ಪ್ರಗತಿವಾಹಿನಿ ಸುದ್ದಿ; ನವದೆಹಲಿ; ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್ ನ ಎರಡನೇ ಹಂತದ ವಿವರಣೆ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರೈತರು, ರಸ್ತೆ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ಈ ಪ್ಯಾಕೇಜ್ನಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ, ವಲಸೆ ಕಾರ್ಮಿಕರಿಗೆ, ಮುದ್ರಾದೊಂದಿಗೆ ಶಿಶು ಸಾಲ, ರಸ್ತೆ ಬದಿಯ ವ್ಯಾಪಾರಿಗಳಿಗೆ, ಗೃಹ, ಬುಡಕಟ್ಟು ಜನಾಂಗದ ಉದ್ಯೋಗ ಪೀಳಿಗೆಗೆ ಹಾಗೂ ಸಣ್ಣ ರೈತರನ್ನು ಒಳಗೊಂಡಂತೆ 9 ಪ್ರಮುಖ ನಿರ್ಧಾರಗಳನ್ನು ವಿವರಿಸಿದರು.
2020ರ ಮಾರ್ಚ್ 1 ಮತ್ತು ಏಪ್ರಿಲ್ 30 ನಡುವಲ್ಲಿ ಕೃಷಿ ವಲಯಕ್ಕೆ 86,600 ಕೋಟಿ ಸಾಲ ಮಂಜೂರು ಮಾಡಿದೆ. 63 ಲಕ್ಷ ರೈತರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ನಬಾರ್ಡ್ನಿಂದ ಸಹಕಾರ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ 2020ರ ಮಾರ್ಚ್‌ನಲ್ಲಿ 29,500 ಕೋಟಿ ಹಣ ಒದಗಿಸಲಾಗಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ 2020 ರ ಮಾರ್ಚ್‌ನಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 4,200 ಕೋಟಿ ರೂ. ನೀಡಲಾಗಿದೆ. ಹಾಗೂ 2020 ರ ಮಾರ್ಚ್‌ನಿಂದ ರಾಜ್ಯ ಸರಕಾರಿ ಸಂಸ್ಥೆಗಳಿಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು 6,700 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಸುಮಾರು 3 ಕೋಟಿ ಸಾಮಾನ್ಯ ರೈತರು 4 ಲಕ್ಷ ಕೋಟಿ ರೂ.ಗಳ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆದಿದ್ದಾರೆ. ಅವರಿಗೆ ಆರ್‌ಬಿಐ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ.
ವಲಸೆ ಕಾರ್ಮಿಕರು ಸುರಕ್ಷಿತವಾಗಿ ಮನೆ ತಲುಪಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಈಗಾಗಲೇ ಅವರಿಗೆ ಎರಡು ತಿಂಗಳ ಉಚಿತ ರೇಷನ್ ನೀಡುವ ಘೋಷಣೆ ಮಾಡಲಾಗಿದೆ.
5 ಕೆಜಿ ಅಕ್ಕಿ ಅಥವಾ ಗೋದಿ, 1 ಕೆಜಿ ಬೆಳೆಕಾಳುಗಳು ಸೇರಿದಂತೆ ಉಚಿತ ರೇಷನ್ ನೀಡಲಾಗುತ್ತಿದ್ದು, ಇದರಿಂದ 8 ಕೋಟಿ ವಲಸೆ ಕಾರ್ಮಿಕರಿಗೆ ಅನುಕೂಲವಾಗಿದೆ.
ಪ್ರಮುಖಾಂಶಗಳು:
* ಬೀದಿ ಬದಿ ವ್ಯಾಪಾರಿ, ಮನೆಯಲ್ಲಿ ಕೆಲಸ ಮಾಡೋರಿಗೆ 10 ಸಾವಿರದವರೆಗೆ ಸಾಲ ಯೋಜನೆ. ಒಂದು ತಿಂಗಳಲ್ಲಿ ಈ ಯೋಜನೆ ಜಾರಿ
* ಸಾಲ ಪಡೆದ ವ್ಯಾಪಾರಸ್ಥರು ಡಿಜಿಟಲ್ ಮೂಲಕ ವ್ಯವಹರಿಸಿದ್ರೆ ಹೆಚ್ಚು ಲಾಭ. ಇದಕ್ಕಾಗಿ 5 ಸಾವಿರ ಕೋಟಿ ರೂ. ಮೀಸಲು. ಈ ಯೋಜನೆಯಿಂದ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭ
* ಮುಂದಿನ ಎರಡು ತಿಂಗಳೂ 8 ಕೋಟಿ ವಲಸೆ ಕಾರ್ಮಿಕರಿಗೆ 3500 ಕೋಟಿ ರೂ. ಅನುದಾನದಲ್ಲಿ ಉಚಿತ ಪಡಿತರ ವಿತರಣೆ. ಪ್ರತಿ ವ್ಯಕ್ತಿಗೆ ಅಕ್ಕಿ ಅಥವಾ ಗೋಧಿ 5 ಕೆ.ಜಿ ಹಾಗೂ ಕುಟುಂಬಕ್ಕೆ 1 ಕೆ.ಜಿ. ಕಾಳು ರಾಜ್ಯ ಸರ್ಕಾರಗಳಿಂದ ವಿತರಣೆ
* ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ವಿತರಣೆ.
* ನ್ಯಾಷನಲ್ ಪೋರ್ಟಬಿಟಲಿ (ಒನ್ ನೇಷನ್, ಒನ್ ರೇಷನ್ ಕಾರ್ಡ್) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಯಾವುದೇ ರಾಜ್ಯದ ರೇಷನ್ ಕಾರ್ಡ್ ಇದ್ದರೂ ದೇಶದ ಯಾವುದೇ ಭಾಗದಲ್ಲಾದರೂ ಬಳಕೆ ಮಾಡಲು ಅವಕಾಶ.
* ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರಕ್ಕೆ 63 ಲಕ್ಷ ಸಾಲ ಮಂಜೂರು. ಈ ಸಾಲದ ಒಟ್ಟು ಮೊತ್ತ 86,600 ಕೋಟಿ ರೂಪಾಯಿ.
* ನಗರ ಪ್ರದೇಶದಲ್ಲಿ ವಾಸವಾಗಿರುವ ಬಡವರಿಗೆ ಎಸ್‍ಡಿಆರ್‍ಎಫ್ ಮೂಲಕ 11 ಸಾವಿರ ಕೋಟಿ ಮಂಜೂರು.
* ನಿರಾಶ್ರಿತರರಿಗೆ ಸರ್ಕಾರದಿಂದ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಜೊತೆಗೆ ಹಣದ ವ್ಯವಸ್ಥೆ
* 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ಮತ್ತು 1.20 ಲಕ್ಷ ಲೀಟರ್ ಸ್ಯಾನಿಟೈಸರ್ ಉತ್ಪಾದಿಸಲು ಅವಕಾಶ-ಇದರಿಂದ ಪರೋಕ್ಷವಾಗಿ ನಗರ ಪ್ರದೇಶದಲ್ಲಿ ಉದ್ಯೋಗ ಹೆಚ್ಚಳ.
* ದೇಶಾದ್ಯಂತ ಪೈಸಾ ಪೋರ್ಟಲ್ ಜಾರಿ. ಹೊಸದಾಗಿ 7,200 ಸ್ವಸಹಾಯ ಸಂಘಗಳು ಕಾರ್ಯ ಆರಂಭಗೊಂಡಿವೆ.
* ಗ್ರಾಮೀಣ ಬ್ಯಾಂಕುಗಳಿಗೆ ನಬಾರ್ಡ್ ನಿಂದ 29,500 ಕೋಟಿ ಸಹಾಯ.
* ವಲಸೆ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇದರ ನೇರ ಲಾಭ ತಲುಪಿಸುವ ಗುರಿ ಇದೆ.
* ನಗರಗಳಿಂದ ಗ್ರಾಮಗಳಿಗೆ ತೆರಳಿರೋ ವಲಸೆ ಕಾರ್ಮಿಕರಿಗೆ ಪಂಚಾಯ್ತಿ ಮೂಲಕ ನರೇಗಾ ಯೋಜನೆ ಅಡಿ ಉದ್ಯೋಗ ಸೃಷ್ಟಿ.ಕನಿಷ್ಠ ವೇತನವನ್ನು 182ರಿಂದ 202 ರೂ.ಗಳಿಗೆ ಹೆಚ್ಚಳ
* ಪ್ರತಿಯೊಬ್ಬ ದಿನಗೂಲಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಪ್ರಾಮುಖ್ಯತೆ.
*ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಹೊಸ ಮಾರ್ಗದರ್ಶಿ ಪ್ರಕಟ
* ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆ. ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಶೀಘ್ರದಲ್ಲಿ ಮಾರ್ಗಸೂಚಿ ಪ್ರಕಟ
* ನಗರದ ಬಡವರಿಗೆ ಬಾಡಿಗೆ ಮನೆಗಳನ್ನು ಸಂಕೀರ್ಣಗಳಾಗಿ ಮಾಡುವ ಪ್ಲಾನ್
* ಅತಿ ಸಣ್ಣ ಸಾಲದಾರರಿಗೆ ಮುದ್ರಾ ಶಿಶು ಯೋಜನೆಯಡಿಯ ಸಾಲ. ಮುದ್ರಾ ಯೋಜನೆಗಾಗಿ 15 ಸಾವಿರ ಕೋಟಿ. 12 ತಿಂಗಳು ಮುದ್ರಾ ಯೋಜನೆಯಡಿ (ಶಿಶು ಲೋನ್) ಶೇ.2ರಷ್ಟು ಬಡ್ಡಿ ವಿನಾಯ್ತಿ. ಈ ಯೋಜನೆಯಿಂದ ಸುಮಾರು 3 ಕೋಟಿ ಜನರಿಗೆ ಲಾಭ ಸಿಗಲಿದೆ.
* ಮಧ್ಯಮ ವರ್ಗಕ್ಕೆ ಗೃಹ ಸಾಲದಲ್ಲಿ ಸಬ್ಸಿಡಿ. ಈ ಸಬ್ಸಿಡಿಯ ಅವಧಿಯನ್ನು ಮಾರ್ಚ್ 2021ರವರೆಗೆ ವಿಸ್ತರಿಸಲಾಗುವುದು. 6 ರಿಂದ 18 ಲಕ್ಷ ಆದಾಯವುಳ್ಳ ಮಧ್ಯಮ ವರ್ಗಕ್ಕೆ ಸಬ್ಸಿಡಿ ಸಿಗಲಿದೆ.
* ಉದ್ಯೋಗ ಸೃಷ್ಟಿಗಾಗಿ 6 ಸಾವಿರ ಕೋಟಿ ಅನುದಾನ. ಬುಡಕಟ್ಟು ಮತ್ತು ಆದಿವಾಸಿಗಳಿಗೆ ತೋಟಗಾರಿಕೆ ಮತ್ತು ಅರಣ್ಯೀಕರಣದಲ್ಲಿ ಉದ್ಯೋಗ ಸೃಷ್ಟಿ.
* ನಬಾರ್ಡ್ ಮೂಲಕ ರೈತರಿಗೆ 30 ಸಾವಿರ ಕೋಟಿ ತುರ್ತು ಹಣಕಾಸು ನೆರವು.
* ಮೀನುಗಾರಿಗೆ ಮತ್ತು ಹೈನುಗಾರಿಕೆ ಸೇರಿದಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ಕೋಟಿ ಸಾಲ ವಿತರಣೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ