ಉತ್ತರ ಕನ್ನಡ ಕರ್ನಾಟಕದಲ್ಲಿದೆಯಾ ಎನ್ನುವ ಗೊಂದಲದಲ್ಲಿ ಇಲ್ಲಿಯ ಜನ
ಪ್ರಗತಿವಾಹಿನಿ ಸುದ್ದಿ, ಶಿರಸಿ – ಇಡೀ ರಾಜ್ಯಕ್ಕೇ ಒಂದು ನಿಯಮವಿದ್ದರೆ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ನಿಯಮವಿದ್ದಂತಿದೆ. ಇಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ಆದೇಶಕ್ಕೂ ಬೆಲೆ ಇಲ್ಲ. ಕೆಳ ಹಂತದ ಸಿಬ್ಬಂದಿಯಿಂದ ಹಿಡಿದು ಎಲ್ಲರೂ ತಮಗೆ ಬೇಕಾದಂತೆ ಆಟವಾಡುತ್ತಿದ್ದಾರೆ.
ಇಷ್ಟಕ್ಕೂ ಆಗಿದ್ದೇನು ನೋಡಿ. ರಾಜ್ಯದಲ್ಲಿ ಅಂತರ ರಾಜ್ಯ ಪ್ರವಾಸ ಮಾಡಿ ಬಂದವರಿಗೆ ಪಾಸ್ ಬೇಕಿಲ್ಲ, ಕ್ವಾರಂಟೈನ್ ಕೂಡ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರವೇ ಆದೇಶ ಹೊರಡಿಸಿದ್ದಾರೆ. ಹೊರ ರಾಜ್ಯದಿಂದ ಬರುವವರಿಗೆ ಮಾತ್ರ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲೇ ತಿಳಿಸಿದ್ದಾರೆ.
ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಅಂತರ್ ಜಿಲ್ಲಾ ಪ್ರವಾಸ ಮಾಡಿ ಬಂದವರಿಗೂ ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಕೇಳಿದರೆ ನಮಗೆ ಯಾವ ಮುಖ್ಯಮಂತ್ರಿ ಆದೇಶವೂ ಬಂದಿಲ್ಲ, ನಾವು ಕ್ವಾರಂಟೈನ್ ಮಾಡಲೇಬೇಕು ಎನ್ನುತ್ತಾರೆ. ಮುಖ್ಯಮಂತ್ರಿಗಳ ಆದೇಶದ ವಿವರವುಳ್ಳ ಪತ್ರಿಕೆಗಳನ್ನು ತೋರಿಸಿದರೂ ಅದಕ್ಕೆ ಅವರ ಮಾನ್ಯತೆ ಇಲ್ಲ. ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯ ಸಿಬ್ಬಂದಿ ಹೇಳಿದ್ದೇ ಆದೇಶ, ಮಾಡಿದ್ದೇ ಕಾನೂನು.
ಪಕ್ಕದ ಮನೆಯಿಂದ ಬಂದಿದ್ದೇನೆ ಎಂದರೆ ಮಾತ್ರ ಬಿಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯದ ಯಾವುದೇ ಜಿಲ್ಲೆಯಿಂದ ಬಂದಿರಲಿ ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಕೈ ಮೇಲೆ ಸೀಲ್ ಹಾಕಿ, ಮನೆಗೆ ನೋಟೀಸ್ ಹಚ್ಚಿ ಹೋಗುತ್ತಿದ್ದಾರೆ.
ಮುಖ್ಯಮಂತ್ರಿಗಳ ಮಾತು ನಂಬಿ ಯಾರಾದರೂ ಇಲ್ಲಿಗೆ ಬಂದರೆ ಅವರಿಗೆ ಸಂಕಟ ಖಚಿತ. ಅವರ ಉದ್ದೇಶವೇನೋ ಉತ್ತಮವಾಗಿಯೇ ಇದೆ. ಹೆಮ್ಮಾರಿ ಕೊರೆನಾ ವೈರಸ್ ತಗುಲದಿರಲಿ ಎನ್ನುವುದು ಅವರ ಕಳಕಳಿ. ಆದರೆ, ಒಂದೋ ಮಖ್ಯಮಂತ್ರಿ ಆದೇಶ ಪಾಲಿಸಬೇಕು, ಇಲ್ಲವೇ ತವೇ ಸೂಕ್ತ ಆದೇಶ ಹೊರಡಿಸಿ, ಜನರಿಗೆ ತಿಳಿವಳಿಕೆ ನೀಡಿ ಅದರಂತೆ ಮಾಡಬೇಕಿತ್ತು. ಒಂದೆರಡು ದಿನಕ್ಕಾಗಿ ಬಂದು ಹೋಗುವವರು ಇದರಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಈ ಕುರಿತು ಹಿರಿಯ ಅಧಿಕಾರಿಯೊಬ್ಬರನ್ನು ಪ್ರಗತಿವಾಹಿನಿ ಪ್ರಶ್ನಿಸಿದಾಗ, ಹೆಚ್ಚು ಕೊರೋನ ಪ್ರಕರಣ ಕಂಡು ಬಂದ ಜಿಲ್ಲೆಗಳಿಂದ ಬರುವವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಅವರು ವಿನಂತಿಸಿಕೊಂಡರೆ ಹಾಗೆಯೇ ಬಿಡುತ್ತೇವೆ. ಹೆಚ್ಚಿನ ಜನರಿಗೆ ಕೊರೋನಾ ಸೋಂಕು ತಗುಲದಿರಲಿ ಎನ್ನುವ ಕಾರಣಕ್ಕೆ ಹಾಗೆ ಮಾಡಲಾಗುತ್ತಿದೆ. ಇದರಲ್ಲಿ ಸಾಮಾಜಿಕ ಕಳಕಳಿ ಹೊರತಾಗಿ ಬೇರೇನೂ ಇಲ್ಲ. ಆದಾಗ್ಯೂ ಅದನ್ನು ನಿಲ್ಲಿಸುತ್ತೇವೆ ಎಂದರು.
ಉದ್ದೇಶವೇನೋ ಒಳ್ಳೆಯದು. ಆದರೆ ಜನರಲ್ಲಿ ಇರುವ ಗೊಂದಲ ನಿವಾರಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಿದೆ. ಮುಖ್ಯಮಂತ್ರಿಗಳ ಮಾತು ನಂಬಬೇಕೋ… ಸ್ಥಳೀಯವಾಗಿ ನಡೆಯುತ್ತಿರುವ ವಿದ್ಯಮಾನ ನಂಬಬೇಕೋ ಎನ್ನುವ ಗೊಂದಲದಲ್ಲಿ ಜನರು ಇದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ