*ಬಿಜೆಪಿ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಣ್ಣ ಪಿಲ್ಲರ್ ಕೂಡ ಹಾಕಿಲ್ಲ, ಒಂದೇ ಒಂದು ಮೇಲ್ಸೇತುವೆಯನ್ನೂ ಮಾಡಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: “ಬಿಜೆಪಿ ಆಡಳಿತಾವಧಿಯಲ್ಲಿ ಆಗಿದ್ದಂತಹ ರಸ್ತೆಗುಂಡಿಗಳನ್ನು ನಾವು ಮುಚ್ಚುತ್ತಿದ್ದೇವೆ. ಆರ್.ಅಶೋಕ್ ಅವರಿಗೆ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ ಸಣ್ಣ ಪಿಲ್ಲರ್ ಕೂಡ ಹಾಕಲು ಆಗಲಿಲ್ಲ, ಒಂದೇ ಒಂದು ಮೇಲ್ಸೇತುವೆಯನ್ನೂ ಮಾಡಲಿಲ್ಲ. ನಿಮ್ಮ ಕೈಯಲ್ಲಿ ಏನೂ ಮಾಡಲು ಆಗಲಿಲ್ಲ ಎಂದೇ ಜನರು ನಮ್ಮ ಕೈಗೆ ಅಧಿಕಾರ ಕೊಟ್ಟಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ರಸ್ತೆಗುಂಡಿ ಮುಚ್ಚಲು ಆಗದವರು ಟನಲ್ ರಸ್ತೆ ಮಾಡಲು ಹೊರಟಿದ್ದಾರೆ ಎನ್ನುವ ಆರ್. ಅಶೋಕ್ ಅವರ ಟೀಕೆಯ ಬಗ್ಗೆ ಕೇಳಿದಾಗ, “ಅವರು ಕೇಂದ್ರದಿಂದ ಬೆಂಗಳೂರಿಗೆ ಒಂದೇ ಒಂದು ರೂಪಾಯಿ ಅನುದಾನ ಕೊಡಿಸಿದ್ದಾರೆಯೇ? ಬಿಜೆಪಿಯವರು ಏನೇನೂ ಮಾಡಿಲ್ಲ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.
“ಎಲ್ಲೆಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆಯೋ ಅಲ್ಲಿಗೆ ಆಯಾಯ ಕ್ಷೇತ್ರದ ಶಾಸಕರು ತೆರಳಿ ಪರಿಶೀಲನೆ ನಡೆಸಲಿ. ಅವರುಗಳೇ ಪರಿಶೀಲನೆ ನಡೆಸಿ ಗುಂಡಿಗಳನ್ನು ಮುಚ್ಚಿಸಿಕೊಳ್ಳಲಿ. ಅಧಿಕಾರಿಗಳು ಅವರಿಗೂ ಗೌರವ ನೀಡುತ್ತಾರೆ. ನಾವು ಇದಕ್ಕೆ ಬೇಡ ಎಂದು ಹೇಳುತ್ತೇವೆಯೇ?” ಎಂದರು.
“ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲು ಆಗುವುದಿಲ್ಲ. ಗುಂಡಿಗಳ ಸುತ್ತಲು ಕತ್ತರಿಸಿ ಸರಿಯಾಗಿ ಜಲ್ಲಿ ತುಂಬಿ ನಂತರ ರೋಡ್ ರೋಲರ್ ಮೂಲಕ ದುರಸ್ಥಿ ಮಾಡಬೇಕಾಗುತ್ತದೆ. ಬಿಜೆಪಿಯವರು ಪ್ರತಿಭಟನೆ ವೇಳೆ ಗುಂಡಿ ತುಂಬಿದಂತೆ ಮಾಡಲು ಆಗುವುದಿಲ್ಲ” ಎಂದು ಹೇಳಿದರು.
“ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ತಿಳಿಸಿ ಎಂದು ಸರ್ಕಾರದಿಂದ ರಸ್ತೆಗುಂಡಿ ಗಮನ ಎನ್ನುವ ಅಪ್ಲಿಕೇಶನ್ ಮೂಲಕ ನಾವೇ ಸಾರ್ವಜನಿಕರಿಗೆ ಕರೆಕೊಟ್ಟಿದ್ದೆವು. ಅಧಿಕಾರಿಗಳು ಗುಂಡಿಗಳನ್ನು ಮುಚ್ಚದೇ ಇರಬಹುದು ಆದರೆ ಜನರೇ ಜಾಗೃತರಾಗಿ ಮಾಹಿತಿ ನೀಡಿ ಎಂದು ಹೇಳಿದ್ದೆವು. ಸಾವಿರಾರು ಜನರು ಜಾಗಗಳನ್ನು ಗುರುತಿಸಿ ಫೋಟೋಗಳನ್ನು ಕಳುಹಿಸಿದ್ದಾರೆ. ಜೊತೆಗೆ ಸಂಚಾರಿ ಪೊಲೀಸರು ತಿಳಿಸಿದ ಜಾಗಗಳಲ್ಲಿಯೂ ಸಹ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವಾಗುತ್ತಿದೆ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು.
ಜನರಿಂದಲೂ ಸಹಕಾರ ಬೇಕು
ಇದುವರೆಗು ಎಷ್ಟು ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ, ಗಡುವಿನ ಒಳಗೆ ಗುಂಡಿಗಳನ್ನು ಮುಚ್ಚಲಾಗುತ್ತದೆಯೇ ಎಂದು ಕೇಳಿದಾಗ, “ಇದು ನಿರಂತರ ಪ್ರಕ್ರಿಯೆ. ಮಳೆ ಹೆಚ್ಚಾದರೆ ರಸ್ತೆಗುಂಡಿಗಳು ಉಂಟಾಗುತ್ತವೆ. ದೊಡ್ಡ ವಾಹನಗಳು ಚಲಿಸಿದರೆ ಉಂಟಾಗುತ್ತವೆ. ಈಗ ವಿಧಾನಸೌಧದ ಮುಂದೆಯೇ ರಸ್ತೆಗುಂಡಿಗಳಾಗಿವೆ. ಮುಖ್ಯರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಬದಲಾಗುವವರೆಗೆ ಈ ಸಮಸ್ಯೆ ಇದ್ದೇ ಇರುತ್ತದೆ. ನಮ್ಮ ಜವಾಬ್ದಾರಿ ಅರಿತು ನಾವು ಕೆಲಸ ಮಾಡುತ್ತಿದ್ದೇವೆ. ಜನರು ರಸ್ತೆಯಲ್ಲಿ ಕಸ ಎಸೆಯುವುದು ಸೇರಿದಂತೆ ಇತರೇ ಕೆಲಸಗಳನ್ನು ಮಾಡುವುದು ಬಿಟ್ಟು ನಮಗೆ ಸಹಕಾರ ನೀಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ” ಎಂದರು.
ಪ್ರಧಾನಿ ನಿವಾಸದ ರಸ್ತೆಯಲ್ಲಿ ಗುಂಡಿ ಇದೆ ಎಂದು ಹೇಳಿದ್ದನ್ನೇ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಟೀಕೆ ಮಾಡಲಿ. ಅವರು ಹೇಳಿದರೆ ನಾವು ತಿದ್ದಿಕೊಳ್ಳಲು ತಯಾರಿದ್ದೇವೆ. ಟೀಕೆ ಮಾಡುತ್ತಾರೆ ಎಂದು ಬೇಸರ ಮಾಡಿಕೊಳ್ಳುವುದಿಲ್ಲ” ಎಂದರು.
ಸರಿಯಾದ ಡಾಂಬರು ಬಳಕೆ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಕೇಳಿದಾಗ, “ತಾಂತ್ರಿಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ತಿಳಿದು ಮಾತನಾಡುತ್ತೇನೆ” ಎಂದರು.
ರಸ್ತೆಗುಂಡಿ ಸಮಸ್ಯೆ ನಿವಾರಿಸಲು ಶಾಶ್ವತ ಪರಿಹಾರದ ಬಗ್ಗೆ ಕೇಳಿದಾಗ, “ವೈಟ್ ಟಾಪಿಂಗ್ ಹಾಗೂ ಹೊಸ ರಸ್ತೆ ಮಾಡುವ ಬಗ್ಗೆ ಆಲೋಚನೆ ಮಾಡಲಾಗುವುದು” ಎಂದರು.
ಹೈಕಮಾಂಡ್ ನಿಂದ ನಿಗಮ ಮಂಡಳಿ ಉಡುಗೊರೆ ಸಿಕ್ಕಿದೆ. ಶಿವಕುಮಾರ್ ಅವರಿಗೆ ಕಾವೇರಿ ಆರತಿಯ ಫಲ ದೊರೆಯಲಿದೆಯೇ ಎಂದು ಕೇಳಿದಾಗ, “ನಿಮ್ಮದು ಊಟವಾಯಿತೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ತನಿಖೆ ಮೂಲಕ ಸತ್ಯ ಹೊರಬರುತ್ತಿದೆ
ಧರ್ಮಸ್ಥಳ ಪ್ರಕರಣ ವಿಚಾರದ ಕುರಿತು ಹಾಕಿದ್ದ ಪಿಐಎಲ್ ವಜಾಗೊಂಡಿರುವ ಬಗ್ಗೆ ಕೇಳಿದಾಗ, “ಇದು ಸಹ ಷಡ್ಯಂತ್ರ. ಮಾಧ್ಯಮದವರು ಹಾಗೂ ಸಾರ್ವಜನಿಕರು ದೊಡ್ಡದಾಗಿ ಬಿಂಬಿಸಿದರು. ಪಿಐಎಲ್ ವಜಾಗೊಂಡಿದ್ದು ತಡವಾಗಿ ಸರ್ಕಾರದ ಗಮನಕ್ಕೆ ಬಂದಿತು. ಏಕೆಂದರೆ ಇದು ಬೇರೆ ವಿಚಾರ. ನಾವು ಕಾನೂನು ಚೌಕಟ್ಟಿನಲ್ಲಿ ತನಿಖೆ ಮಾಡಬೇಕು ಎಂದು ಮಾಡುತ್ತಿದ್ದೇವೆ. ವರದಿ ಬಂದ ನಂತರ ಮಾತನಾಡುತ್ತೇವೆ. ಇದರ ನಡುವೆ ಸತ್ಯ ಏನಿದೆ ಎಂದು ಹೊರಗೆ ಬರುತ್ತಿದೆ. ಮಾಧ್ಯಮಗಳಿಗೆ, ಜನರಿಗೂ ಗೊತ್ತಾಗುತ್ತಿದೆ. ಇದರ ಬಗ್ಗೆ ಗೃಹ ಸಚಿವರು ಮಾತನಾಡುತ್ತಾರೆ. ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಯಾವ ಅಧಿಕಾರಿಗಳ ಬಳಿಯೂ ಹೆಚ್ಚು ಮಾತನಾಡಲು ಹೋಗಿಲ್ಲ” ಎಂದರು.
ಜಾತಿ ಗಣತಿ ಯಾವುದೇ ಗೊಂದಲವಿಲ್ಲ
ಜಾತಿಗಣತಿ ವಿಚಾರವಾಗಿ ಗೊಂದಲಗಳು ಉಂಟಾಗಿವೆ ಎನ್ನುವ ಬಗ್ಗೆ ಕೇಳಿದಾಗ, “ಯಾವುದೇ ತೊಂದರೆಗಳು ಉಂಟಾಗಿಲ್ಲ. ಈ ಹಿಂದೆ ಅನೇಕ ಸಮುದಾಯಗಳು ನಮ್ಮನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ ಎಂದು ದನಿ ಎತ್ತಿದ್ದರು. ಈಗ ಎಲ್ಲರಿಗೂ ಅವಕಾಶ ಸಿಕ್ಕಿದೆ. ನಾನು ಎಲ್ಲರಲ್ಲಿಯೂ ಮನವಿ ಮಾಡುತ್ತಿದ್ದೇವೆ. ಸಂಘ ಸಂಸ್ಥೆಗಳು, ಸಮುದಾಯದ ಮುಖಂಡರು ಸಮುದಾಯದಲ್ಲಿ ಜಾಗೃತಿ ಮೂಡಿಸಿ ನಿಮ್ಮ ಸಮುದಾಯಗಳ ಬಗ್ಗೆ ಬರೆಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನೀವೇ ಅನ್ಯಾಯ ಮಾಡಿದಂತಾಗುತ್ತದೆ” ಎಂದು ಹೇಳಿದರು.
ಜಾತಿಜನಗಣತಿ ಬಗ್ಗೆ ಕೆಲವು ಶಿಕ್ಷಕರು ಹಾಗೂ ವಿಶೇಷ ಚೇತನ ಶಿಕ್ಷಕರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಯಾರೋ ಇಬ್ಬರು ವಿರೋಧ ಮಾಡುತ್ತಾರೆ. ವಿಶೇಷ ಚೇತನರಿಗೆ ಬುದ್ದಿವಂತಿಕೆ ಹೆಚ್ಚು” ಎಂದರು.
ಒಕ್ಕಲಿಗ ಸಮುದಾಯದ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು, ಒಕ್ಕಲಿಗರ ಸಭೆಯಲ್ಲಿ ಅವಧಿ ವಿಸ್ತರಣೆ ಮಾಡುವಂತೆ ಒತ್ತಾಯದ ಬಗ್ಗೆ ಕೇಳಿದಾಗ, “ನಾನು ಯಾವುದೇ ಸಮುದಾಯದ ಸಭೆಗೆ ಕರೆದರೂ ಹೋಗುತ್ತೇನೆ. ನನಗೆ ಯಾವುದೇ ಜಾತಿಯಿಲ್ಲ. ನಾನು ಎಲ್ಲರಿಗೂ ಬೇಕಾದವನು” ಎಂದರು.
“ನೀವು ಒಕ್ಕಲಿಗರ ಪರವಾಗಿ ಮಾತ್ರ ಇರಬೇಡಿ ಎಂದು ಒಕ್ಕಲಿಗರ ಸಭೆಯಲ್ಲಿ ನಾನು ಹೇಳಿದ್ದೇನೆ. ಇತರೇ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗಳ ಬಗ್ಗೆ ನಮಗೆ ಏನು ತಿಳಿದಿರುತ್ತದೆ. ಅದಕ್ಕೆ ಅವರುಗಳು ಏನಾದರೂ ಮಾಹಿತಿ ನೀಡಲಿ ಎಂದು ಹೇಳಿದ್ದೇನೆ” ಎಂದು ಹೇಳಿದರು.
15 ದಿನಗಳಲ್ಲಿ ಸಮೀಕ್ಷೆ ಮುಗಿಸಲು ಸಾಧ್ಯವೇ ಎಂದು ಕೇಳಿದ ಪ್ರಶ್ನೆಗೆ, “ಇದನ್ನು ಸರ್ಕಾರ ನಿರ್ಧಾರ ಮಾಡಲಿದೆ. ಯಾವುದೇ ಕೆಲಸ ಪ್ರಾರಂಭದಲ್ಲಿ ಸ್ವಲ್ಪ ನಿಧಾನವಾಗಿರುತ್ತದೆ. ಒಂದು ಹಂತಕ್ಕೆ ಬಂದ ನಂತರ ಉತ್ತಮ ಸ್ಥಿತಿಗೆ ಬರುತ್ತದೆ. ಆನಂತರ ಎಲ್ಲವೂ ಸರಿ ಹೋಗುತ್ತದೆ” ಎಂದರು.
ಕಾವೇರಿ ಆರತಿ ಬಗ್ಗೆ ಕೇಳಿದಾಗ, “ಒಂದು ವಾರಗಳ ಕಾಲ ಕಾವೇರಿ ಆರತಿ ನೆರವೇರಲಿದೆ. ಅಣೆಕಟ್ಟು ತುಂಬಿತುಳುಕುತ್ತಿದೆ. ರೈತರಿಗೆ, ಜನರಿಗೆ ಇದರಿಂದ ಒಳ್ಳೆಯದಾಗುತ್ತಿದೆ. ಆದಕಾರಣಕ್ಕೆ ತಾಯಿಗೆ ಪೂಜೆ ಮಾಡಲಾಗುತ್ತಿದೆ. ಸಮೃದ್ದಿಯಾಗಿ ಪ್ರತಿವರ್ಷ ಮಳೆ ಬರಲಿ ಎಂದು ಪ್ರಾರ್ಥನೆ ಮಾಡಲಾಗುತ್ತಿದೆ” ಎಂದರು.
ತುಷಾರ್ ಗಿರಿನಾಥ್ ಅವರಿಗೆ ಬೇರೆ ಹುದ್ದೆ ನೀಡದ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಈಗ ಪರಿಶೀಲನೆ ಮಾಡುತ್ತಿದ್ದೇವೆ” ಎಂದರು.