ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇಂದು ಬೆಳಗ್ಗೆ ಸುಮಾರು 5.30ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ದೆಹಲಿ ಕಾರಾಗೃಹ ನಿಯಮ 2018ರ ಅನುಸಾರ ಗಲ್ಲುಶಿಕ್ಷೆ ಜಾರಿಗೊಳಿಸುವ ಮುನ್ನ ಜೈಲಿನ ಸಿಬ್ಬಂದಿ ಸುಮಾರು 36 ಗಂಟೆಗಳ ಕಾಲ ಸಿದ್ಧತೆ ನಡೆಸಿದ್ದರು. ಉತ್ತರ ಪ್ರದೇಶದ ಮೀರತ್‌ನಿಂದ ಅನುಭವಿ ಹ್ಯಾಂಗ್‌ಮನ್ ನಾಲ್ವರ ಗಲ್ಲುಶಿಕ್ಷೆಯನ್ನು ಪೂರ್ಣಗೊಳಿಸಿದರು.
ಗಲ್ಲಿಗೇರಿದ ನಾಲ್ವರು ಅಪರಾಧಿಗಳಾದ ಪಾವನ್ ಗುಪ್ತಾ, ವಿನಯ್ ಶರ್ಮಾ,ಅಕ್ಷಯ್ ಕುಮಾರ್, ಮುಕೇಶ್ ಮೃತಪಟ್ಟಿರುವುದನ್ನು ವೈದ್ಯರು ದೃಢ ಪಡಿಸಿದರು. ಬಳಿಕ ಮೃತದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ದೀನ ದಯಾಳ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಗಲ್ಲಿಗೇರಿದ ಅಪರಾಧಿಗಳು ಹಿಂದಿನ ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದರು. ಭಯದಲ್ಲೇ ರಾತ್ರಿಯನ್ನು ಕಳೆದರು. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ತಿಹಾರ್ ಜೈಲಿನ ಡಿಜಿ ಮಾಹಿತಿ ನೀಡಿದರು.
ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲಿಗೆ ಬಂದಿದ್ದ ಉತ್ತರ ಪ್ರದೇಶದ ಮೀರತ್‌ನ ಅನುಭವಿ ಹ್ಯಾಂಗ್‌ಮನ್ ಪವನ್ ಜಲ್ಲದ್ ಅವರನ್ನು ಬಿಗಿ ಭದ್ರತೆಯಲ್ಲಿ ವಾಪಸ್ ಕಳುಹಿಸಿಕೊಡಲಾಯಿತು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ್ದಕ್ಕೆ ಹ್ಯಾಂಗ್ ಮೆನ್ ಸಂತಸ ವ್ಯಕ್ತಪಡಿಸಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ ನಂತರ ಪ್ರತಿಕ್ರಿಯೆ ನೀಡಿದ ನಿರ್ಭಯಾ ತಂದೆ ಬದ್ರಿನಾಥ್ ಸಿಂದ್, ನಮ್ಮ ದೀರ್ಘ ಕಾಲದ ಹೋರಾಟಕ್ಕೆಇಂದು ನ್ಯಾಯ ದೊರೆತಿದೆ. ಇದು ರಾಷ್ಟ್ರದ ಎಲ್ಲ ಮಹಿಳೆಯರ ದಿನ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ