*ದೀಪಾವಳಿ ಬಳಿಕ ಯುಪಿಐ ಬಳಕೆದಾರರಿಗೆ ಬಿಗ್ ರಿಲೀಫ್*: *ಶುಲ್ಕದ ಬಗ್ಗೆ NPCI ಸ್ಪಷ್ಟನೆ!*

ಪ್ರಗತಿವಾಹಿನಿ ಸುದ್ದಿ: ಯುಪಿಐ ಮೂಲಕ ಹಣ ಪಾವತಿಸುವ ಗ್ರಾಹಕರು ಹಾಗೂ ಡಿಜಿಟಲ್ ಪಾವತಿ ಸ್ವೀಕರಿಸುವ ವ್ಯಾಪಾರಿಗಳಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟಪಡಿಸಿದೆ.
ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆರಂಭದಲ್ಲಿ ಈ ಹೊಸ ಶುಲ್ಕದ ನಿಯಮವನ್ನು ದೀಪಾವಳಿಗೂ ಮುನ್ನವೇ ಜಾರಿಗೆ ತರಲು NPCI ಯೋಜಿಸಿತ್ತು. ಆದರೆ ಹಬ್ಬದ ವ್ಯಾಪಾರ-ವಹಿವಾಟಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ಹಬ್ಬ ಮುಗಿದ ಬಳಿಕ ಶುಲ್ಕ ಜಾರಿಗೆ ಬರಬಹುದೇ ಎಂಬ ಕುತೂಹಲ ಗ್ರಾಹಕರು ಮತ್ತು ವ್ಯಾಪಾರಿಗಳಲ್ಲಿ ಮೂಡಿತ್ತು. ಆದರೆ, ಸದ್ಯಕ್ಕೆ MDR ಶುಲ್ಕ ವಿಧಿಸುವ ಯಾವುದೇ ಯೋಜನೆ ಇಲ್ಲ ಎಂದು NPCI ತಿಳಿಸಿದೆ.
ಆದರೆ, ಈ ಕುರಿತು ಮುಂದಿನ ದಿನಗಳಲ್ಲಿ ಯಾವುದೇ ಬದಲಾವಣೆ ಆಗಲಿದೆಯೇ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಸದ್ಯಕ್ಕೆ ಯುಪಿಐ ಪಾವತಿದಾರರು ಮತ್ತು ವ್ಯಾಪಾರಿಗಳಿಗೆ ಶುಲ್ಕದ ಆತಂಕವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



