ಸ್ವಾತಂತ್ರ್ಯೋತ್ಸವ ಹಾಗೂ ರಕ್ಷಾ ಬಂಧನದ ಖುಷಿ ಕಸಿದ ಪ್ರವಾಹ
ಸಂತೋಷ ರಾ ಬಡಕಂಬಿ
ಅಥಣಿ ತಾಲೂಕಿನಾದ್ಯಂತಹ ಕೃಷ್ಣಾ ನದಿಯು ಉಕ್ಕಿ ಹರಿದು ನದಿ ತೀರದ ಜನರನ್ನು ಸಂಕಷ್ಟಕ್ಕೀಡು ಮಾಡಿದ್ದಲ್ಲದೇ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರವಾಹದಿಂದ ಹಾನಿ ಮಾಡಿ ದಾಖಲೆಯ ಪ್ರಮಾಣದಲ್ಲಿ ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಪ್ರವಾಹದಿಂದಾಗಿ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸುವಂತಹ ಹೆಮ್ಮೆಯ ಸ್ವಾತಂತ್ರ್ಯೋತ್ಸವ ಹಾಗೂ ಸಹೋದರ-ಸಹೋದರಿಯ ಬಾಂಧವ್ಯದ ಪ್ರತೀಕದ ರಕ್ಷಾ ಬಂಧನ ಹಬ್ಬದ ಸಂಭ್ರಮಕ್ಕೆ ತಾಲೂಕಿನಾದ್ಯಂತ ಹಿನ್ನೆಡೆಯಾಗಿದೆ.
ನಮ್ಮ ದೇಶವು ೧೯೪೭ ರಲ್ಲಿ ಸ್ವಾತಂತ್ರ್ಯವನ್ನು ಪಡೆದ ನಂತರ ಇಲ್ಲಿಯವರೆಗೆ ತಾಲೂಕಿನ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ, ಸರಕಾರಿ ಕಛೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸಹಕಾರಿ ಸಂಘ ಸಂಸ್ಥೆಗಳಲ್ಲಿ, ಕೆಲವು ವೃತ್ತಗಳಲ್ಲಿ ಮಾಡುವಂತಹ ಧ್ವಜಾರೋಹಣಕ್ಕಾಗಿ ಪ್ರತಿಸಲವೂ ಅಗಸ್ಟ ೧೫ ಸಮೀಪಿಸುತ್ತಿದ್ದರೆ ಸಾಕು ಧ್ವಜಾ ರೋಹಣಕ್ಕೆ ತಯಾರಿ ನಡೆಸುವುದು, ಕಸಗುಡಿಸುವುದು, ನೀರು ಹಾಕುವುದು, ಬಣ್ಣಬಣ್ಣದ ಪರಪರಿ ಕಟ್ಟುವುದು , ಶಾಲಾ ಕಾಲೇಜುಗಳಲ್ಲಿ ಪೆರೆಡು, ನೃತ್ಯ ಇತರ ಸಾಂಸ್ಕೃತಿಕ ಚಟುವಟಿಕೆಗಳ ತಯಾರಿ ಇತ್ಯಾದಿಗಳ ಮೂಲಕ ಪ್ರತಿಯೊಬ್ಬರು ಸಂಭ್ರಮಿಸುತ್ತಿದ್ದರು.
ಆದರೆ ಈ ಸಲ ತಾಲೂಕಿನಾದ್ಯಂತಹ ಪ್ರವಾಹ ಬಂದು ಎಲ್ಲರನ್ನು ದಾಖಲೆಯ ಪ್ರಮಾಣದಲ್ಲಿ ನಿರಾಶ್ರಿತರನ್ನಾಗಿಸಿರುವುದರಿಂದ ಈ ಸಲದ ಸ್ವಾತಂತ್ರ್ಯ ದಿನ ಸಪ್ಪೆಯಾಗಿರುವುದಂತೂ ಸುಳ್ಳಲ್ಲ.
ಅದಕ್ಕೆ ಪೂರಕವೆಂಬಂತೆ ಪ್ರತಿಸಲ ಅಥಣಿ ತಾಲೂಕಾಡಳಿತ ವಿವಿಧ ಮನರಂಜನೆ ಕಾರ್ಯಕ್ರಮ, ವಿವಿಧ ಪೆರೆಡುಗಳು, ಸಾಂಸ್ಕ್ರತಿಕ ಕಾರ್ಯಕ್ರಮ, ವಿವಿಧ ವ್ಯಕ್ತಿಗಳ ಸನ್ಮಾನ, ಉತ್ತಮ ಭಾಷಣ ಹಾಗೂ ಇತ್ಯಾದಿಗಳ ಆಯೋಜನೆಯನ್ನು ಮೊಟಕುಗೊಳಿಸಿದೆ.
ಕಾರಣವೆಂದರೆ ಎಲ್ಲ ಸರಕಾರಿ ಅಧಿಕಾರಿಗಳು, ಅನೇಕ ಶಿಕ್ಷಕ ಶಿಕ್ಷಕಿಯರು, ಪ್ರಮುಖ ವ್ಯಕ್ತಿಗಳು ಎಲ್ಲರೂ ಪ್ರವಾಹ ಪೀಡಿತರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು. ಅದಕ್ಕಾಗಿ ತಹಸಿಲ್ದಾರರಾದ ಎಮ್ ಎನ್ ಬಳಿಗಾರ ಅವರು ಈ ಸಲ ತಾಲೂಕು ಆಡಳಿತದ ವತಿಯಿಂದ ನಡೆಸುವಂತಹ ಸ್ವಾತಂತ್ಯದಿನವನ್ನು ಯಾವುದೇ ಇತರ ಆಚರಣೆಗಳಿಲ್ಲದೆ ಕೇವಲ ದ್ವಜಾರೋಹಣ ಮಾಡುವುದರ ಮೂಲಕ ಮಾಡುವುದಾಗಿ ನೋಟಿಸನ್ನು ಹೊರಡಿಸಿದ್ದಾರೆ.
ಬಿಕೋ ಎನ್ನುತ್ತಿವೆ ರಾಖಿ ಅಂಗಡಿಗಳು
ನಮ್ಮ ಸಂಪ್ರದಾಯದ ಪ್ರಕಾರವಾಗಿ ಶ್ರಾವಣ ಮಾಸವೆಂದರೆ ಎಲ್ಲಾ ಮಹಿಳೆಯರಿಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ನೂಲು ಹುಣ್ಣಿಮೆಯೆಂದು ಭ್ರಾತೃತ್ವದ ಸಂಕೇತವಾದ ನಾನಾ ರಾಖಿಗಳನ್ನು ಸಹೋದರರ ಕೈಗೆ ಕಟ್ಟಿ ಉಡುಗೊರೆ ಪಡೆಯುವ ಸಂಭ್ರಮವಂತೂ ಹೇಳಲೇ ತೀರದು. ಆದರೆ ಈ ಬಾರಿ ತಾಲೂಕಿನ ಕೃಷ್ಣಾ ನದಿಯ ಪ್ರವಾಹ ಹಾಗೂ ನೆರೆ ಹಾವಳಿಯಿಂದ ನದಿ ತಟದ ಜನರು ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಅತಂತ್ರರಾಗಿ ಗಂಜಿ ಕೇಂದ್ರದಲ್ಲಿದ್ದು ಒಂದು ಹೊತ್ತಿನ ಊಟಕ್ಕೂ ಕೂಡ ಹಪಹಪಿಸುವಂತಹ ಪರಿಸ್ಥಿತಿ ಎದುರಾಗಿದೆ.
ನಗರ ಸೇರಿದಂತೆ ತಾಲೂಕಿನ ನಾನಾ ಪ್ರದೇಶಗಳ ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಆರಂಭಿಸಿದ ಅನೇಕ ರಾಖಿ ಅಂಗಡಿಗಳು ಕೊಳ್ಳುವವರಿಲ್ಲದೇ ಬಿಕೋ ಎನ್ನುತ್ತಿವೆ.
ಓಂ, ಗಣೇಶ, ಕೃಷ್ಣಾ, ಬಾಹುಬಲಿ, ಛೋಟಾ ಭೀಮ, ಸೇರಿದಂತೆ ನಾನಾ ಟ್ರೆಂಡಿಂಗ್ ರಾಖಿಗಳನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟಕ್ಕೀಡಲಾಗಿದೆ. ಅಂಗಡಿಗಳಿಗೆ ಬರುವ ಜನ ಎಲ್ಲವನ್ನೂ ಒಂದು ಸುತ್ತು ನೋಡಿ ದರ ವಿಚಾರಿಸಿ ಹೋಗುತ್ತಿದ್ದಾರೆ ಹೊರತು ಕೊಳ್ಳುವವರಿಲ್ಲದಂತಾಗಿದೆ.
ಅಥಣಿ ನಗರದ ಬಸವೇಶ್ವರ ಸರ್ಕಲ್, ಹಳ್ಯಾಳ ಸರ್ಕಲ್, ಅಂಬೇಡ್ಕರ ಸರ್ಕಲ್, ವಿಜಯಪುರ ರಸ್ತೆ, ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿ ಮತ್ತು ಸರ್ಕಲ್‌ಗಳಲ್ಲಿ ಸಾಕಷ್ಟು ರಾಖಿ ಸ್ಟಾಲ್‌ಗಳು ತಲೆ ಎತ್ತಿವೆ. ಫಳ ಫಳ ಹೊಳೆಯುವ ಮುತ್ತು, ಗಾಜಿನಿಂದ ಕೂಡಿದ ಲೇಟೇಸ್ಟ್ ಟ್ರೆಂಡ್‌ನ ರಾಖಿಗಳು, ನವಿರಾದ ರೇಷ್ಮೇ, ನೂಲಿನಿಂದ ತಯಾರಿಸಿದ ರಾಖಿಗಳು, ಸ್ಪಂಜ್, ದಾರ ಸೇರಿದಂತೆ ನಾನಾ ವಿನ್ಯಾಸದ ಬಣ್ಣ ಬಣ್ಣದ ರಾಖಿಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ.
ರಾಖಿಗಳ ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ ೫ ರೂ.ಗಳಿಂದ ನೂರಾರು ರೂ.ಗಳ ದರವಿದೆ. ಜತಗೆ ಸಾವಿರಾರು ರೂ.ಗಳ ದರದ ಚಿನ್ನ ಹಾಗೂ ಬೆಳ್ಳಿ ಲೇಪಿತ ರಾಖಿಗಳು ಲಭ್ಯ ಇವೆ. ಅಲ್ಲಲ್ಲಿ ಕೆಲ ಜನರು ತಮ್ಮ ಬೇಡಿಕೆ ತಕ್ಕಂತೆ ವಿಚಾರಿಸಿ ಖರೀದಿ ಕೂಡ ನಡೆದಿದೆ.
ಇತ್ತ ತಾಲೂಕಿನಾದ್ಯಂತ ಪ್ರವಾಹ, ಬರ, ನೆರೆ ಇದ್ದರೂ ಕೆಲವರು ಸಂಪ್ರದಾಯ ಆಚರಣೆಗಾಗಿ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ ಆಕರ್ಷಕವಲ್ಲದಿದ್ದರೂ ತಮ್ಮ ಶಕ್ತ್ಯಾನುಸಾರ ರಾಖಿಗಳನ್ನು ಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಸಹೋದರ ನೀಡುವ ಉಡುಗೊರೆ ನೀರಿಕ್ಷೆಯಿಂದ ಶುದ್ಧ ಹಾಗೂ ಪ್ರೀತಿಯಿಂದ ಕಟ್ಟುವ ಒಂದೇ ಒಂದು ದಾರಕ್ಕೂ ವಿಶಿಷ್ಟ ಅರ್ಥವಿದೆ. ಸಹೋದರನಿಗೆ ಆರತಿ ಮಾಡಿ, ಸಿಹಿ ತಿನ್ನಿಸಿ, ನಿಸ್ವಾರ್ಥದಿಂದ ರಾಖಿ ಕಟ್ಟುವುದು ಮುಖ್ಯ. ಸಹೋದರನಿಗೆ ಆರೋಗ್ಯ-ಆಯಸ್ಸು, ಸುಖ-ಸಂತೋಷವನ್ನು ನೀಡುವಂತೆ ದೇವರನ್ನು ಬೇಡಿ, ಸದಾ ರಕ್ಷಣೆ ನೀಡುವಂತೆ ಸಹೋದರನನ್ನು ಕೇಳಿಕೊಳ್ಳುವುದು ರಕ್ಷಾ ಬಂಧನದ ವಿಶೇಷವಾಗಿದೆ.
ಕೃಷ್ಣಾ ನದಿಯ ಪ್ರವಾಹದಿಂದ ಹಾನಿಯನ್ನು ಅನುಭವಿಸಿದ ಜನ ಹಾಗೂ ರೈತರನ್ನು ಕಂಡು ನನಗೆ ನೋವಾಗಿದ್ದರಿಂದ ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸುತ್ತಿದ್ದೆನೆ ಅದಲ್ಲದೇ ನನ್ನ ಸ್ವಂತ ಖರ್ಚಿನಲ್ಲೇ ಪ್ರವಾಹ ಪೀಡಿತರಿಗಾಗಿ ಕಳೆದ ೦೫ ದಿನಗಳಿಂದ ಅನ್ನವನ್ನು ನೀಡುವಂತಹ ಕಾರ್ಯದಲ್ಲಿ ತೊಡಗಿದ್ದೆನೆ.
-ಧರೆಪ್ಪ ಠಕ್ಕನ್ನವರ (ಯುವ ಮುಖಂಡ)
ತಾಲೂಕಿನ ಎಲ್ಲ ಜನರಲ್ಲಿ ಪ್ರವಾಹ ಅಪಾರ ಹಾನಿಯನ್ನುಂಟು ಮಾಡಿದೆ ಇದರಿಂದಾಗಿ ಜನರು ಧ್ವಜ ಹಾಗೂ ರಾಖಿ ಖರೀದಿ ಮಾಡುತ್ತಿಲ್ಲ ಹಾಗಾಗಿ ಈ ಸಲ ನಾವು ತಂದ ರಾಖಿಗಳು ಅರ್ಧದಷ್ಟೂ ಮಾರಾಟವಾಗದೇ ಉಳಿಯುತ್ತಿವೆ. ಈ ಬಾರಿ ಪ್ರವಾಹದಿಂದ ಹಬ್ಬದ ವ್ಯಾಪಾರದಲ್ಲಿ ಮಂಕು ತಂದಿದೆ.
-ರಾಹುಲ ಲಗಳಿ (ಕಿರಾಣಿ ವ್ಯಾಪಾರಸ್ತ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ