Kannada NewsKarnataka NewsNationalPolitics

*2000 ಲೈನ್‌ಮೆನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ಇಂಧನ ಇಲಾಖೆಗೆ ಸದ್ಯದಲ್ಲೇ 2000 ಲೈನ್‌ಮೆನ್‌ಗಳ ನೇಮಕ ಆಗಲಿದ್ದು, ಈ ಸಂಬಂಧ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. 

ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ  ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಇಂಧನ ಸಚಿವರು, “ಲೈನ್‌ಮೆನಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು,ಪಾರದರ್ಶಕತೆಗೆ  ಒತ್ತು ನೀಡಲಾಗುತ್ತದೆ,” ಎಂದರು.

“ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾವಾಗ ಸ್ಥಳಿಯರಿಗೆ ಆದ್ಯತೆ ನೀಡಬೇಕು ಮತ್ತು 371 ಜೆ ಅನ್ವಯ ಮೀಸಲು ನೀಡಬೇಕು. ಆದರೆ ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದ್ದರಿಂದ ಎಷ್ಟು ಜನ ಬೇಕು ಅಂತ ನಿರ್ಧರಿಸಿ, ಅವರಿಗೆ ಕೆಪಿಸಿಎಲ್‌ನಿಂದ ಅಗತ್ಯ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು. ನಮ್ಮ ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ,” ಎಂದು ತಿಳಿಸಿದರು.

“ಈಗಾಗಲೇ  1000 ಸಹಾಯಕ ಇಂಜಿನಿಯರ್‌ಗಳ (ಎಇ), ಕಿರಿಯ ಇಂಜಿನಿಯರ್‌ಗಳ (ಜೆಇ) ನೇಮಕ ಮಾಡಿ ಕಾರ್ಯಾದೇಶವನ್ನೂ ನೀಡಿದ್ದೇವೆ. ಇಂಧನ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 400 ಸಹಾಯಕ ಇಂಜಿನಿಯರ್‌ಗಳಿಗೆ ಇತ್ತೀಚೆಗೆ ಕಾರ್ಯಾನುಭವ ತರಬೇತಿ ನೀಡಲಾಗಿದೆ. ತ್ವರಿತ ನೇಮಕಾತಿಗಾಗಿ ಈ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಳ ನಿರಂತರ ಪ್ರಯತ್ನದಿಂದ 6 ತಿಂಗಳೊಳಗೆ ನೇಮಕ ಆದೇಶ ನೀಡಲಾಗಿದೆ,” ಎಂದು ಅವರು ಹೇಳಿದರು. 

ದಾಖಲೆ ಉತ್ಪಾದನೆ

“ಈ ಬಾರಿ ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ಉಷ್ಣ ಸ್ಥಾವರದಲ್ಲಿ ದಾಖಲೆ ವಿದ್ಯುತ್‌ ಉತ್ಪಾದನೆ ಮಾಡಿದ್ದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು.  ಅಧಿಕಾರಿಗಳ ಶ್ರಮವನ್ನು ಪ್ರಶಂಸನೀಯ. ಅವರೆಲ್ಲನ್ನೂ ಅಭಿನಂದಿಸಲೆಂದೇ ಇಲ್ಲಿಗೆ ಬಂದಿದ್ದೇನೆ,”ಎಂದರು.

“ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2000 ಮಿಲಿಯನ್ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಏಪ್ರಿಲ್ ನಲ್ಲಿ 2,400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದು ದಾಖಲೆಯಾಗಿದೆ,” 

“ಅದರಲ್ಲೂ ಆರ್‌ಟಿಪಿಎಸ್‌ ವಿದ್ಯುತ್‌ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆಗಿದೆ.  ದಿನಕ್ಕೆ 210 ಮೆಗಾವ್ಯಾಟ್‌ ಸಾಮರ್ಥ್ಯದ 3ನೇ ವಿದ್ಯುತ್‌ ಘಟಕದಲ್ಲಿ ಏಪ್ರಿಲ್‌ 4ರಂದು 216 ಮೆಗಾವ್ಯಾಟ್‌ ಉತ್ಪಾದನೆ ಮಾಡಲಾಗಿದ್ದು, ಆ ಮೂಲಕ ಇತಿಹಾಸ ಬರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‌ಟಿಪಿಎಸ್‌ನ ಏಳು ವಿದ್ಯುತ್‌ ಘಟಕಗಳು ಸೇರಿ ಶೇ. 85ರಷ್ಟು ವಿದ್ಯುತ್‌ ಉತ್ಪಾದಿಸಿವೆ,”

“ಅದೇರೀತಿ, ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌) 2023-24 ಹಣಕಾಸು ವರ್ಷದಲ್ಲಿ 6229.250 ಮಿ.ಯೂ. ಉತ್ಪಾದಿಸಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ. ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ 6000 ಮಿ.ಯೂ. ಗುರಿಯನ್ನು ವೈಟಿಪಿಎಸ್‌ ಮೀರಿದೆ. ಇನ್ನು ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರ 8208.476 ಮಿ.ಯೂ ವಿದ್ಯುತ್‌ ಉತ್ಪಾದಿಸಿದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ಸಾಧಿಸಿದ ಅತ್ಯಧಿಕ ಉತ್ಪಾದನೆಯ ದಾಖಲೆ ಇದಾಗಿದೆ,” 

“ಆರ್‌ಟಿಪಿಎಸ್, ಒಂದನೇ ಘಟಕ ತೀರಾ ಹಳೆಯದು ಎಂಬ ಕಾರಣಕ್ಕೆ ಮುಚ್ಚುವುದಿಲ್ಲ. ಈ ಕುರಿತು ಊಹಾಪೋಹ ಅಷ್ಟ. ಆದರೆ ನಾವು ಈಗಾಗಲೇ ಕೆಪಿಸಿ ಬೋರ್ಡ್ ಮೀಟಿಂಗಲ್ಲಿ ತೀರ್ಮಾನ ತಗೊಂಡಿದೀವಿ‌ ಅದನ್ನ ಸರಿ ಮಾಡಲು ಅಗತ್ಯಹಣ ಬಿಡುಗಡೆಗೂ ನಿರ್ಧರಿಸಲಾಗಿದೆ,”ಎಂದು ಹೇಳಿದರು. 

ಕಲ್ಲಿದ್ದಲು ಕೊರತೆ ಇಲ್ಲ

“ನಮ್ಮ ಸರ್ಕಾರ ಬಂದ ಮೇಲೆ ಕಲ್ಲಿದ್ದಲು ಸಮಸ್ಯೆ ಇಲ್ಲದಂತೆ ನೋಡಕೊಂಡಿದ್ದೇವೆ. ಒಂದು ತಿಂಗಳಿಗೆ ಬೇಕಾದ ಕಲ್ಲಿದ್ದಲು ಸಂಗ್ರಹದಲ್ಲಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದ  3 ಕಲ್ಲಿದ್ದಲು ಘಟಕಗಳಿಂದ ಕಲ್ಲಿದ್ದಲು ಬರುತ್ತಿದೆ. ಕ್ಯಾಪ್ಟಿವ್ ಮೈನಿಂಗ್‌ನಿಂದಲೂ ಕಲ್ಲಿದ್ದಲು ಬರ್ತಿದೆ. ಪ್ರಸ್ತುತ 14 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ,”ಎಂದು ಸಚಿವರು ವಿವರ ನೀಡಿದರು. 

ಸಭೆಯಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಹಂಪಯ್ಯ‌ ನಾಯಕ್, ಮಾನಪ್ಪ ವಜ್ಜಲ್, ಬಸವರಾಜ್ ತುರುವಿನಹಾಳ್, ವಿಧಾನ ಪರಿಷತ್ ಸದಸ್ಯ ವಸಂತಕುಮಾರ್, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button