Latest

ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಗಮನಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಗಮನಕ್ಕೆ ಶಿಕ್ಷಣ ಇಲಾಖೆ ಕೆಲವು ಸೂಚನೆಗಳನ್ನು ನೀಡಿದೆ.

ಆಯುಕ್ತರ ಆದೇಶದ ಪ್ರಕಾರ ಮುಂದಿನ ಕ್ರಮಗಳನ್ನು ಪಾಲಿಸುವುದು ಹಾಗೂ ಮುಂದೆ ಉಲ್ಲೇಖಿಸಿರುವ ಅಂಶಗಳು ಸರಿಯಾದ ಕ್ರಮದಲ್ಲಿ ಅನುಷ್ಠಾನಗೊಂಡಿರುವುದನ್ನು ಖಚಿತಪಡಿಸಿಕೊಳ್ಳುವುದು ಎಂದು ತಿಳಿಸಲಾಗಿದೆ.

1. ನ.2ರಿಂದ ಶಾಲೆಗೆ ಶಿಕ್ಷಕರುಗಳು ಮಾತ್ರವೇ ಹಾಜರಾಗಬೇಕಿದ್ದು ಅದರಂತೆ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿರಬೇಕು.

2. ಎಲ್ಲಾ ಶಿಕ್ಷಕರು NISHTA ಮಾಡ್ಯೂಲ್‌ಗಳ ಅಧ್ಯಯನಕ್ಕೆ ಕಡ್ಡಾಯವಾಗಿ ನೋಂದಾಯಿತರಾಗಿರಬೇಕು.

3. ವಿದ್ಯಾಗಮ ಕಾರ್ಯಕ್ರಮದ ಪ್ರತಿ ವಿದ್ಯಾರ್ಥಿಯ ಪ್ರಗತಿ ಅಂಶಗಳನ್ನು ತರಗತಿ ವಿಷಯವಾರು ದಾಖಲೆಗಳನ್ನು ನಿರ್ವಹಿಸಿರಬೇಕು.

4. ಪ್ರತಿ ವಿದ್ಯಾರ್ಥಿಯ ಕಲಿಕಾ ಕೊರತೆಗಳನ್ನು ಪಟ್ಟಿ ಮಾಡಿರಬೇಕು.

5. ದಿನಾಂಕ:04/08/2020 ರಂದು ರಾಜ್ಯ ಯೋಜನಾ ಕಛೇರಿಯಿಂದ ಹೊರಡಿಸಿರುವ ಆದೇಶ ಪತ್ರದಲ್ಲಿನ ಮಾರ್ಗದರ್ಶನದಂತೆ, ರೂಪಣಾತ್ಮಕ ಮೌಲ್ಯಮಾಪನದ ವಿವರಗಳನ್ನು SATSನಲ್ಲಿ ಅಪ್ಲೋಡ್ ಮಾಡಬೇಕು. (ಸಂಕಲನಾತ್ಮಕ ಮೌಲ್ಯಮಾಪನವನ್ನು ಸದ್ಯದ ಪರಿಸ್ಥಿತಿಯಲ್ಲಿ ಕೈಬಿಡಲಾಗಿದೆಯೆಂದು ಮಾರ್ಗದರ್ಶನವಿದೆ.)

6. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಕೊರತೆಯ ಅಂಶಗಳನ್ನು ಹಾಗೂ ಮುಂದಿನ ದಿನಗಳ ಯಶಸ್ವಿ ಬೋಧನೆಗೆ ಅನುಕೂಲವಾಗಲು ಪಾಠೋಪಕರಣಗಳನ್ನು ಮತ್ತು ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

7. ಡಿಎಸ್‌ಇಆರ್‌ಟಿ ಯೂ ಟ್ಯೂಬ್ ಚಾನೆಲ್ “ಜ್ಞಾನ ದೀಪ” ವಿಡಿಯೋಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಟಿವಿಯಲ್ಲಿ ಪ್ರಸಾರವಾಗುತ್ತಿರುವ “ಸಂವೇದ” ಕಾರ್ಯಕ್ರಮ ವೀಕ್ಷಣೆ ಹಾಗೂ ಜನಧ್ವನಿ ರೇಡಿಯೋ ಪಾಠಗಳನ್ನು ಆಲಿಸುವಂತೆ ಕ್ರಮಕೈಗೊಂಡಿರಬೇಕು.

8. ಕೊಠಡಿಗಳು, ಶಾಲಾವರಣ, ಶೌಚಾಲಯಗಳು ಶುಚಿಯಾಗಿರಬೇಕು.

9. ನೀರಿನ ಮೂಲಗಳನ್ನು (ಟ್ಯಾಂಕ್, ಸಂಪ್, ಫಿಲ್ಟರ್, ಇತ್ಯಾದಿ) ಶುದ್ಧೀಕರಿಸಿರಬೇಕು.

10. ಶುದ್ಧ ಕುಡಿಯುವ ನೀರಿನ ಲಭ್ಯತೆಯಿರಬೇಕು; ಇಲ್ಲವಾದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿರಬೇಕು.

11. ಶಾಲಾನುದಾನ ಬಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲಾಖಾ ನಿಯಮಗಳನುಸಾರವಾಗಿ ತುರ್ತು ಅಗತ್ಯಗಳನ್ನು ಪರಿಗಣಿಸಿರಬೇಕು.

ಮೇಲ್ಕಂಡ ಎಲ್ಲಾ ಅಂಶಗಳನ್ನು ಆಯಾ ಮುಖ್ಯ ಶಿಕ್ಷಕರು, ಸಿ.ಆರ್ ಪಿ, ಬಿ.ಆರ್ ಪಿ, ಬಿ.ಐ.ಇ.ಆರ್.ಟಿ,ಮತ್ತು ಇ.ಸಿ.ಒ ಗಳು ಅನುಪಾಲನೆ ಮಾಡುವುದು ಎಂದು ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button