ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರು ಆತಂಕಕ್ಕೀಡಾಗಿರುವ ನಡುವೆಯೇ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಕೊಂಚ ರಿಲೀಫ್ ನೀಡಿದೆ. ಆದಾಯ ತೆರಿಗೆ ಪಾವತಿ. ಆಧಾರ್-ಪ್ಯಾನ್ ಜೋಡಣೆ, ವಿವಾದ್ ಸೇ ವಿಶ್ವಾಸ್ ಸೇರಿದಂತೆ ಕಾಲಾವಕಾಶ ವಿಸ್ತರಣೆ ಮಾಡಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್, ಆದಾಯ ತೆರಿಗೆ ಪಾವತಿ, ಐಟಿ ರಿಟರ್ನ್ಸ್ ಸಲ್ಲಿಕೆಗೆ ಮಾರ್ಚ್ 31 ಕೊನೇ ದಿನವಾಗಿತ್ತು. ಆದರೆ ಜೂನ್ 30ರವರೆಗೆ ಅವಧಿ ವಿಸ್ತರಿಸಿ ಕಾಲಾವಕಾಶ ನೀಡಲಾಗುವುದು. ತೆರಿಗೆ ಪಾವತಿ ವಿಳಂಬವಾದರೆ ಶೇ.12ರಷ್ಟಿದ್ದ ದಂದದ ಮೊತ್ತವನ್ನು ಶೇ.9ಕ್ಕೆ ಇಳಿಸಲಾಗಿದೆ.
ಆಧಾರ್ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜೂನ್ 30ರವರೆಗೆ ಸಮಯ ನೀಡಲಾಗಿದೆ. ಅಲ್ಲದೇ ವಿವಾದ್ ಸೇ ವಿಶ್ವಾಸ್ ಯೋಜನೆ ಜೂನ್ 30ರವರೆಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಅವಧಿಯೂ ವಿಸ್ತರಣೆ ಮಾಡಲಾಗಿದ್ದು, ಜೂ.30ರವರೆಗೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗುವುದು. 5 ಕೋಟಿ ರೂ. ಒಳಗಿನ ಜಿಎಸ್ಟಿ ಪಾವತಿ ವಿಳಾಂಬಕ್ಕೆ ಯಾವುದೇ ದಂಡ ಇಲ್ಲ. ಸಬ್ ಕಾ ವಿಶ್ವಾಸ್ ಯೋಜನೆಯೂ ವಿಸ್ತರಣೆಯಾಗಲಿದೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ