Kannada NewsKarnataka NewsLatest

ಪ್ರಾಮಾಣಿಕರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿ ಭ್ರಷ್ಟರಿಗೆ ಶಿಕ್ಷೆ ವಿಧಿಸಿ – ಗೃಹ ಸಚಿವರಿಗೆ ಚನ್ನರಾಜ ಹಟ್ಟಿಹೊಳಿ ಪತ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 545 ಪಿ.ಎಸ್.ಐ. (ಸಿಎಲ್) ಹುದ್ದೆಗಳ ನೇಮಕಾತಿಯಲ್ಲಿ ಪ್ರಾಮಾಣಿಕರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿ ಭ್ರಷ್ಟರಿಗೆ ಶಿಕ್ಷೆ ವಿಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಗ್ರಹಿಸಿದ್ದಾರೆ.
ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿರುವ ಅವರು, ಸಿಐಡಿ ತನಿಖೆಯ ವರದಿ ಇನ್ನೂ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ. ಈ ಹಂತದಲ್ಲೇ ಸರಕಾರ ಇಡೀ ನೇಮಕಾತಿಯನ್ನು ರದ್ದುಪಡಿಸಿ ಮರುಪರೀಕ್ಷೆಗೆ ಮುಂದಾಗಿದೆ. ಇದರಿಂದ ಪ್ರಾಮಾಣಿಕವಾಗಿ ಆಯ್ಕೆಯಾದ ಬಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ತಡೆಯಲಾರದ ಆಘಾತವಾಗಿದೆ. ಅವರು  ನ್ಯಾಯಾಲಯದ ಮೆಟ್ಟಿಲೇರಲು ಸಹ ಅವರು ಆರ್ಥಿಕವಾಗಿ ಸದೃಢವಾಗಿರುವುದಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರವು ಪ್ರಾಮಾಣಿಕ ಹಾಗೂ ಅಪ್ರಾಮಾಣಿಕರನ್ನು ಆಯ್ಕೆ ಪಟ್ಟಿಯಿಂದ ಬೇರ್ಪಡಿಸಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಪ್ರತಿಯನ್ನು ಕಾಲಮಿತಿಯೊಳಗೆ ನೀಡಿ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಕೋರಿದ್ದಾರೆ.
  ಭ್ರಷ್ಟರನ್ನು ಹಿಡಿದು ಶಿಕ್ಷಿಸಲಿ, ಆದರೆ ಈ ಮಧ್ಯೆ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ಅವರ ಹಿತಾಸಕ್ತಿಯನ್ನು ಸಹ ಪರಿಗಣಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಸರ್ಕಾರದ ನಿರ್ಧಾರದ ಮೇಲೆ ಸಾಕಷ್ಟು ಬಡ ಪ್ರಾಮಾಣಿಕ ಅಭ್ಯರ್ಥಿಗಳ ಜೀವನ ನಿಂತಿದೆ.  ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button