ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಅತ್ಯಾಚಾರ ಪ್ರಕರಣ ಅಪಪಾಧಿ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ನಾಲ್ವರು ಅಪರಾಧಿಗಳಿಗೂ ಗಲ್ಲುಶಿಕ್ಷೆ ಖಚಿತಪಡಿಸಿದೆ.
ಈ ಹಿಂದೆಯೇ ನಾಲ್ವರ ಗಲ್ಲುಶಿಕ್ಷೆಗೆ ಜನವರಿ 22 ರಂದು ದಿನಾಂಕ ನಿಗದಿಯಾಗಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ರದ್ದು ಕೋರಿ ಮೇಲ್ಮನವಿ ಅರ್ಜಿ ಹಾಗೂ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡಿತ್ತು. ಈ ನಡುವೆ ದೆಹಲಿ ಪಟಿಯಾಲಾ ಹೌಸ್ ನ್ಯಾಯಾಲಯ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಹೊಸದಾಗಿ ಡೆತ್ ವಾರಂಟ್ ಜಾರಿಮಾಡಿ, ಫೆಬ್ರವರಿ.1 ಗಲ್ಲುಶಿಕ್ಷೆ ವಿಧಿಸುವಂತೆ ಪ್ರಕಟಿಸಿತ್ತು.
ಆದರೆ, ಈ ನಾಲ್ವರ ಪೈಕಿ ಪ್ರಮುಖ ಆರೋಪಿಯಾಗಿದ್ದ ಪವನ್ ಕುಮಾರ್ ಗುಪ್ತಾ ಘಟನೆ ನಡೆಯುವಾಗ ತಾನು ಬಾಲಕನಾಗಿದ್ದೆ ಎಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಅಪರಾಧಿಗಳ ಗಲ್ಲುಶಿಕ್ಷೆ ವಿಳಂಬವಾಗುತ್ತಿದ್ದ ಹಿನ್ನಲೆಯಲ್ಲಿ ತ್ವರಿತ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್, ನ್ಯಾಯಮೂರ್ತಿ ಆರ್ ಬಾನುಮತಿ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವನ್ನು ರಚಿಸಿತ್ತು. ಜಸ್ಟೀಸ್ ಬಾನುಮತಿ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಎ.ಎಸ್.ಬೋಪಣ್ಣ ಅವರಿದ್ದ ಈ ನ್ಯಾಯಪೀಠ ಇದೀಗ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿ, ಅರ್ಜಿ ತಿರಸ್ಕರಿಸಿದ್ದು, ಗಲ್ಲುಶಿಕ್ಷೆ ಖಚಿತಪಡಿಸಿದೆ.
ಅಪರಾಧಿ ಪವನ್ ಗುಪ್ತಾ ಶಾಲಾ ದಾಖಲಾತಿಯನ್ನು ಪರಿಶೀಲಿಸಿದ ನ್ಯಾಯಾಲಯ ಬಾಲಾಪರಾಧಿ ಎಂದು ತನ್ನನ್ನು ಪರಿಗಣಿಸುವಂತೆ ನೀಡಿದ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ಅಲ್ಲದೆ, ನಿರ್ಭಯಾ ಪ್ರಕರಣ ನಡೆಯುವಾಗ ಪವನ್ ಬಾಲಕನಾಗಿರಲಿಲ್ಲ ಎಂದು ತಿಳಿಸಿದೆ. ಈ ಮೂಲಕ ದೆಹಲಿ ಹೈಕೋರ್ಟ್ ಜಾರಿ ಮಾಡಿರುವ ಡೆತ್ ವಾರಂಟ್ನಂತೆ ಈ ನಾಲ್ವರೂ ಫೆಬ್ರವರಿ 1 ರಂದು ಗಲ್ಲಿಗೇರುವುದು ಖಚಿತವಾಗಿದೆ.
2012 ಡಿ.16ರಂದು ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಗ್ಯಾಂಗ್ ರೆಪ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 6 ಜನ ಕಾಮುಕರು ಚಲಿಸುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ರಸ್ತೆಯಲ್ಲಿ ಎಸೆದು ಹೋಗಿದ್ದರು. ಕೆಲ ದಿನಗಳ ಜೀವನ್ಮರಣ ಹೋರಾಟದ ಬಳಿಕ ಆಕೆ ಸಾವನ್ನಪ್ಪಿದ್ದರು. ಪೊಲೀಸರು ಎಲ್ಲಾ 6 ಮಂದಿಯನ್ನು ಬಂಧಿಸಿದ್ದರು. ಅವರಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದು, ಆತನಿಗೆ ಬಾಲಾಪರಾಧ ನಿಯಮದ ಪ್ರಕಾರ ಶಿಕ್ಷೆಯಾಗಿದೆ. ರಾಮ್ ಸಿಂಗ್ ಎಂಬ ಪ್ರಮುಖ ಆರೋಪಿಯು ತಿಹಾರ್ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದ್ದು, ಮೇಲ್ಮನವಿ, ಕ್ಷಮಾದಾನ ಅರ್ಜಿಗಳ ಕಾರಣದಿಂದಾಗಿ ಅಪರಾಧಿಗಳ ಗಲ್ಲು ವಿಳಂಬವಾಗುತ್ತಾ ಬಂದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ