Belagavi NewsBelgaum NewsKannada NewsKarnataka NewsLatestPolitics

*ನಿಲಜಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

1.90 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ: ನಿಲಜಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದ್ದು, ಇದಕ್ಕಾಗಿ 1.90 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೊಳಗೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಪೇವರ್ಸ್ ಅಳವಡಿಕೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಗ್ರಾಮವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ ಎಂದು ಹೇಳಿದರು.

ಗ್ರಾಮದ ಜಾತ್ರಾ ಮಹೋತ್ಸವಕ್ಕೂ ಮುನ್ನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಜಾತ್ರೆಗೆ ದೂರದ ಊರುಗಳಿಂದ ಆಗಮಿಸುವ ಜನರಿಗೆ ಯಾವುದೇ ತೊಂದರೆಗಳು ಆಗದಂತೆ ವ್ಯವಸ್ಥೆ ಮಾಡಿಕೊಡಬೇಕು. ಗ್ರಾಮದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದರು.

Home add -Advt

ಕ್ಷೇತ್ರದ ಯಾವುದೇ ಊರಿನಲ್ಲಿ ಜಾತ್ರೆಗಳಿದ್ದರೂ ಅಲ್ಲಿ ಊರಿನ ಮಗಳಾಗಿ, ಮೊದಲು ಹಾಜರಾಗಿ ಏನೇನು ಕೆಲಸಗಳಾಗಬೇಕು ಎಂದು ಊರಿನ ಹಿರಿಯರ ಜೊತೆ ಚರ್ಚಿಸಿ, ಎಲ್ಲ ವ್ಯವಸ್ಥೆ ಮಾಡುತ್ತಿದ್ದೇನೆ. ಒಬ್ಬ ಶಾಸಕಿಯಾಗಿ, ರಾಜಕಾರಣವನ್ನೆಲ್ಲ ಬದಿಗಿಟ್ಟು, ಕ್ಷೇತ್ರವೇ ನನ್ನ ಮನೆ, ಕ್ಷೇತ್ರದ ಜನರೆಲ್ಲ ನನ್ನ ಕುಟುಂಬದ ಸದಸ್ಯರು ಎಂದು ತಿಳಿದು ಕೆಲಸ ಮಾಡುತ್ತಿದ್ದೇನೆ. ಯಾರು ಮತ ಹಾಕಿದ್ದಾರೆ, ಯಾರು ಏನು ಮಾತನಾಡಿದ್ದಾರೆ ಎನ್ನುವ ಯಾವುದೇ ಯೋಚನೆ ಮಾಡದೆ ಅಭಿವೃದ್ಧಿ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ ಎಂದರು.

ಜಾತ್ರೆಗೆ ಪೂರ್ವ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಜಾತ್ರೆಯ ನೆಪದಲ್ಲಿ ಊರಿನ ಅಭಿವೃದ್ಧಿಯಾಗುತ್ತದೆ, ಸಂತಸ, ಸಂಭ್ರಮ, ಭಕ್ತಿಯಿಂದ ನಾವೆಲ್ಲ ಸೇರಿ ಜಾತ್ರೆ ಮಾಡಿ ದೇವಿಯ ಕೃಪೆಗೆ ಪಾತ್ರರಾಗೋಣ. ನಮ್ಮ ಗ್ರಾಮೀಣ ಕ್ಷೇತ್ರದ ಎಲ್ಲ ಭಾಗಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆಪದಲ್ಲಿ ನಾನು ಊರಿಗೆ ಆಗಮಿಸಿ, ನಿಮ್ಮೆಲ್ಲರ ಯೋಗಕ್ಷೇಮ ವಿಚಾರಿಸುವ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಈ ವೇಳೆ ಭರಮಾ ಪಾಟೀಲ, ಸಂಜಯ ಪಾಟೀಲ, ಗೋವಿಂದ ಪಾಟೀಲ, ನಿಂಗಪ್ಪ ಮೊದಗೇಕರ್, ದೀಪಕ್ ಕೇತಕರ್, ಮಧು ಮೊದಗೇಕರ್, ವಿನಾಯಕ ಬಾನಗಾಡೆ, ಚಂದ್ರಕಾಂತ ಮೊದಗೇಕರ್, ವಸಂತ ಪಾಟೀಲ, ಕಿರಣ ಪಾಟೀಲ, ಶಂಕರ ಮೆನಸೆ, ರಮೇಶ ಮೊದಗೇಕರ್, ಅಪ್ಪಾಜಿ ಗಾಡೇಕರ್, ಕಿರಣ ಶಿಂದೋಳ್ಕರ್ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button