Kannada NewsKarnataka News

ಅಮೂಲ್ ಜೊತೆ ಕೆಎಂಎಫ್ ವಿಲೀನ ಇಲ್ಲಾ, ಇಲ್ಲಾ, ಇಲ್ಲಾ – ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಮೂಲ್ ಜೊತೆ ಕೆಎಂಎಫ್ ವಿಲೀನ ಇಲ್ಲವೇ ಇಲ್ಲ. ಇಂತಹ 10 ಅಮೂಲ್ ಬಂದರೂ ಸ್ಪರ್ಧೆ ಮಾಡುವ ಶಕ್ತಿ ನಂದಿನಿಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ, ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೆಎಂಎಫ್ ನಲ್ಲಿ 26 ಲಕ್ಷ ರೈತರು ಸದಸ್ಯರಿದ್ದಾರೆ. 10 ಲಕ್ಷ ರೈತರು ಹಾಲು ಹಾಕುತ್ತಾರೆ. 15,200 ಸಂಘಗಳಿವೆ, 28 ಸಾವಿರ ಹಳ್ಳಿಗಳು ಇದರೊಂದಿಗಿವೆ. 40-50 ಲಕ್ಷ ಮತದಾರರು ಕೆಎಂಎಫ್ ಜೊತೆ ಸಂಬಂಧ ಹೊಂದಿದ್ದಾರೆ. ಹಾಗಾಗಿ ರಾಜಕೀಯ ಕಾರಣಕ್ಕಾಗಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಬಿಜೆಪಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡಲಾಗುತ್ತಿದೆ. ಸರಕಾರ ಆ ರೀತಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕೆಎಂಎಫ್ ಬೋರ್ಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಎಂದಿಗೂ ನಾವು ಅಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 60 ಸಾವಿರ ಲೀಟರ್ ಹಾಲು ಕಡಿಮೆಯಾಗಿದೆ. ಸುಮ್ಮನೇ ಏನೇನೋ ಅಪಪ್ರಚಾರ ಮಾಡುತ್ತಿದ್ದಾರೆ. ಸಂಸ್ಥೆ ಉಳಿಯಬೇಕು, ಬೆಳೆಯಬೇಕು. ಇದರಲ್ಲಿ ರಾಜಕೀಯ ಮಾಡಬೇಡಿ. ಇಂತಹ 10 ಅಮೂಲ್ ಬಂದರೂ ಸ್ಪರ್ಧೆಗೆ ನಾವು ಸಮರ್ಥರಿದ್ದೇವೆ. ರಾಜ್ಯದ ಹೊರಗೂ ನಾವು 7 ಲಕ್ಷ ಲೀಟರ್ ಹಾಲು ಮಾರುತ್ತೇವೆ. ಮುಂಬೈ, ಪುಣಾ, ಹೈದರಾಬಾದ್ ನಲ್ಲೂ ಹಾಲು ಮಾರುತ್ತೇವೆ. ನಂದಿನಿ ವಿಷಯದಲ್ಲಿ ಅತಿಯಾಗುತ್ತಿದೆ. ಇಂದಿನಿಂದ ಬೆಳೆಸಬೇಡಿ ಎಂದು ಅವರು ವಿನಂತಿಸಿದರು.

ಈಗಾಗಲೆ 10 ಸಂಸ್ಥೆಗಳು ಬೆಂಗಳೂರಿಗೆ ಬಂದಿದೆ. ಆದರೆ ಯಾರೂ ನಂದಿನಿ ಜೊತೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಚರ್ಮ ರೋಗ ಬಂದು ಸ್ವಲ್ಪ ಸಮಸ್ಯೆಯಾಗಿದೆ. ಅದನ್ನು ಬಿಟ್ಟರೆ ಏನೇನೂ ಸಮಸ್ಯೆ ಇಲ್ಲ. ಯಶಸ್ವಿಯಾಗಿ ಮುನ್ನಡೆಸುತ್ತೇವೆ. ನಮಗೆ ಶಕ್ತಿ ಇದೆ ಎಂದು ಅವರು ಹೇಳಿದರು.

https://pragati.taskdun.com/no-ticket-for-lakshmana-savadi-cm-bommai-hints/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button