
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಸಧ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳುವುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಮೂಲಕ ನೂಪುರ್ ಶರ್ಮಾ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ಖಂಡಿಸಿ ದೇಶಾದ್ಯಾಂತ ಅವರ ವಿರುದ್ಧ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ನೂಪುರ್ ವಿರುದ್ಧ ಹಲವು ಎಫ್ ಐ ಆರ್ ದಾಖಲಾಗಿತ್ತು.
ತನ್ನ ವಿರುದ್ಧದ ಎಫ್ ಐ ಆರ‍್ ರದ್ದುಗೊಳಿಸುವಂತೆ ಹಾಗೂ ತಮ್ಮ ವಿರಿದ್ಧದ ಎಲ್ಲಾ ಕೇಸ್ ಗಳನ್ನು ದೆಹಲಿಗೆ ವರ್ಗಾವಣೆ ಮಾಡುವಂತೆ ಕೋರಿ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೇ ತಮಗೆ ಜೀವ ಬೆದರಿಕೆಯಿದ್ದು, ಜೀವ ಬೆದರಿಕೆ ಹಾಕಿದವರನ್ನು ಬಂಧಿಸುವಂತೆ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸಂಬಂಧ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ನೂಪುರ್ ವಿರುದ್ಧ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ, ಆಕೆಗೆ ಭದ್ರತೆ ಒದಗಿಸುವಂತೆ ಎಂದು ತಿಳಿಸಿದೆ.
ಅಲ್ಲದೇ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ. ಈ ಮೂಲಕ ನೂಪುರ್ ಶರ್ಮಾಗೆ ರಿಲೀಫ್ ಸಿಕ್ಕಂತಾಗಿದೆ.