ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೇ ನಡೆಸದೆ, ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗಿತ್ತು. ಕೋವಿಡ್ ಉಲ್ಬಣಗೊಂಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿತ್ತಾದರೂ ಸರಕಾರದ ನಡೆಯ ಕುರಿತು ವ್ಯಾಪಕ ಟೀಕೆಗಳೂ ವ್ಯಕ್ತವಾಗಿದ್ದು.
ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವ್ಯಂಗ್ಯೋಕ್ತಿಗಳೂ ಬಿತ್ತರವಾಗಿದ್ದವು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪಾಸಾದವರನ್ನು ಕೊರೋನಾ ಬ್ಯಾಚ್ ಎಂದೂ ಹೀಗಳೆದ ಉದಾಹರಣೆಗಳಿವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಪ್ರತಿಭೆ ಇದ್ದವರು, ಇಲ್ಲದವರು ಎಲ್ಲರೂ ಒಂದೇ ಎಂಬಂತೆ ಪರಿಗಣಿಸುವುದು ನ್ಯಾಯವೂ ಅಲ್ಲ. ಆದರೆ ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷಯೆ ಇಲ್ಲದೆ ಪಾಸ್ ಮಾಡುವ ಯೋಜನೆ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಖಚಿತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವರು, ಕಳೆದ ವರ್ಷ ಕೋವಿಡ್ ಸೋಂಕು ತೀವ್ರವಾಗಿ ಹರಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರಾಗಿದ್ದರು ಆದರೆ ಈ ವರ್ಷ ಆ ವಿನಾಯಿತಿ ಇರುವುದಿಲ್ಲ, ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು ಜೊತೆಗೆ ಹಳೆಯ ಮಾದರಿಯಲ್ಲೇ ಪರೀಕ್ಷೆಗಳು ನಡೆಯುತ್ತವೆ ಎಂದು ಅವರು ತಿಳಿಸಿದರು.
ರಾಜ್ಯದ ಬಹುತೇಕ ಎಲ್ಲಾ ಶಾಲೆಗಳು ಶೇಕಡಾ ೭೦-೭೫ ರಷ್ಟು ಪಠ್ಯಕ್ರಮಗಳನ್ನು ಪೂರ್ಣಗೊಳಿಸಿವೆ, ಇನ್ನು ವಿದ್ಯಾರ್ಥಿಗಳಿಗೆ ಸಹಾಯವಾಗಲು ಶೇಕಡಾ ೩೦ ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ. ೨೦೨೦-೨೧ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ಕೋವಿಡ್ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದರೆ, ವಿದ್ಯಾರ್ಥಿಗಳು ಓದುವುದನ್ನೇ ಮರೆತು ಬಿಡುತ್ತಾರೆ. ಇದು ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗುತ್ತದೆ ಎಂದಿದ್ದಾರೆ.
೨೦೨೦-೨೧ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆಗಿನ ಸಮಸ್ಯೆ ವಿಭಿನ್ನವಾಗಿತ್ತು. ಕಳೆದ ವರ್ಷ ನೀಡಿದ್ದ ಸಡಿಲಿಕೆಯನ್ನೇ ಮುಂದುವರೆಸಿದರೆ ವಿದ್ಯಾರ್ಥಿಗಳು ಓದುವುದನ್ನೇ ಮರೆತು ಬಿಡುತ್ತಾರೆ. ಇದರಿಂದ ಕೆಟ್ಟ ಸಮಾಜದಲ್ಲಿ, ವಿದ್ಯಾರ್ಥಿ ವೃಂದದಲ್ಲಿ ಕೆಟ್ಟ ಪ್ರವೃತ್ತಿಗೆ ನಾಂದಿ ಹಾಡಿಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳ ಮೇಲೆ ಲಸಿಕೆ ಹೇರಿಕೆ ತಪ್ಪು: ಡಾ ಅನಿಲ್ ಕುಮಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ