ಯಾವುದೇ ಸರ್ಕಾರ ಇರಲಿ, ನಿಪ್ಪಾಣಿ ಕ್ಷೇತ್ರಕ್ಕೆ ಅನುದಾನದ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು -ಶಾಸಕಿ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ರಾಜ್ಯದಲ್ಲಿ ಸರ್ಕಾರ ಯಾವುದೇ ಇರಲಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಹೇಗೆ ತರುವುದು ನಮಗೆ ಗೊತ್ತು. ನನ್ನ ಮತಕ್ಷೇತ್ರಕ್ಕೆ ಅನುದಾನದ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ನಗರಸಭೆಯ ಆಡಳಿತದ ಉಪಯೋಗ ನಗರದ ಅಭಿವೃದ್ಧಿಗಾಗಿ ಮಾಡಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರಸಭೆಯ ನೂತನ ಅಧ್ಯಕ್ಷ ಸೋನಲ್ ಕೋಠಾಡಿಯಾ ಹಾಗೂ ಉಪಾಧ್ಯಕ್ಷರಾಗಿ ಸಂತೋಷ ಸಾಂಗಾವಕರ ಆಯ್ಕೆಗೊಂಡ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಶುಕ್ರವಾರ ಅವರನ್ನು ಸತ್ಕರಿಸಿ ಅವರು ಮಾತನಾಡಿದರು. ನಗರಸಭೆಯ ಅವಧಿ ಕೇವಲ ೧೪ ತಿಂಗಳದ ಮಟ್ಟದವರೆಗಿದ್ದರೂ ನಗರದಲ್ಲಿ ಅಭಿವೃದ್ಧಿಯ ಪರ್ವಕ್ಕೆ ನಾಂದಿ ಹಾಡಲಾಗುವುದು. ಇಲ್ಲಿಯವರೆಗೆ ೩೧ ವಾರ್ಡ್‌ಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ತರಲಾಗಿದೆ. ನೂತನ ಪದಾಧಿಕಾರಿಗಳಿಂದ ಅನೇಕ ಕಾರ್ಯಗಳು ನಡೆಯಲಿವೆ. ಸಧ್ಯದಲ್ಲಿ ವಸತಿ ಯೋಜನೆಗಾಗಿ ೨೧ ಕೋಟಿ ರೂ. ಅನುದಾನ ಮಂಜೂರಾಗಿದ್ದು ದಸರಾ ಹಬ್ಬದವರೆಗೆ ೬೦೦ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವಿಲಾಸ ಗಾಡಿವಡ್ಡರ ಮಾತನಾಡಿ ಬಿಜೆಪಿಗೆ ಬೆಂಬಲಿಸಿದ್ದರಿಂದ ಕೆಲವರು ಬೆನ್ನ ಹಿಂದೆ ಏನೇನೋ ಮಾತನಾಡುತ್ತಿದ್ದಾರೆ. ಆದರೆ ನಾವು ಅದನ್ನು ದುರ್ಲಕ್ಷಿಸಿ ಜೊಲ್ಲೆ ದಂಪತಿ ನೇತೃತ್ವದಲ್ಲಿ ಎಲ್ಲರಿಗಾಗಿ ಕಾರ್ಯ ಮಾಡಲಾಗುವುದು ಎಂದರು.
ನೂತನ ಅಧ್ಯಕ್ಷೆ ಸೋನಲ್ ಕೋಠಡಿಯಾ ಮಾತನಾಡಿ ಜೊಲ್ಲೆ ದಂಪತಿ ಹಾಗೂ ವಿಲಾಸ ಗಾಡಿವಡ್ಡರ ಇವರಿಂದ ನನಗೆ ಅಧ್ಯಕ್ಷನಾಗುವ ಭಾಗ್ಯ ಒದಗಿ ಬಂದಿತು. ಎಲ್ಲ ಸಮಸ್ಯೆಗಳನ್ನು ನಿವಾರಿಸಿ ನಗರದ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುವುದು ಎಂದರು.
ನೂತನ ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಮಾಜಿ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪೌರಾಯುಕ್ತ ದೀಪಕ ಹರದಿ, ಸುರೇಖ ದೇಸಾಯಿ, ರಾಜು ಗುಂದೇಶಾ, ಡಾ. ಜಸರಾಜ ಗಿರೆ, ಸದ್ದಾಂ ನಗಾರಜಿ, ಗೀತಾ ಪಾಟೀ, ನೀತಾ ಬಾಗಡೆ, ಆಶಾ ಟವಳೆ, ಅರುಣಾ ಮುದುಕುಡೆ, ರಂಜನಾ ಇಂಗವಲೆ, ಪ್ರಭಾವತಿ ಸೂರ್ಯವಂಶಿ, ಸುಜಾತಾ ಕದಮ, ಕಾವೇರಿ ಮಿರ್ಜೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಪ್ರವೀಣ ಶಹಾ, ಅಭಯ ಮಾನವಿ, ಸೂರಜ ಖವರೆ, ಮೊದಲಾದವರು ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ