ಸಂಗಮೇಶ ಆರ್. ನಿರಾಣಿ
ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ
ಉತ್ತರ ಕರ್ನಾಟಕವು ಸಮುದ್ರ ಮಟ್ಟದಿಂದ ೩೦೦ ರಿಂದ ೭೦೦ ಮೀ.ಗಳಷ್ಟು ಎತ್ತರದಲ್ಲಿದ್ದು ವಿಶಾಲವಾದ ಬಯಲುಸೀಮೆ ಪ್ರದೇಶವನ್ನು ಹೊಂದಿದೆ. ಇದು ಬೆಳಗಾವಿ, ವಿಜಯಪುರ, ಬಾಗಲಕೋಟ, ಬೀದರ್, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ರಾಯಚೂರ, ಗದಗ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡಿದೆ.
ಉತ್ತರ ಕರ್ನಾಟಕದ ಮಳೆಯ ಪ್ರಮಾಣ ಸರಾಸರಿ ೩೦೦-೬೦೦ ಮಿ.ಮಿ ಆಗಿದ್ದು, ಹಿತಕರವಾದ ಹವಾಗುಣವನ್ನು ಹೊಂದಿದೆ. ಈ ಮೊದಲು ಮುಂಬೈ-ಮರಾಠರು ಹಾಗೂ ಹೈದ್ರಾಬಾದ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದರಿಂದ ನಾವು ಮಾತನಾಡುವ ಕನ್ನಡ ಭಾಷೆಯಲ್ಲಿ ಮರಾಠಿ ಮತ್ತು ಉರ್ದು ಪ್ರಭಾವವಿದೆ.
ಆಹಾರ ಧಾನ್ಯಗಳಾದ ಗೋದಿ, ಜೋಳ, ಮೆಕ್ಕೆಜೋಳ, ಬೆಳೆ-ಕಾಳುಗಳ ಜೊತೆಗೆ ವಿವಿಧ ಮಾದರಿಯ ತರಕಾರಿಗಳನ್ನು ನಮ್ಮ ನೆಲದಲ್ಲಿ ಸದಾ ಬೆಳೆಯುವುದರಿಂದ ರುಚಿಯಾದ ಮತ್ತು ಕಟ್ಟುಮಸ್ತಾದ ದೇಸಿ ಊಟಕ್ಕೆ ನಾವೇ ಹೆಸರುವಾಸಿ. ಭತ್ತ, ತಂಬಾಕು, ಅರಿಶಿಣ ಸೇರಿದಂತೆ ಎಲ್ಲ ಮಾದರಿಯ ಬೆಳೆಗಳನ್ನು ಬೆಳೆಯುವ ಫಲವತ್ತಾದ ಭೂಮಿ ನಮ್ಮಲ್ಲಿದೆ.
ಕಬ್ಬು ಇಲ್ಲಿಯ ಪ್ರಮುಖ ವಾಣಿಜ್ಯ ಬೆಳೆ. ನಮ್ಮ ರೈತನಿಗೆ ಉತ್ತಮವಾದ ಬದುಕನ್ನು ಕಟ್ಟಿಕೊಟ್ಟಿದೆ. ಹೀಗಾಗಿ ಸಕ್ಕರೆ ಉದ್ಯಮ ಉತ್ತರ ಕರ್ನಾಟಕದಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದೆ. ಶೇ. ೭೦ ಜನಸಂಖ್ಯೆ ಕೃಷಿಯನ್ನೆ ನಂಬಿಕೊಂಡು ಬದುಕು ಸಾಗಿಸುತ್ತಿದೆ.
ಜಗದ ಮೂಲವೇ ಜೀವಜಲ:
ನೀರು ಜೀವಜಗತ್ತಿನ ಮೂಲ ಆಧಾರ. ನೀರಿಲ್ಲದೇ ಮನುಷ್ಯನು ಹೇಗೆ ಬದುಕಲು ಸಾಧ್ಯವಿಲ್ಲವೂ ಹಾಗೆ ಕೃಷಿಯೂ ಸಾಧ್ಯವಿಲ್ಲ. ನೀರು ಮತ್ತು ಬೀಜ ಎರಡೂ ಇದ್ದರೂ ಫಲವತ್ತಾದ ಭೂಮಿ ಇಇರದಿದ್ದರೆ ಕೃಷಿ ಅಸಾಧ್ಯ. ಕರ್ನಾಟಕದ ಭೂಮಿ ಫಲವತ್ತಾಗಿದೆ. ಆದರೆ ಎಲ್ಲ ಭೂಮಿಗೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೇ.೬೦ರಷ್ಟು ಕೃಷಿ ಭೂಮಿ ಮಳೆಯಾಧಾರಿತವಾಗಿದೆ.
ಕರ್ನಾಟಕದ ಒಟ್ಟು ೧,೯೧,೭೩೧ ಚ.ಕಿ.ಮೀ ಭೂಮಿಯಲ್ಲಿ ಶೇ.೨೦ ಭೂಮಿ ಅರಣ್ಯವಿದೆ. ಉಳಿದದರಲ್ಲಿ ಅಂದಾಜು ೧,೨೮,೦೦೦ ಚ.ಕಿ.ಮೀ. ವಿಸ್ತೀರ್ಣದ ಭೂ-ಪ್ರದೇಶ ಕೃಷಿಗೆ ಯೋಗ್ಯವಾಗಿದೆ. ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ ಶೇ.೪೦.೪೫ರಷ್ಟು ಭೂಮಿ ಅಂದರೆ ೫೧ ದಶಲಕ್ಷ ಹೆಕ್ಟೇರ್ ಜಮೀನನ್ನು ವಿವಿಧ ಮೂಲಗಳಿಂದ ನೀರಾವರಿಗೆ ಒಳಪಟ್ಟಿದೆ.
ಇನ್ನು ಶೇ.೬೦ರಷ್ಟು ಭೂಮಿ ಮಳೆಯಾಧಾರಿತ ಬೇಸಾಯಕ್ಕೆ ಒಳಪಟ್ಟಿದೆ. ರಾಜಸ್ಥಾನದ ನಂತರ ಅತಿಹೆಚ್ಚು ಒಣಭೂಮಿ ಹಾಗೂ ಬರಗಾಲ ಪೀಡಿತ ಪ್ರದೇಶ ಕರ್ನಾಟಕಲ್ಲರುವುದು ನಮ್ಮ ಕೃಷಿ ಪ್ರಗತಿಗೆ ಮಾರಕವಾದ ಆಂಶವಾಗಿದೆ ಎಂಬುದು ತುಂಬ ನೋವಿನ ಸಂಗತಿ.
ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಉಪಯೋಗಿಸಲು, ಮಹಾಪೂರವನ್ನು ನಿಯಂತ್ರಿಸಲು, ಬರಗಾಲಗಳ ಹಾವಳಿಯನ್ನು ತಗ್ಗಿಸಲು, ಅಂತರ್ಜಲ ಮಟ್ಟವನ್ನು ಪುನಶ್ಚೇತನಗೊಳಿಸಲು, ಮೀನುಗಾರಿಕೆ ಬೆಳೆಸಲು, ಸಾಧ್ಯವಾದರೆ ಪ್ರವಾಸೋದ್ಯಮ ಹಾಗೂ ಒಳನಾಡು ಜಲಸಾರಿಗೆಯನ್ನು ಅಭಿವೃದ್ದಿಪಡಿಸಲು, ಜಲವಿದ್ಯುತ್ ತಯಾರಿಸಲು ವಿಜ್ಞಾನ ಹಾಗೂ ತಂತ್ರಜ್ಞಾನ ಬಳಸಿಕೊಂಡು ಅನುಷ್ಠಾನಗೊಳಿಸುವ ಬೃಹತ್, ಮಧ್ಯಮ ಹಾಗೂ ಕಿರು ನೀರಾವರಿ ಯೋಜನೆಗಳಿಂದ ಸಾಧ್ಯವಿದೆ.
ಇದರಿಂದ ನೀರಾವರಿ ಪ್ರದೇಶದ ಗಾತ್ರವನ್ನು ವೃದ್ದಿಸಿ, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನಮ್ಮ ರೈತರ ಆರ್ಥಿಕ ವರಮಾನವನ್ನು ಹಾಗೂ ಆ ಮೂಲಕ ದೇಶದ ವಾರ್ಷಿಕ ಆದಾಯವನ್ನು ಉನ್ನತಿಕರಿಸಲು ಸಾಧ್ಯವಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಿಜಾಮರ ಸರ್ಕಾರದಿಂದ ರಾಚೋಳಿ ಬಾಂಡಾ ಮತ್ತು ತುಂಗಭದ್ರಾ ಯೋಜನೆಗಳು ಪ್ರಾರಂಭವಾಗಿದ್ದವು. ಮೈಸೂರು ಸಂಸ್ಥಾನದ ಅಧಿನದಲ್ಲಿ ಕೃಷ್ಣರಾಜಸಾಗರ ಪೂರ್ಣಗೊಂಡಿತ್ತು. ಭದ್ರಾ ಆಣೆಕಟ್ಟಿನ ಕಾರ್ಯ ಪ್ರಗತಿಯಲ್ಲಿತ್ತು. ನಮಗೆ ಈಗ ಗೊತ್ತಿರುವ ಎಲ್ಲ ನೀರಾವರಿ ಯೋಜನೆಗಳು ಪ್ರಾರಂಭವಾಗಿದ್ದು ಕರ್ನಾಟಕ ಏಕೀಕರಣದ ನಂತರವೇ.
ಕರ್ನಾಟಕ ನೀರಾವರಿ ವ್ಯವಸ್ಥೆ:
ಕರ್ನಾಟಕದಲ್ಲಿ ಪ್ರಮುಖವಾಗಿ ೭ ನದಿ ಕಣಿವೆಗಳಿವೆ. ದಕ್ಷಿಣದಲ್ಲಿ ಉತ್ತರ ಪೆನ್ನಾರ, ದಕ್ಷಿಣ ಪೆನ್ನಾರ ಹಾಗೂ ಪಾಲಾರ್ ಕಣಿವೆ ಮತ್ತು ಉತ್ತರದಲ್ಲಿ ಗೋದಾವರಿ ನದಿ ಕಣಿವೆಗಳಿಂದ ದೊರೆಯುವ ನೀರು ಅತ್ಯಲ್ಪ ಪ್ರಮಾಣದ್ದು. ಪಶ್ಚಿಮ ಘಟ್ಟದ ಕಣಿವೆಯಲ್ಲಿ ಹುಟ್ಟುವ ನದಿಗಳ ನೀರು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹರಿದು ಸಮುದ್ರ ಸೇರುತ್ತದೆ. ಹೀಗಾಗಿ ಉತ್ತರದಲ್ಲಿ ಕೃಷ್ಣೆ ಮತ್ತು ದಕ್ಷಿಣದಲ್ಲಿ ಕಾವೇರಿ ಕಣಿವೆ ಪ್ರದೇಶಗಳು ಬೃಹತ್ ನೀರಾವರಿ ಯೋಜನೆಗಳನ್ನು ಹೊಂದಿರುವ ಕಣಿವೆ ಪ್ರದೇಶಗಳಾಗಿವೆ.
ಒಟ್ಟು ೮೦೦ ಕಿ.ಮೀ ಉದ್ದದ ಕಾವೇರಿ ನದಿಯಲ್ಲಿ ೩೨೦ ಕಿ.ಮೀ ಮಾತ್ರ ದಕ್ಷಿಣ ಕರ್ನಾಟಕದಲ್ಲಿ ಹರಿಯುತ್ತದೆ. ೬೪ ಕಿ.ಮೀ ಉದ್ದಕ್ಕೂ ಕಾವೇರಿ ಕರ್ನಾಟಕ ಹಾಗೂ ತಮಿಳುನಾಡಿಗೆ ಸೀಮಾರೆಖೆಯಾಗಿ ಹರಿದಿದ್ದಾಳೆ. ಕಾವೇರಿ ಜಲಾನಯನ ಪ್ರದೇಶ ೩೪,೨೭೩ ಚದರ ಕಿ.ಮೀ. ಕೃಷ್ಣೆಗೆ ಹೊಲಿಸಿದರೆ ಇದು ಬಲು ಚಿಕ್ಕದು. ಕಾವೇರಿಯ ೭೪೦ ಟಿಎಂಸಿ ಅಡಿ ನೀರಿನಲ್ಲಿ ನಮ್ಮ ರಾಜ್ಯದ ಪಾಲು ೨೭೦ ಟಿ.ಎಂ.ಸಿ ಅಡಿ ಮಾತ್ರ. ಈ ನೀರಿನ ಪಾಲಿಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ನಿರಂತರ ವ್ಯಾಜ್ಯ ನಡೆಯುತ್ತಿದೆ.
ಕೃಷ್ಣೆ ಉತ್ತರ ಕರ್ನಾಟಕದ ಜೀವಗಂಗೆ:
ಉತ್ತರ ಕರ್ನಾಟಕದಲ್ಲಿ ಹರಿದಿರುವ ಕೃಷ್ಣಾ ನದಿಯು ಭಾರತದ ೪ನೇ ಅತಿದೊಡ್ಡ ಮತ್ತು ದಕ್ಷೀಣ ಭಾರತದ ೨ನೇ ಅತಿದೊಡ್ಡ ನದಿಯಾಗಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳಗಾವಿ ಜಿಲ್ಲೆಯ ಮೂಲಕ ಕರ್ನಾಟಕ ಪ್ರವೇಶಿಸಿ ಬಾಗಲಕೋಟ, ವಿಜಯಪೂರ, ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ೪೮೦ ಕಿ.ಮೀ. ಹರಿದು ತೆಲಂಗಾಣ ರಾಜ್ಯ ಸೇರುತ್ತದೆ. ವೇದಗಂಗಾ, ದೂದಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಸೇರಿದಂತೆ ೭೪ ಉಪನದಿಗಳು ಕೃಷ್ಣೆಯನ್ನು ಸೇರುತ್ತವೆ. ಕರ್ನಾಟಕದಲ್ಲಿ ಕೃಷ್ಣೆಯ ಜಲಾನಯನ ಪ್ರದೇಶ ೧,೧೩,೨೭೧ ಚ.ಕಿ.ಮೀ. ಅಂದರೆ ಒಟ್ಟು ಜಲಾನಯನ ಪ್ರದೇಶದ ೪೩ರಷ್ಟು ಹಾಗೂ ಕಾವೇರಿ ಜಲಾನಯನ ಪ್ರದೇಶದ ೩ಪಟ್ಟು ಹೆಚ್ಚು.
ಕೃಷ್ಣಾ ಕಣಿವೆಯಲ್ಲಿ ದೊರೆಯುವ ೨,೫೨೮ ಟಿ.ಎಂ.ಸಿ ಅಡಿ ನೀರಿನಲ್ಲಿ ಬಚಾವತ್ ಆಯೋಗದ ಸ್ಕೀಂ ಎ ಮತ್ತು ಬಿ ನಡಿಯಲ್ಲಿ ದೊರೆತ ಒಟ್ಟು ನೀರು ೯೦೪ ಟಿಎಂಸಿ ಅಡಿ. ಇದರಲ್ಲಿ ೩೬೦ ಟಿಎಂಸಿ ಅಡಿಗಳನ್ನು ಮೀರದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ, ೩೦೩ ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಹಾಗೂ ನಾರಾಯಣಪೂರ ಹಾಗೂ ಅವುಗಳ ಏತ ನೀರಾವರಿ ಯೋಜನೆಗೆ, ಉಳಿದ ೨೪೧ ಟಿಎಂಸಿ ಅಡಿ ನೀರನ್ನು ಘಟಪ್ರಭಾ, ಮಲಪ್ರಭಾ, ದೂದ್‌ಗಂಗಾ ಹಾಗೂ ಕೃಷ್ಣಾ ಕಣಿವೆಯ ಉಳಿದ ಇತರ ಎಲ್ಲಾ ನೀರಾವರಿ ಯೋಜನೆಗಳಿಗೆ ಉಪಯೋಗಿಸಲು ನಿರ್ಬಂಧ ಹೇರಲಾಗಿದೆ.
ಉತ್ತರ ಕರ್ನಾಟಕದಲ್ಲಿ ೭೪ ನದಿಗಳಿವೆ!
ಕರ್ನಾಟಕದ ಕೃಷಿ ಭೂಮಿಯ ಸುಮಾರು ಶೇ. ೬೨ರಷ್ಟು ಬಯಲುಸೀಮೆಯ ಪ್ರದೇಶ ಉತ್ತರ ಕರ್ನಾಟಕದಲ್ಲಿದೆ. ಸುದೈವದಿಂದ ದಕ್ಷಿಣ ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ, ವರದಾ, ಧರ್ಮಾ ಸೇರಿದಂತೆ ಒಟ್ಟು ೭೪ ನದಿಗಳು ಉತ್ತರ ಕರ್ನಾಟಕದಲ್ಲಿ ಹರಿದಿವೆ. ಅನುಕೂಲಕರವಾದ ನೈಸರ್ಗಿಕ ಪರಿಸರವನ್ನು ಉಪಯೋಗಿಸಿಕೊಂಡು ನೀರಾವರಿ ಸದ್ಬಳಕೆ ಮಾಡಿಕೊಂಡು ಕೃಷಿ ಅಭಿವೃದ್ದಿ ಪಡಿಸಿದರೆ ಉತ್ತರ ಕರ್ನಾಟಕದ ಅಭಿವೃದ್ದಿಯ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ನೀರಾವರಿ ಯೋಜನೆಗಳಲ್ಲಿ ಉತ್ತರ’ಕ್ಕೆ ಅನ್ಯಾಯ?
ಕರ್ನಾಟಕಕ್ಕೆ ಕೃಷ್ಣಾ ಕಣಿವೆಯ ನೀರಿನ ಪಾಲು ೯೦೪ ಟಿಎಂಸಿ ಅಡಿ. ಕಾವೇರಿ ಕಣಿವೆಯ ನೀರಿನ ಪಾಲು ೨೮೦ ಟಿಎಂಸಿ ಅಡಿ. ಕಾವೇರಿಗಿಂತ ಕೃಷ್ಣೆಯ ಜಲಾನಯನ ಪ್ರದೇಶಗಳಲ್ಲಿಯ ಆಣೆಕಟ್ಟುಗಳಿಂದ ೩ಪಟ್ಟು ಹೆಚ್ಚು ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು. ಕಾವೇರಿ ನೀರಿನ ಪಾಲಿನಲ್ಲಿ ಹೆಚ್ಚೆಂದರೆ ೧೨-೧೩ ದಶಲಕ್ಷ ಹೆಕ್ಟೇರ್ ಭೂಮಿಗೆ ನೀರೊದಗಿಸಲು ಸಾಧ್ಯ. ಆದರೆ ಕೃಷ್ಣಾ ಕಣಿವೆಯಲ್ಲಿ ನಮಗೆ ದೊರೆತಿರುವ ನೀರಿನಿಂದ ಅಂದಾಜು ೪೦ ರಿಂದ ೪೫ ದಶಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು.
ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ನೀರಾವರಿ ಯೋಜನೆಗಳು ಕರ್ನಾಟಕ ಏಕೀಕರಣದ ನಂತರವೇ ಪ್ರಾರಂಭವಾಗಿವೆ. ಆದರೆ ಸಮತೋಲಿತವಾದ ಕಾರ್ಯಾಚರಣೆ ನಡೆದಿಲ್ಲ. ಉತ್ತರ ಮತ್ತು ದಕ್ಷೀಣದ ನೀರಾವರಿ ಯೋಜನೆಗಳಲ್ಲಿ ಬಹಳಷ್ಟು ತಾರತಮ್ಯವಾಗಿದೆ. ಆಡಳಿತಾತ್ಮಕ ಅನುಮೋದನೆ, ಗಂಭೀರ ಮೇಲ್ವಿಚಾರಣೆ, ಮಾರ್ಗದರ್ಶನ, ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಯೋಜನೆಗೆ ಅಗತ್ಯ ಹಣಕಾಸು ಸೌಲಭ್ಯ ಒದಗಿಸುವುದು ಅತ್ಯವಶ್ಯ. ಈ ವಿಷಯದಲ್ಲಿ ಪ್ರಾರಂಭದಿಂದಲೂ ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಅಧಿಕಾರಸ್ಥ ರಾಜಕಾರಣಿಗಳು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ವಿಶೇಷ ಗಮನ ಹರಿಸಿಲ್ಲ. ೩-೪ ದಶಕಗಳಿಂದ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಹೇಮಾವತಿ ಹಾಗೂ ಅದರ ೧೪ ಯೋಜನೆಗಳಿಗೆ ಆದ್ಯತೆ ಮೇರೆಗೆ ಹಣಕಾಸು ನೀಡಿ ಯೋಜನೆ ಪೂರ್ಣಗೊಳಿಸಿದೆ. ಯೋಜನೆ ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಿ ೧೨ ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ದೊರೆತಿದೆ. ಆದರೆ ಕೃಷ್ಣಾ ಮೆಲ್ದಂಡೆ ಯೋಜನೆ ೧೯೬೯ರ ಬಚಾವತ್ ಆಯೋಗದ ತಿರ್ಪು ೧೯೭೬ರಲ್ಲಿ ಬಂದಿತ್ತು ೨ನೇ ಹಂತದ ನೀರನ್ನು ಬಳಕೆ ಮಾಡಿಕೊಳ್ಳಲು ೨೦ ವರ್ಷಗಳ ಕಾಲಾವಕಾಶ ನೀಡಿ ೧೯೯೭ರ ವೇಳೆಗೆ ಯೋಜನೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ಇದ್ದರೂ ೧೯೯೪ರವರೆಗೆ ಯೋಜನೆ ಕುಂಟುತ್ತ ಸಾಗಿತ್ತು.
ನಂತರ ಕೆಲಸದ ವೇಗ ಹೆಚ್ಚಾದರೂ ಪೂರ್ಣ ಪ್ರಮಾಣದ ಯೋಜನೆ ಅನುಷ್ಠಾನಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಇದೇ ಅವಧಿಯಲ್ಲಿ ಕಾವೇರಿ ಕಣಿವೆಯ ಕಬಿನಿ, ಹೇಮಾವತಿ ಸೇರಿದಂತೆ ಇತರ ಸಣ್ಣಪುಟ್ಟ ಯೋಜನೆಗಳು ವೇಗವಾಗಿ ನಡೆದು ಪೂರ್ಣಗೊಂಡವು ಇದು ನಿಶ್ಚಿತವಾಗಿಯೂ ಉತ್ತರ ಕರ್ನಾಟಕದ ಮೇಲಿನ ನಿರ್ಲಕ್ಷವಲ್ಲವೇ?
ನಮಗಾದ ಅನ್ಯಾಯಕ್ಕೆ ಇಲ್ಲಿವೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು!
ಘಟಪ್ರಭಾ-ಮಲಪ್ರಭಾ ಆಣೆಕಟ್ಟು ಕಾಮಗಾರಿಗಳು ೧೯೮೧-೮೨ರಲ್ಲಿ ಪೂರ್ಣಗೊಂಡರೂ ಶಾಖಾ ಕಾಲುವೆ, ಉಪ ಕಾಲುವೆ ಹಾಗೂ ವಿತರಣಾ ಕಾಲುವೆಗಳ ನಿರ್ಮಾಣ ಕೆಲಸ ೨೦೦೨ರಲ್ಲಿ ಪೂರ್ಣಗೊಂಡಿತು. ಯುಕೆಪಿ-೩ರಲ್ಲಿ ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಉಪಯೋಜನೆಗಳು ಸೇರಿದಂತೆ ಕೃಷ್ಣಾ ಕಣಿವೆಯ ೪೦ಕ್ಕೂ ಅಧಿಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ.
ದೂದಗಂಗಾ, ರಾಮಥಾಳ, ಸೊಂತಿ, ಬಸಾಪೂರ, ಬಳ್ಳಾರಿ ನಾಲಾ, ತಿಮ್ಮಾಪೂರ, ಗುಡ್ಡದ ಮಲ್ಲಾಪೂರ, ಹಿರಣ್ಯಕೇಶಿ, ದಂಡಾವತಿ ಏತ ನೀರಾವರಿ ಯೋಜನೆಗಳಲ್ಲಿ ಕೆಲವು ಅಪೂರ್ಣವಾಗಿವೆ. ಕೆಲವು ಪ್ರಾರಂಭವೇ ಆಗಿಲ್ಲ. ಮಹಾದಾಯಿ ಯೋಜನೆ ದಿನೆ-ದಿನೆ ಕಗ್ಗಂಟಾಗುತ್ತಿದೆ. ಈ ಕುರಿತು ಸರ್ಕಾರದ ನಿರ್ಲಕ್ಷ ಭಾವ ಮುಂದುವರೆದಿದೆ.
೨೦೧೪-೧೫ರ ಆರ್ಥಿಕ ಸಮಿಕ್ಷೆಯಂತೆ ಕೃಷ್ಣಾ ಮೆಲ್ದಂಡೆ ಯೋಜನೆ ಹಂತ-೩ರ ೧೩೦ ಟಿಎಂಸಿ ಅಡಿ ನೀರನ ಬಳಕೆಗಾಗಿ ಕಾಮಗಾರಿಗೆ ಲಭ್ಯವಿದ್ದ ಅಂದಿನ ದರಪಟ್ಟಿಯಂತೆ ೧೭,೦೦೦ ಕೋಟಿ ಹಣ ಹೊಂದಿಸುವುದು ರಾಜ್ಯ ಸರ್ಕಾರಕ್ಕೆ ಕಷ್ಟವಾಯಿತು. ಯೋಜನೆ ಅನುಷ್ಠನವಾಗಲಿಲ್ಲ. ಆದರೆ ಭದ್ರಾ ಮೇಲ್ದಂಡೆ, ತುಂಗಾ ಮೇಲ್ದಂಡೆ, ಮತ್ತು ಭದ್ರಾ ಕಾಲುವೆಗಳ ಆಧುನಿಕರಣಕ್ಕೆ ೧೭ ಸಾವಿರ ಕೋಟಿ ಹಾಗೂ ೨೪ ಟಿಎಂ.ಸಿ ಅಡಿ ಕುಡಿಯುವ ನೀರಿನ ಬಳಕೆಗಾಗಿ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ೧೨,೧೨,೯೧೨ ಕೋಟಿ ಸೇರಿದಂತೆ ೨೭,೯೧೨ ಕೋಟಿ ಮಂಜೂರು ಮಾಡಿ ಬಿಡುಗಡೆ ಮಾಡುವಾಗ ಕರ್ನಾಟಕ ಸರ್ಕಾರಕ್ಕೆ ಸವಾಲಾಗಲಿಲ್ಲವೇ?
ಗೋದಾವರಿ-ಮಹಾನದಿ-ಕೃಷ್ಣ-ಕಾವೇರಿ ನದಿ ಜೋಡಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ:
ಗೋದಾವರಿ-ಮಹಾನದಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ೧೯೮೦ರಲ್ಲಿ ರಾಜ್ಯಕ್ಕೆ ೨೮೩ ಟಿಎಂಸಿ ಅಡಿ ನೀರು ಹಂಚಿಕೆಯಾಗಿತ್ತು. ೨೦೦೦ರಲ್ಲಿ ಈ ಪ್ರಮಾಣವನ್ನು ೧೬೪ ಟಿಎಂಸಿ ಅಡಿಗೆ ತಗ್ಗಿಸಲಾಯಿತು. ೨೦೧೦ರಲ್ಲಿ ನಡೆದ ಪರಿಷ್ಕರಣೆಯಲ್ಲಿ ಕರ್ನಾಟಕದ ಪಾಲನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು.
ಕೊಯ್ನಾದಲ್ಲಿ ವಿದ್ಯುತ್ ಉತ್ಪಾದನೆಯಾಗಿ ವ್ಯರ್ಥವಾಗಿ ನೀರು ಸಮುದ್ರ ಸೇರುತ್ತಿದೆ,
ಕೊಯ್ನಾ ಜಲಾಶಯದ ಒಟ್ಟು ೧೦೫ ಟಿಎಂಸಿ ಅಡಿ ನೀರಿನಲ್ಲಿ ೬೭.೫ ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗೆ ಮತ್ತು ೩೭.೫ ಟಿಎಂಸಿ ಅಡಿ ನೀರನ್ನು ಕೃಷಿಗಾಗಿ ಬಳಕೆ ಮಾಡುತ್ತಾರೆ. ೬೭.೫ ಟಿಎಂಸಿ ಅಡಿ ನೀರನ್ನು ಕೊಯ್ನಾ, ಶಿವಾಜಿಸಾಗರದ ನೀರನ್ನು ಸುರಂಗದ ಮೂಲಕ ಕೊಳ್ಕೆವಾಡಿ ಜಲಾಶಯದಲ್ಲಿ ಸಂಗ್ರಹಿಸಿ ಪಶ್ಚಿಮಘಟ್ಟಗಳಲ್ಲಿ ೧೦೦ ಮೀ. ಎತ್ತರದಿಂದ ತಗ್ಗು ಪ್ರದೇಶಕ್ಕೆ ನೀರು ಹರಿಸಿ ೧೯೬೦ ಮೆ.ವ್ಯಾಟ್ ಜಲವಿದ್ಯುತ್ ಉತ್ಪಾದಿಸುತ್ತಾರೆ.
ಈ ನೀರು ನೈಸರ್ಗಿಕವಾಗಿ ಹರಿದಿದ್ದರೆ ಕರ್ನಾಟಕ ಹಾಗೂ ಉಳಿದ ಭಾಗಿದಾರ ರಾಜ್ಯಗಳಿಗೆ ಉಪಯೋಗವಾಗುತ್ತಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ವಿದ್ಯುತ್ ಉತ್ಪಾದನೆಗಷ್ಟೆ ಬಳಸಿ ಪ್ರತಿ ತಿಂಗಳು ೫.೬ ಟಿಎಂಸಿ ಅಡಿ ನೀರನ್ನು ಸಮುದ್ರ ಸೇರಿಸುತ್ತಿದೆ. ಕರ್ನಾಟಕವು ಬೇಸಿಗೆ ಅವಧಿಯಲ್ಲಿ ಇದರಲ್ಲಿಯ ಶೇ. ೩೦-೪೦% ನೀರು ಪಡೆದು ಪ್ರತಿಯಾಗಿ ಅಷ್ಟೆ ಪ್ರಮಾಣದ ವಿದ್ಯುತ್ ನೀಡುವ ಯೋಜನೆಯನ್ನು ರೂಪಿಸಬಹುದು.
ಉತ್ತರ ಕರ್ನಾಟಕ ಸಮಗ್ರ ನೀರಾವರಿಗೆ ಇರುವ ಹೊಸ ಅವಕಾಶಗಳು:
ಕರ್ನಾಟಕದಲ್ಲಿ ದಕ್ಷಿಣಕ್ಕಿಂತ ಉತ್ತರದಲ್ಲಿ ಬಹಳಷ್ಟು ವಿಶಾಲವಾದ ಕೃಷಿ ಭೂಮಿ ಇದೆ. ಕೃಷ್ಣಾ ಕಣಿವೆಯ ಲಭ್ಯವಿರುವ ಒಟ್ಟು ಜಲ ಸಂಪನ್ಮೂಲದ ಜೊತೆಗೆ ಹೊಸ ನೀರಾವರಿ ಯೋಜನೆಗಳೊಂದಿಗೆ ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್’fಸಲು ದಕ್ಷಿಣಕ್ಕಿಂತ ಉತ್ತರದಲ್ಲಿ ಬಹುದೊಡ್ಡ ಅವಕಾಶಗಳಿವೆ. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಕಾಳಿ ನದಿಯ ೫೦ ಟಿಎಂಸಿ ಅಡಿ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗಳನ್ನು ಸದೃಢಗೊಳಿಸಬಹುದು. ಹಾಗೂ ಶರಾವತಿ ನದಿಯಿಂದ ವರದಾ ನದಿಗೆ ೫೦ ಟಿ.ಎಂ.ಸಿ ಅಡಿ ನೀರು ಹರಿಸಲು ಸಾಧ್ಯವಿದೆ. ಆ ಮೂಲಕ ತುಂಗಭದ್ರೆಯನ್ನು ಸದೃಡಗೊಳಿಸಬಹುದು.
ಹಿರಣ್ಯಕೇಶಿ ನದಿಯ ೧೦ ಟಿಎಂಸಿ ಅಡಿ ಪ್ರವಾಹದ ನೀರನ್ನು ಹಿಡಕಲ್ ಜಲಾಶಯದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆಯಡಿಯಲ್ಲಿ ಗೋದಾವರಿ-ಮಹಾನದಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಡಿ ದೊರೆಯಬೇಕಾದ ನ್ಯಾಯಯುತವಾದ ಪಾಲನ್ನು ಪಡೆದುಕೊಂಡು ಹಾಗೂ ಮಹಾಪೂರದ ನೀರನ್ನು ಸದ್ಬಳಕೆ ಮಾಡಿಕೊಂಡು ಕೃಷ್ಣೆಯ ನೀರನ್ನು ಘಟಪ್ರಭಾ, ಮಲಪ್ರಭೆಗೆ ಸೇರಿಸಬಹುದು.
ಈ ಕುರಿತು ನಮ್ಮ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್‌ನಿಂದ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಚಾವತ್ ಆಯೋಗ ಸ್ಕಿಂ ’ಬಿ’ ತೀರ್ಪಿನ ಅನ್ವಯ ೧೩೦ ಟಿಎಂಸಿ ಅಡಿ ನೀರು ಬಳಕೆ ಮಾಡಲು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಶೀಘ್ರ ಕೆಲಸ ಪ್ರಾರಂಭಿಸಬೇಕು.
ಲಭ್ಯವಿರುವ ನೀರಿನ ಮೂಲ – ಲಭ್ಯವಿರುವ ನೀರು
೧. ಬಚಾವತ್ ಆಯೋಗದ ’ಬಿ’ ಸ್ಕೀಂನಲ್ಲಿ ದೊರೆತ ನೀರು (ಆಲಮಟ್ಟಿ ಎತ್ತರ ಹೆಚ್ಚಿಸಿ ನೀರು ಬಳಸಿಕೊಳ್ಳಬಹುದು) ೧೩೦ ಟಿ.ಎಂ.ಸಿ ಅಡಿ
೨. ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ೪ ಟಿ.ಎಂ.ಸಿ ಅಡಿ
೩. ಅಮೃತಧಾರೆ-ಮಲಪ್ರಭಾ-ಘಟಪ್ರಭಾ ಯೋಜನೆ. (ಏತ ನೀರಾವರಿ ಮೂಲಕ ಕಾಳಿ ನದಿ ನೀರನ್ನು ಮಲಪ್ರಭಾ, ಘಟಪ್ರಭಾ ನದಿಗಳಿಗೆ ಹರಿಸಬಹುದು) ೫೦ ಟಿ.ಎಂ.ಸಿ ಅಡಿ
೪. ಬಸವಧಾರೆ ಕೃಷ್ಣ-ಘಟಪ್ರಭಾ-ಮಲಪ್ರಭಾ ನದಿ ಜೋಡಣೆ (ಬಚಾವತ್ ಆಯೋಗದ ಸ್ಕಿಂ.ನಲ್ಲಿ ದೊರೆತ ನೀರನ್ನು ಉಪಯೋಗಿಸಿ ಅಥವಾ ಮಹಾಪೂರದ ನೀರನ್ನು ಉಪಯೋಗಿಸಿ ಘಟಪ್ರಭಾ, ಮಲಪ್ರಭಾ ನದಿ ಸಮೃದ್ದಗೊಳಿಸಬಹುದು) ೩೦ ಟಿ.ಎಂ.ಸಿ. ಅಡಿ
೫. ವಿಜಯಧಾರೆ ಹಿರಣ್ಯಕೇಶಿ ನದಿ ಮಹಾಪೂರದ ನೀರನ್ನು ಹಿಡಕಲ್ ಜಲಾಶಯಕ್ಕೆ ಸೇರಿಸುವುದು. ೧೦ ಟಿ.ಎಂ.ಸಿ ಅಡಿ
೬. ಪೆನಿನ್ಸೂಲಾರ್ ಯೋಜನೆಯಡಿ ಗೋದಾವರಿ-ಮಹಾನದಿ-ಕೃಷ್ಣಾ-ಕಾವೇರಿ ನದಿ ಜೋಡಣೆಯಲ್ಲಿ ನ್ಯಾಯಯುತವಾಗಿ ಕರ್ನಾಟಕಕ್ಕೆ ದೊರೆಯಬೇಕಾದ ನೀರು (೨೮೩ ಟಿಎಂಸಿ. ದೊರೆಯಬೇಕಾದ ನೀರಿನ ಪೈಕಿ೨೦೦೦ರಲ್ಲಿ ೧೬೩ಕ್ಕೆ ತಗ್ಗಿಸಿ ೨೦೧೦ರಲ್ಲಿ ಸಂಪೂರ್ಣ ರದ್ದುಗೊಳಿಸಿದ್ದಾರೆ) ಕನಿಷ್ಟ ೧೬೪ ಟಿಎಂಸಿ ಅಡಿ
೭. ಕೊಯ್ನಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದಿಸಿ ಸಮುದ್ರಕ್ಕೆ ಸೇರಿಸುವ ನೀರು (ವಿದ್ಯುತ್ ಕೊಟ್ಟು ನೀರು ಪಡೆಯಬಹುದು) ೬೭.೫೦ ಟಿಎಂಸಿ ಅಡಿ ಪೈಕಿ ೫೦ ಟಿ.ಎಂಸಿ. ಅಡಿ
೮. ಶರಾವತಿಯ ನೀರನ್ನು ವರದಾ ನದಿಗೆ ಹರಿಸಬಹುದು (ವರದಾ ನದಿ ಶರಾವತಿ ನದಿ ಹುಟ್ಟುವ ಶಿವಮೊಗ್ಗದಲ್ಲಿಯೇ ಹುಟ್ಟುತ್ತದೆ. ಮುಂದೆ ಹಾವೇರಿ ಜಿಲ್ಲೆಯಲ್ಲಿ ಹರಿದು ಹೊಸಪೇಟೆ ಜಲಾಶಯಕ್ಕೂ ಮೊದಲು ತುಂಗಭದ್ರಾ ನದಿ ಸೇರುತ್ತದೆ.) ೫೦ ಟಿ.ಎಂ.ಸಿ. ಅಡಿ
ಒಟ್ಟು ೪೫೮ ಟಿ.ಎಂ.ಸಿ ಅಡಿ
ನೀರಾವರಿಗೆ ಒಳಪಡಿಸಬಹುದಾದ ಹೊಸ ಅಚ್ಚುಕಟ್ಟು ಪ್ರದೇಶ ೪೫,೮೦,೦೦೦ ಎಕರೆ (೧೮,೫೩,೪೬೦ ಹೆಕ್ಟೇರ್)
ಕೊಯ್ನಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಸಮುದ್ರ ಸೇರಿಸುವ ೬೭.೫ ಟಿಎಂಸಿ ಅಡಿ ನೀರನ್ನು ಕರ್ನಾಟಕ ಪಡೆದು ವಿದ್ಯುತ್ ನೀಡುವ ಒಡಂಬಂಡಿಕೆ ಮಾಡಿಕೊಂಡು ಆ ನೀರನ್ನು ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಬರಡು ಭೂಮಿಗಳನ್ನು ನೀರಾವರಿ ಮಾಡಲು ಉಪಯೋಗಿಸಬೇಕು.
ಪ್ರಧಾನಿ ಮಧ್ಯಸ್ಥಿಕೆಯಲ್ಲಿ ನ್ಯಾಯಾಲಯದ ಹೊರಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಹಾದಾಯಿ ವಿವಾದ ಇತ್ಯರ್ಥ ಪಡಿಸಿ ಆದ್ಯತೆ ಮೆರೆಗೆ ಅನುಷ್ಠಾನಗೊಳಿಸಬೇಕು. ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲು ಅಥವಾ ಪರ್ಯಾಯವಾಗಿ ಮತ್ತೊಂದು ಕಿರು ಅಣೆಕಟ್ಟು ನಿರ್ಮಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಅದು ಶೀಘ್ರ ಅನುಷ್ಠಾನಕ್ಕೆ ಬರಬೇಕು.
ಪ್ರತ್ಯೇಕ ರಾಜ್ಯ ನಿರ್ಮಾಣವಾದೀತು
ಉತ್ತರ’ದ ಕಲ್ಯಾಣವಾಗಲಿ, ಇಲ್ಲವಾದಲ್ಲಿ ’ಕಲ್ಯಾಣ ಕರ್ನಾಟಕ’ (ಪ್ರತ್ಯೇಕ ಉ.ಕ) ನಿರ್ಮಾಣವಾದೀತು!
ಈ ಎಲ್ಲ ಯೋಜನೆಗಳ ಮೂಲಕ ಉತ್ತರ ಕರ್ನಾಟಕವನ್ನು ಸಮಗ್ರ ನೀರಾವರಿಗೆ ಒಳಪಡಿಸಲು ಸಾಧ್ಯವಿದೆ. ನಮ್ಮ ಜನಪ್ರತಿನಿಧಿಗಳು, ರಾಜ್ಯಮಟ್ಟದ ಜಲಸಂಪನ್ಮೂಲ ಇಲಾಖೆ ಅಧಿಕಾರಗಳು ಗಟ್ಟಿತನ ತೋರಬೇಕು.
ಜಲಸಂಪನ್ಮೂಲ, ಕೃಷಿ, ತೋಟಗಾರಿಕೆ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು. ರೈತನಾಯಕ ಬಿ. ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಉತ್ತರ ಕರ್ನಾಟಕ ಬಿಜೆಪಿ ಪಾಲಿನ ಭದ್ರಕೋಟೆ. ಯಡಿಯೂರಪ್ಪನವರಿಗೆ ಉತ್ತರ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹಾಗೂ ಮಮಕಾರವಿದೆ.
ನಮ್ಮ ಉತ್ತರ ಕರ್ನಾಟಕದ ನೆರೆಯ ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ, ಗೋವಾ, ದಕ್ಷೀಣ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. ಅವರೆಲ್ಲ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತ ಮುನ್ನಡೆದಿದ್ದಾರೆ. ಉತ್ತರ ಕರ್ನಾಟಕದಲ್ಲಿಯೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಕೃಷಿಯಲ್ಲಿ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿವೆ.
ರೈತ ನಾಯಕರಾದ ಬಿ. ಎಸ್. ಯಡಿಯೂರಪ್ಪನವರು ಆದ್ಯತೆಯ ಮೇರೆಗೆ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಉತ್ತರ ಕರ್ನಾಟಕದಲ್ಲಿ ನೀರಾವರಿ ಕ್ರಾಂತಿ ಮಾಡುವ ಮೂಲಕ ಕೃಷಿಯಲ್ಲಿ ಉತ್ತರ ಕರ್ನಾಟಕ ಪ್ರಗತಿಬಂಧುವಾಗಲಿ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಮೇಲೆ ಕವಿದಿರುವ ಗ್ರಹಣ ಕಳೆಯಲಿ. ಬೆಳಕು ಮೂಡಲಿ. ಬಸವಣ್ಣನ ನಾಡು ಸಮೃದ್ದವಾಗಲಿ. ರೈತರ ಬದುಕು ಕಲ್ಯಾಣವಾಗಲಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ