ಅನರ್ಹ ಶಾಸಕರು ಸೂಚಿಸುವ ವ್ಯಕ್ತಿಗೆ ಟಿಕೆಟ್ ಇಲ್ಲ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಸ್ ಮೈತ್ರಿ ಸರಕಾರ ಪತನವಾಗಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ತರಲು ಕಾರಣರಾಗಿದ್ದ ಅನರ್ಹ ಶಾಸಕರಿಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಮಧ್ಯೆ ಕಂದಕ ದೊಡ್ಡದಾಗುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಅವರು ಅತಂತ್ರದತ್ತ ಸರಿಯುತ್ತಿದ್ದಾರೆ.

ಅನರ್ಹ ಶಾಸಕರಿಗೆ ಏನೆಲ್ಲ ಆಶ್ವಾಸನೆ ನೀಡಿ, ಅವರ ಷರತ್ತಿಗೆಲ್ಲ ತಲೆ ಆಡಿಸಿ ರಾಜಿನಾಮೆ ಕೊಡಿಸಿದ್ದು ಯಡಿಯೂರಪ್ಪ. ಆದರೆ ಈಗ ಬಿಜೆಪಿ ಹೈಕಮಾಂಡ್ ಅದಕ್ಕೆಲ್ಲ ಸಹಮತ ಸೂಚಿಸುತ್ತಿಲ್ಲ. ಪಕ್ಷದ ನಿಯಮಾವಳಿಗಳ ಚೌಕಟ್ಟಿನಲ್ಲಿ ಮಾತ್ರ ಅವರ ಮಾತು ಕೇಳಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಹಾಗಾಗಿ ತಮ್ಮ ಬದಲು ಮಕ್ಕಳಿಗೆ, ಪತ್ನಿಗೆ, ಕುಟುಂಬಸ್ಥರಿಗೆ ಟಿಕೆಟ್ ಕೊಡಬೇಕೆನ್ನುವ ಅನರ್ಹರ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೀರೆರಚಿದೆ.

ಅನರ್ಹರರು ಚುನಾವಣೆಗೆ ಸ್ಪರ್ಧಿಸಲು ಅರ್ಹರಾದರೆ, ಇಚ್ಛಿಸಿದರೆ ಅವರಿಗೆ ಟಿಕೆಟ್ ಕೊಡುವುದಕ್ಕೆ ಆಕ್ಷೇಪವಿಲ್ಲ. ಆದರೆ ಅವರು ಅನರ್ಹರಾದರೆ ಅಥವಾ ತಮ್ಮ ಬದಲು ಬೇರೆಯವರನ್ನು ಸೂಚಿಸಿದರೆ ಅಂತವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪಕ್ಷದ ತೀರ್ಮಾನವೇ ಅಂತಿಮವಾಗುತ್ತದೆ ಎಂದು ಹೈಕಮಾಂಡ್ ಸ್ಪಷ್ಟವಾಗಿ ತಿಳಿಸಿದೆ ಎಂದು ಗೊತ್ತಾಗಿದೆ.

ಇದರಿಂದಾಗಿ ಅನರ್ಹರಿಗೆ ಚುನಾವಣೆಗೆ ಸ್ಪರ್ಧಿಸಲು ಸುಪ್ರಿ ಕೋರ್ಟ್ ಹಸಿರುನಿಶಾನೆ ತೋರಿಸದಿದ್ದಲ್ಲಿ ಎಲ್ಲ 17 ಶಾಸಕರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಒಂದೊಮ್ಮೆ ಅನರ್ಹರ ಸ್ಪರ್ಧೆಗೆ ಅನುಮತಿ ಸಿಕ್ಕಿದರೂ  ತಾವು ಸ್ಪರ್ಧಿಸದೆ ಮಕ್ಕಳನ್ನು ಉತ್ತರಾಧಿಕಾರಿ ಮಾಡಲು ಹೊರಟಿರುವ ಕೆಲವರಿಗೆ ಸಮಸ್ಯೆ ಎದುರಾಗಲಿದೆ.

Home add -Advt

ಸಮ್ಮಿಶ್ರ ಸರಕಾರ ಕೆಡವಿ ಅಧಿಕಾರಕ್ಕೇರುವ ಕನಸಿನ ಭರದಲ್ಲಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಹಾಗೂ ಜೆಡಿಎಸ್ ಬಂಡಾಯ ಶಾಸಕರಿಗೆ ಇನ್ನಿಲ್ಲದ ಆಶ್ವಾಸನೆ ನೀಡಿದ್ದರು. ಅವರು ಹೇಳಿದ್ದಕ್ಕೆಲ್ಲ ತಲೆ ಆಡಿಸಿದ್ದರು. ಆದರೆ ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಎಲ್ಲವನ್ನೂ ಹೈಕಮಾಂಡ್ ಕೈಗೆ ತೆಗೆದುಕೊಂಡಿದೆ. ಯಡಿಯೂರಪ್ಪನವರ ಯಾವ ಮಾತಿಗೂ ಸೊಪ್ಪು ಹಾಕುತ್ತಿಲ್ಲ. ಇದು ಅನರ್ಹ ಶಾಸಕರ ಆತಂಕಕ್ಕೆ ಕಾರಣವಾಗಿದೆ.

ಇದರ ಜೊತೆಗೆ ಬಿಜೆಪಿ ಶಾಸಕರು, ಮುಖಂಡರು ದಿನಕ್ಕೊದು ರೀತಿಯಲ್ಲಿ ಮಾತನಾಡುತ್ತಿರುವುದೂ ಅವರ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಸರಕಾರ ಬರುತ್ತಿದ್ದಂತೆ ಮಂತ್ರಿಗಳಾಗಿ ಅಧಿಕಾರ ಅನುಭವಿಸಬಹುದು ಎಂದುಕೊಂಡಿದ್ದವರಿಗೆ ಈಗಿನ ಬೆಳವಣಿಗೆಗಳು ತೀವ್ರ ನಿರಾಸೆ ಉಂಟುಮಾಡಿವೆ.

ಇದೀಗ ರಾಜ್ಯದಲ್ಲಿ 17 ಅನರ್ಹರ ಕ್ಷೇತ್ರಗಳಿಗೆ ಡಿ.5ಕ್ಕೆ ಚುನಾವಣೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 22ಕ್ಕೆ ಸುಪ್ರಿಂ ಕೋರ್ಟನಲ್ಲಿ ಅನರ್ಹರ ಪ್ರಕರಣದ ವಿಚಾರಣೆ ನಡೆಯಲಿದೆ. ಸುಪ್ರಿಂ ಕೋರ್ಟ್ ತೀರ್ಮಾನ ತೀವ್ರ ಕುತೂಹಲ ಮೂಡಿಸಿದ್ದು, ಅನರ್ಹರ ಭವಿಷ್ಯ ನಿರ್ಧರಿಸಲಿದೆ.

 

Related Articles

Back to top button