಹೆಸರು ”ನಿಜಶರಣರು” ಅವತ್ತಿನ ಕಾಲದಲ್ಲಿ ಯಾವುದೇ ವಿಷಯಕ್ಕೆ ರಾಜಿಯಾಗದೇ ಸತ್ಯ ಮತ್ತು ನಿಷ್ಟುರತನದಿಂದ ತಮ್ಮ ವಿಚಾರಗಳನ್ನು ಸಮಾಜಕ್ಕೆ ತಿಳಿಸಿದವರು. ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಎಲ್ಲರ ಗಮಸೆಳೆದರು ಎಂದು ಯಮಕನಮರಡಿ ಮತಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ (ಜ.21) ಏರ್ಪಡಿಸಲಾಗಿದ್ದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಬೇಕು. ಆರ್ಥಿಕ ಸ್ವಾವಲಂಬಿಯಾಗಬೇಕು ಎಂಬ ನಿಲುವನ್ನು ಹೊಂದಿದವರು ಅಂಬಿಗ ಚೌಡಯ್ಯನವರು. ಬಸವಣ್ಣನವರ ಅನುಯಾಯಿಗಳನ್ನು ಹೊರಹಾಕಲು ಅವರ ಬರೆದ ವಚನಗಳನ್ನು ನಾಶಗೊಳಿಸಲು ಪ್ರಯತ್ನಿಸಿದಾಗ ಅವುಗಳನ್ನು ರಕ್ಷಿಸಿದವರಲ್ಲಿ ಅಂಬಿಗರ ಚೌಡಯ್ಯನೊಬ್ಬವರು ಪ್ರಮುಖರು.
ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆಗೆ ಸೀಮಿತವಾಗಿರದೆ ಅವರ ವಿಚಾರಗಳು ಸಮಾಜ ಮತ್ತು ಯುವಪೀಳಿಗೆಗೆ ಪ್ರತಿದಿನ ತಲುಪುವಂತದಾಗಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಮಾರುತಿ ಶಾಲೆಮನೆ ಅವರು, ನಿಜಶರಣ ಅಂಬಿಗರ ಚೌಡಯ್ಯನವರು ವಿಶ್ವಮಾನವ ಸಂದೇಶ ಸಾರಿದವರಲ್ಲಿ ಮೊದಲನೆಯವನಾಗಿ ನೇರನುಡಿ, ವಚನಗಳ ಮೂಲಕ ಜನ ಗೆದ್ದವರು ಎಂದು ಹೇಳಿದರು.
ಸಾತ್ವಿಕ ಕ್ರಾಂತಿಗಳ ಮೂಲಕ ಜನರನ್ನು ಜಾಗೃತಿಗೊಳಿಸಿದ ಅವರು, ಮಹಾನ್ ವೈಚಾರಿಕ ಶಕ್ತಿಯಾಗಿ ಬೆಳೆದವರು. ಸಮಾಜದ ವಿಪರ್ಯಾಸ ಏನೆಂದರೆ ಸಮಾಜ ಬೆಳೆಯಲು ಬಹು ಶತಮಾನಗಳೇ ಬೇಕಾಯಿತು. ಬಹುಶಃ ಇದಕ್ಕೆ ಕಾರಣ ಅಂಬಿಗರ ಚೌಡಯ್ಯನವರ ನಿಷ್ಟುರತನವಾಗಿತ್ತು. ಮಾತಿಗಿಂತ ಕೆಲಸದಲ್ಲಿ ಮುನ್ನಡೆಯಾಗಿ ಕಾಣಿಸಿದವರು ಅಂಬಿಗರ ಚೌಡಯ್ಯನವರು ಎಂದು ಹೇಳಿದರು.
ಅಂಬಿಗರ ಚೌಡಯ್ಯ ಅವರು ನಿಷ್ಟುರದ ಭಾವದೊಳಗೆ ತನ್ನ ಬರಹವನ್ನೇ ಬದಿಗಿಟ್ಟು ಚಳುವಳಿಕಾರರನಾಗಿ, ಬಂಡಾಯಗಾರನಾಗಿ, ಬರಹಗಾರನಾಗಿ ಉಳಿದರು. ಡೋಂಗಿಗಳು, ಡಂಬಾಚಾರರು, ಕಪಟ ವೇಷಧಾರಿಗಳ ವಿರುದ್ಧವಾಗಿದ್ದರು ಎಂಬುದನ್ನು ಸೋದಾರಣವಾಗಿ ನೆನಪಿಸಿಕೊಟ್ಟರು.
ಇನ್ನೋರ್ವ ಅತಿಥಿಗಳಾದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಬಸವಣ್ಣವರು ಹಾಕಿಕೊಟ್ಟಂತಹ ಅನುಭವ ಮಂಟಪದಲ್ಲಿ ಕ್ರಾಂತಿಕಾರಿ ವಚನಗಾರರಾಗಿ ಪ್ರಸಿದ್ಧಿ ಹೊಂದಿದವರು ಅಂಬಿಗರ ಚೌಡಯ್ಯನವರು ವಚನಗಳನ್ನು ಬರೆದು ಸಮಾಜ ಸುಧಾರಣೆಗೆ ಪ್ರಯತ್ನಿಸಿದರು.
ವೈಯಕ್ತಿಕ ಬದುಕನ್ನು ಬದಿಗಿಟ್ಟು ಸಮಾಜದ ಸಲುವಾಗಿ ಶ್ರಮಿಸಿದ ಕೀರ್ತಿ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದರು. ನಾವೆಲ್ಲರೂ ಕೇವಲ ಜಯಂತಿ ಮಾಡಿ ಹೋಗದೆ ಒಂದಿಷ್ಟು ಅವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಜಯಂತಿ ಸಮಾಜಕ್ಕೆ ಮಾದರಿಯಾಗುತ್ತದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ದಿಲೀಪ್ ಕುರಂದವಾಡೆ, ಸಮಾಜದ ಮಾಜಿ ಅಧ್ಯಕ್ಷರಾದ ಗಂಗಾಧರ ತಳವಾರ ಹಾಗೂ ಸಮುದಾಯದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ನಗರದಲ್ಲಿ ಭವ್ಯ ಮೆರವಣಿಗೆ:
ಇದಕ್ಕೂ ಮುನ್ನ ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾಮಂದಿರದವರೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಅಂಬಾರಿಯ ಮೇಲಿಟ್ಟುಕೊಂಡು ಭವ್ಯ ಮೆರವಣಿಗೆ ನಡೆಯಿತು.
ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಮಂಗಳಾ ಅಂಗಡಿ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ದಿಲೀಪ್ ಕುರಂದವಾಡೆ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಅಂಬಾರಿ ಹೊತ್ತ ಆನೆ, ಪಲ್ಲಕ್ಕಿಯೊಂದಿಗೆ ಸಾಗಿದ ಮೆರವಣಿಗೆಯು ಆರ್ ಟಿ ಓ ಸರ್ಕಲ್ ಮಾರ್ಗವಾಗಿ ಕಿತ್ತೂರ ಚೆನ್ನಮ್ಮ ವೃತ್ತದ ಕುಮಾರ ಗಂಧರ್ವ ಕಲಾಮಂದಿರ ತಲುಪಿತು. ಸಮಾಜದ ಗಣ್ಯರು, ಮಹಿಳೆಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿವಿಧ ಕಲಾತಂಡಗಳು ಮತ್ತು ವೇಷಭೂಷಣ ತೊಟ್ಟ ಕಲಾವಿದರು, ಪೂರ್ಣಕುಂಭ ಹೊತ್ತ ನೂರಾರು ಮಹಿಖೆಯರು ಹಾಗೂ ಅಂಬಾರಿ ಹೊತ್ತುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಯು ಗಮನಸೆಳೆಯಿತು.
ಅನಧಿಕೃತ ಪ್ರಾರ್ಥನಾ ಮಂದಿರ ನೆಲಸಮ ಮಾಡಿ – ಬಜರಂಗದಳ ಆಗ್ರಹ
https://pragati.taskdun.com/demolish-unauthorized-prayer-hall-bajrang-dal-demand/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ