ಏನೇ ಆದರೂ, ಅಧ್ಯಕ್ಷರಾದ ನಂತರ ಸರಕಾರಿ ನೌಕರರಿಗಾಗಿ ಹಲವಾರು ಒಳ್ಳೆಯ ಕೆಲಸ ಮಾಡುತ್ತ ಬಂದಿರುವ ಷಡಕ್ಷರಿ, ಎನ್ ಪಿಎಸ್ ವಿಚಾರವಾಗಿ ನೌಕರರ ಆಕ್ರೋಶಕ್ಕೆ ತುತ್ತಾಗಿರುವುದು ದುರಾದೃಷ್ಟವೇ ಸರಿ. ತಕ್ಷಣ ಎನ್ ಪಿಎಸ್ ನೌಕರರೊಂದಿಗೆ ಮಾತುಕತೆ ನಡೆಸಿ ಮುಂದಿನ ಹೋರಾಟದ ದಾರಿಯ ಬಗ್ಗೆ ಚರ್ಚಿಸುವುದು ಒಳಿತು.
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇಷ್ಟು ದಿನ ಭಾರೀ ಜನಪ್ರಿಯತೆ ಗಳಿಸಿ ಎಲ್ಲ ನೌಕರರಿಂದ ಶಹಬ್ಸಾಸ್ ಪಡೆದಿದ್ದ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ವಿರುದ್ಧ ಈಗ ನೌಕರರೇ ತಿರುಗಿ ಬಿದ್ದಿದ್ದಾರೆ. ರಾಜ್ಯಾದ್ಯಂತ ಇರುವ 2006ರ ನಂತರ ಕೆಲಸಕ್ಕೆ ಸೇರಿರುವ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಷಡಾಕ್ಷರಿ ವಿರುದ್ಧ ಹಿಗ್ಗಾ ಮುಗ್ಗಾ ಝಾಡಿಸುತ್ತಿದ್ದಾರೆ.
ರಾಜ್ಯ ಸರಕಾರ 2006ರಿಂದ ಹಳೆಯ ಪಿಂಚಣಿ (OPS) ರದ್ದುಪಡಿಸಿ ಹೊಸ ಪಿಂಚಣಿ (NPS) ಯೋಜನೆ ಜಾರಿಗೆ ತಂದಿದೆ. ಇದರ ವಿರುದ್ಧ ಅಂದಿನಿಂದಲೂ ನೌಕರ ಹೋರಾಟ ನಡೆದೇ ಇದೆ. ಸರಕಾರ ಪರಿಶೀಲಿಸಲಾಗುವುದು, ನೋಡೋಣ, ಮಾಡೋಣ, ಚರ್ಚಿಸೋಣ ಎನ್ನುತ್ತ ಮೂಗಿಗೆ ತುಪ್ಪ ಸವರುತ್ತಲೇ ಬಂದಿದೆ.
ವಿಧಾನ ಸಭೆಯ ಕಳೆದ ಅಧಿವೇಶನದಲ್ಲಿ ಎನ್ ಪಿಎಸ್ ನೌಕರರಿಗೆ ಒಳ್ಳೆಯ ಸುದ್ದಿ ಕೊಡುತ್ತೇನೆ, ಜಾರಿಗೊಳಿಸಿದ ನಂತರ ಮಾತನಾಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮತ್ತೆ ಉಲ್ಟಾ ಹೊಡೆದಿದ್ದಾರೆ. ಇದರಿಂದ ಸರಕಾರಕ್ಕಾಗುವ ಹೊರೆಯ ಕುರಿತು ಚರ್ಚಿಸಲಾಗುವುದು ಎಂದಿದ್ದಾರೆ.
ಎನ್ ಪಿಎಸ್ ನೌಕರರು ಡಿಸೆಂಬರ್ 19ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಿದ್ದಾರೆ. ಸಾವಿರಾರು ನೌಕರರು ಕುಟುಂಬ ಸಮೇತ ಬಂದು ಧರಣಿ ನಡೆಸುತ್ತಿದ್ದಾರೆ. ಈ ಬಾರಿ ನಿರ್ಣಾಯಕ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಆದರೆ ಈ ನೌಕರರಿಗೆ ಬೆಂಬಲ ಸೂಚಿಸಬೇಕಿದ್ದ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಢಾಕ್ಷರಿ ಅತ್ತ ಸುಳಿಯಲೇ ಇಲ್ಲ. ಜೊತೆಗೆ ಏಪ್ರಿಲ್ ನಂತರ ಹೋರಾಟ ಮಾಡುವ ಮಾತನ್ನಾಡುತ್ತಿದ್ದಾರೆ. 7ನೇ ವೇತನ ಆಯೋಗದ ವರದಿ ಜಾರಿಯಾದ ನಂತರ ಎನ್ ಪಿಎಸ್ ಕುರಿತು ಹೋರಾಟ ಮಾಡಲಾಗುವುದು ಎಂದಿದ್ದಾರೆ. ಇಷ್ಟೇ ಅಲ್ಲ, ಎನ್ ಪಿಎಸ್ ಹೋರಾಟಕ್ಕೆ ಬೆಂಬಲವೇ ಇಲ್ಲ, ನೌಕರರೇ ಬಂದಿಲ್ಲ ಎಂದೆಲ್ಲ ಹೇಳಿಕೆ ನೀಡುತ್ತಿದ್ದಾರೆ ಎಂದು ನೌಕರರು ಆರೋಪಿಸುತ್ತಿದ್ದಾರೆ.
ಇದರಿಂದ ಕೆರಳಿ ಕೆಂಡವಾಗಿರುವ ಎನ್ ಪಿಎಸ್ ನೌಕರರು ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ನಿಮ್ಮನ್ನು ಕಾಣದ ಕೈಗಳು ಆಡಿಸುತ್ತಿವೆ ಎಂದಿದ್ದಾರೆ. ಕೆಲವರು ಖಳನಾಯಕ ಎಂದೂ ಕಿಡಿಕಾರಿದ್ದಾರೆ. 7ನೇ ವೇತನ ಆಯೋಗ ರಚನೆ ಸಾಧನೆ ಅಲ್ಲ, ಅದು ಸರಕಾರದ ಕರ್ತವ್ಯ. ನೀವೇನು ಮಾಡಿದ್ದೀರಿ ನೌಕರರಿಗೆ ಎಂದು ಪ್ರಶ್ನಿಸುತ್ತಿದ್ದಾರೆ.
ರಾಜ್ಯ ಸರಕಾರಿ ನೌಕರರ ಸಂಘದಿಂದ ಎನ್ ಪಿಎಸ್ ನೌಕರರ ಸಂಘವನ್ನು ಪ್ರತ್ಯೇಕಿಸಬೇಕು ಎಂದು ಕೇಳಿದ್ದಾರೆ. ಚುನಾವಣೆ ವೇೆಳೆ ಎನ್ ಪಿಎಸ್ ರದ್ದುಪಡಿಸುವು ನನ್ನ ಗುರಿ ಎಂದು ನೀವು ಹೇಳಿದ್ದು ಸುಳ್ಳಾ ಎಂದು ಪ್ರಶ್ನಿಸಿದ್ದಾರೆ. ಈಗ9 ಬೆಂಬಲಿಸದಿದ್ದರೆ ಮುಂದೆ ತಕ್ಕ ಬೆಲೆ ತೆರಬೇಕಾದೀತು ಎಂದಿದ್ದಾರೆ. ಸಮಯ ಸಾಧಕ ಎಂದು ಝಾಡಿಸಿದ್ದಾರೆ. ಏಪ್ರಿಲ್ ವರೆಗೆ ಹೋರಾಟ ಮುಂದಕ್ಕೆ ಹಾಕಿ ಈ ಸರಕಾರವನ್ನು ಪಾರು ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಬಕೆಟಿ ಹಿಡಿಯುವುದನ್ನು ಬಿಡಿ, ನೌಕರರ ಪರವಾಗಿ ನಿಲ್ಲಿ ಎಂದು ಆಗ್ರಹಿಸಿದ್ದಾರೆ.
ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ, ವಾಗ್ದಾಳಿ ಮುಂದುವರಿದಿದೆ.
ಏನೇ ಆದರೂ, ಅಧ್ಯಕ್ಷರಾದ ನಂತರ ಸರಕಾರಿ ನೌಕರರಿಗಾಗಿ ಹಲವಾರು ಒಳ್ಳೆಯ ಕೆಲಸ ಮಾಡುತ್ತ ಬಂದಿರುವ ಷಡಕ್ಷರಿ, ಎನ್ ಪಿಎಸ್ ವಿಚಾರವಾಗಿ ನೌಕರರ ಆಕ್ರೋಶಕ್ಕೆ ತುತ್ತಾಗಿರುವುದು ದುರಾದೃಷ್ಟವೇ ಸರಿ. ತಕ್ಷಣ ಎನ್ ಪಿಎಸ್ ನೌಕರರೊಂದಿಗೆ ಮಾತುಕತೆ ನಡೆಸಿ ಮುಂದಿನ ಹೋರಾಟದ ದಾರಿಯ ಬಗ್ಗೆ ಚರ್ಚಿಸುವುದು ಒಳಿತು.
ಮಂಡ್ಯದ ಎನ್ ಪಿಎಸ್ ನೌಕರರ ಸಂಘಧ ಪದಾಧಿಕಾರಿಯೊಬ್ಬರ ಪತ್ರ ಇಲ್ಲಿದೆ:
*ಮಾಡು ಇಲ್ಲವೇ ಮಡಿ ಎನ್.ಪಿ.ಎಸ್ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡದೆ ಹಗುರವಾಗಿ ಮಾತಾನಾಡಿದ ಸಿ,ಎಸ್ ಷಡಾಕ್ಷರಿರವರ ನಡೆಗೆ ದಿಕ್ಕಾರ*
ನೂತನ ಪಿಂಚಣಿ ಯೋಜನೆ ವಿರೋಧಿಸಿ ಹಳೆ ಪಿಂಚಣಿಯನ್ನು ಮರು ಜಾರಿಗೊಳಿಸುವಂತೆ ಎನ್.ಪಿ.ಎಸ್ ನೌಕರರು ಹಮ್ಮಿಕೊಂಡಿರುವ ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿರವರು ತುಂಬು ಹೃದಯದಿಂದ ಬೆಂಬಲ ನೀಡುವ ನಿರೀಕ್ಷೆ ಇತ್ತು, ಆದರೆ ಬೆಂಬಲ ನೀಡುವುದರ ಬದಲಾಗಿ ಎನ್. ಪಿ.ಎಸ್ ಹೋರಾಟದ ಬಗ್ಗೆ ಹಗುರವಾಗಿ ಮಾತಾನಾಡಿರುವುದು ಎನ್.ಪಿ.ಎಸ್ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘವು, ಸರ್ಕಾರಿ ನೌಕರರ ಹಿತವನ್ನು ಕಾಪಾಡುವ ಧ್ಯೇಯೊದ್ದೇಶದಿಂದ ಸ್ಥಾಪನೆಗೊಂಡಿರುವುದರಿಂದ, 2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆಯ ವಿರುದ್ಧದ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಬೆಂಬಲ ನೀಡುವುದು ರಾಜ್ಯಾಧ್ಯಕ್ಷರಾದ ಷಡಕ್ಷರಿಯವರ ಕರ್ತವ್ಯ ಕೂಡ ಆಗಿತ್ತು, ಆದರೆ ಲಕ್ಷಾಂತರ ಎನ್.ಪಿ.ಎಸ್ ನೌಕರರ ಬದುಕಿನ ಹೋರಾಟಕ್ಕೆ ಬೆಂಬಲ ನೀಡುವುದರ ಬದಲಾಗಿ ಡಿಸೆಂಬರ್ 19 ರಂದು ಸೇರಿದ್ದ ಲಕ್ಷಾಂತರ ಎನ್.ಪಿ.ಎಸ್ ನೌಕರರ ಬಗ್ಗೆ ಹಗುರವಾಗಿ ಮಾತಾನಾಡಿ, ಎನ್.ಪಿ.ಎಸ್ ನೌಕರರು ಕೇವಲ 2000 ಸಾವಿರ ಜನರು ಸೇರಿ ಹೋರಾಟ ಮಾಡುತ್ತಿದ್ದಾರೆ, ಸರ್ಕಾರದ ಮುಂದೆ ನಾವು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವುದರ ಮೂಲಕ ಎನ್.ಪಿ.ಎಸ್ ವಿರೋಧಿ ಹೋರಾಟವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿರುವುದು ಷಡಕ್ಷರಿಯವರ ನೌಕರರ ವಿರೋಧಿ ಧೋರಣೆಯನ್ನು ಎತ್ತಿ ಹಿಡಿಯುತ್ತದೆ.
ಎನ್.ಪಿ.ಎಸ್ ರದ್ದತಿಗೆ ನೌಕರರು ಕಳೆದ 6 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರು ಸಹ ಯಾವುದೇ ಫಲ ಸಿಗದ ಕಾರಣ ಡಿಸೆಂಬರ್ 19 ರಂದು ಫ್ರೀಡಂ ಪಾರ್ಕ್ ನಲ್ಲಿ ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಅಂತಿಮ ಹೋರಾಟಕ್ಕೆ ನಮ್ಮ ರಾಜ್ಯದಲ್ಲಿರುವ ಲಕ್ಷಾಂತರ ಎನ್.ಪಿ.ಎಸ್ ನೌಕರರು ಹೋರಾಡುತ್ತಿರುವ ಇಂತಹ ಸುಸಂದರ್ಭದಲ್ಲಿ ಹೋರಾಟವನ್ನು ಬೆಂಬಲಿಸುವುದನ್ನು ಬಿಟ್ಟು, ಏಪ್ರಿಲ್ ನಂತರ ಹೋರಾಟ ಮಾಡಲಾಗುವುದು ಎಂಬ ಷಡಕ್ಷರಿಯವರ ಹೇಳಿಕೆಯು ಹಾಸ್ಯಾಸ್ಪದ ಹೇಳಿಕೆಯ ಜೊತೆಗೆ ಎನ್.ಪಿ.ಎಸ್ ನೌಕರರನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ.
ಈ ಹೋರಾಟವು ಯಾವುದೇ ಸರ್ಕಾರಗಳ ವಿರುದ್ಧದ ಹೋರಾಟವಲ್ಲ ಬದಲಾಗಿ ಇದು ಕೇವಲ ನೂತನ ಪಿಂಚಣಿ ಯೋಜನೆಯ ವಿರುದ್ಧದ ಹೋರಾಟ ಎಂದು ಈಗಾಗಲೇ ಎನ್.ಪಿ.ಎಸ್ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ್ ರವರು ಸ್ಪಷ್ಟಪಡಿಸುವುದರ ಮೂಲಕ ರಾಜ್ಯಾದ್ಯಂತ ಓ.ಪಿ.ಎಸ್ ಸಂಕಲ್ಪಯಾತ್ರೆಯನ್ನು ಕೈಗೊಂಡು ಎನ್.ಪಿ.ಎಸ್ ನೌಕರರನ್ನು ಜಾಗೃತಗೊಳಿಸಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ನೇತೃತ್ವವನ್ನು ವಹಿಸಿಕೊಂಡು ಅಹೋರಾತ್ರಿ ಧರಣಿ ಮಾಡುತ್ತಿದ್ದು, ಇವರಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದ್ದ ಷಡಾಕ್ಷರಿರವರು ಸ್ವಪ್ರತಿಷ್ಠೆಯ ಹೇಳಿಕೆಗಳನ್ನು ನೀಡುತ್ತಿರುವುದು ಎನ್.ಪಿ.ಎಸ್ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿ ವರ್ಷವೂ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ 200ರೂ ವಂತಿಗೆ ನೀಡುವ ಪ್ರತಿಯೊಬ್ಬ ಸರ್ಕಾರಿ ನೌಕರರ ಹಿತ ಕಾಪಾಡುವ ಬದಲಾಗಿ ಷಡಕ್ಷರಿಯವರು ಸಂಘದ ಸರ್ವಾಧಿಕಾರ ಧೋರಣೆಗಳನ್ನು ಖಂಡಿಸುವ ನೌಕರರನ್ನು ಹಾಗೂ ಸಂಘದ ಚುನಾಯಿತ ನಿರ್ದೇಶಕರುಗಳನ್ನು ತಾಲ್ಲೂಕು ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಮೂಲಕ ಅಧಿಕಾರ ದುರ್ಬಳಕೆ ಮಾಡಿ ಸದಸ್ಯತ್ವ ಅಮಾನತುಗೊಳಿಸುವಂತೆ ಮಾಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಅನೇಕ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಹೆಸರಿನಲ್ಲಿ ರಾಜ್ಯಾಧ್ಯಕ್ಷರಾಗಿ ಸರ್ಕಾರಿ ನೌಕರರ ಹಿತ ಕಾಪಾಡುವುದನ್ನು ಬಿಟ್ಟು ನೌಕರರನ್ನೆ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಬಹಳ ನೋವಿನ ಸಂಗತಿ.
ಘನ ಸರ್ಕಾರವು ಕಾಲ ಕಾಲಕ್ಕೆ ಸರ್ಕಾರಿ ನೌಕರರ ಪರವಾದ ಆದೇಶಗಳನ್ನು ಮಾಡಿದ ಸಂದರ್ಭಗಳಲ್ಲಿ, ಸರ್ಕಾರ ಮಾಡುವ ಆದೇಶಗಳೆಲ್ಲವೂ ನನ್ನಿಂದಲೇ ಆಗಿದ್ದು ಎಂದು ಬಿಂಬಿಸಿಕೊಂಡು ತನ್ನ ಫೋಟೋ ಹಾಕಿ ಜಾಹೀರಾತು ನೀಡಿ ಬಿಟ್ಟಿ ಪ್ರಚಾರ ಪಡೆದು ಮುಗ್ಧ ಸರ್ಕಾರಿ ನೌಕರರಿಗೆ ಮಂಕು ಬೂದಿ ಎರಚುತ್ತಿರುವುದು ನಾಚಿಕೆಗೇಡಿನ ಸಂಗತಿ.
ಈಗಾಗಲೇ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಸೇರಿದಂತೆ ರಾಜ್ಯದ ಅನೇಕ ಸರ್ಕಾರಿ ನೌಕರರ ವೃಂದ ಸಂಘಗಳು, ಹಾಗೂ ಓ.ಪಿ,ಎಸ್ ನೌಕರ ಬಾಂಧವರು ಡಿಸೆಂಬರ್ 19 ರಿಂದ ನಡೆಯುತ್ತಿರುವ ಫ್ರೀಡಂ ಪಾರ್ಕ್ ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಎನ್.ಪಿ.ಎಸ್ ಹೋರಾಟಕ್ಕೆ ಬೆಂಬಲ ನೀಡುವುದರ ಮೂಲಕ ನೌಕರರ ಪರವಾದ ಬದ್ಧತೆಯನ್ನು ಪ್ರದರ್ಶಿಸಿ ಎನ್.ಪಿ.ಎಸ್ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ .
ಹಾಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರಿಗೆ ಇನ್ನೂ ಕಾಲ ಮಿಂಚಿಲ್ಲ,ಇನ್ನಾದರೂ ಮಾಡು ಇಲ್ಲವೇ ಮಡಿ ಎನ್.ಪಿ.ಎಸ್ ನೌಕರರ ಹೋರಾಟಕ್ಕೆ ಬೆಂಬಲ ನೀಡಿ ನೌಕರರ ಪರವಾದ ನಿಲುವನ್ನು ಪ್ರದರ್ಶಿಸಲಿ ಇಲ್ಲವಾದಲ್ಲಿ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂಬುದು ರಾಜ್ಯ ಎನ್.ಪಿ .ಎಸ್ ನೌಕರರ ಪರವಾದ ಆಗ್ರಹವಾಗಿದೆ.
*ಈ ಸಂದೇಶವನ್ನು ಪ್ರತಿಯೊಬ್ಬ ಎನ್.ಪಿ.ಎಸ್ ನೌಕರನಿಗೂ ಶೇರ್ ಮಾಡಿ*
ಇಂತಿ ಎನ್.ಪಿ.ಎಸ್ ಬಾಧಿತ ನೌಕರ
ಮನು ಕುಮಾರ್ ಎ ಎಸ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಡ್ಯ,
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಮಂಡ್ಯ.
9740770170
——
https://pragati.taskdun.com/shadaksharigheravvijayapuranps/