
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಗೆ ಸರಕಾರ ಸಾವಿರ ಕೋಟಿಯಲ್ಲ, ಲಕ್ಷ ಕೋಟಿ ಅನುದಾನ ಕೊಟ್ಟರೂ ನಗರ ಮಾತ್ರ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿನ ಇಲಾಖೆಗಳ ಮೇಲೆ ಯಾರ ಹಿಡಿತವೂ ಇದ್ದಂತೆ ಕಾಣುತ್ತಿಲ್ಲ. ಹಿಡಿತ ಇಟ್ಟುಕೊಳ್ಳಬೇಕಾದವರು ನಿದ್ರೆಯಿಂದ ಎಚ್ಚೆತ್ತರೆ ತಾನೆ?
ಮಹಾನಗರದ ರಸ್ತೆಗಳು ಸ್ಮಾರ್ಟ್ ಸಿಟಿ ಯೋಜನೆ ಜಾರಿಯಿಂದಾಗಿ ಯಾವ ಸ್ಥಿತಿಯಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಬೆನ್ನಿಗೇ ಬೇರೆ ಇಲಾಖೆಗಳೂ ರಸ್ತೆ ಅಗೆಯುವುದನ್ನು ಬಿಟ್ಟಿಲ್ಲ. ವಿಪರ್ಯಾಸವೆಂದರೆ ಅಗೆದ ರಸ್ತೆಗಳನ್ನು ಮುಚ್ಚಬೇಕೆನ್ನುವ ಸಾಮಾನ್ಯ ಜ್ಞಾನವೂ ಅಧಿಕಾರಿಗಳಿಗಿದ್ದಂತಿಲ್ಲ.
ರಾಣಿ ಚನ್ನಮ್ಮ ನಗರದ ಮುಖ್ಯರಸ್ತೆಯ ಸ್ಥಿತಿ ಕಳೆದ 2 ವರ್ಷದಿಂದ ಅಯೋಮಯವಾಗಿದೆ. ಇಲ್ಲಿನ ಒಳ ರಸ್ತೆಗಳು ದುರಸ್ತಿಯಾದರೂ ಮುಖ್ಯ ರಸ್ತೆ ಮಾತ್ರ ಒಂದು ಹಿಡಿ ಮಣ್ಣನ್ನೂ ಕಂಡಿಲ್ಲ. ನಿತ್ಯ ಸಂಚರಿಸುವ ಸಾವಿರಾರು ವಾಹನಗಳು, ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ಸಾಗುತ್ತಾರೆ. ಪಾಲಿಕೆಯ ಅಧಿಕಾರಿಗಳಿಗೆ ಚನ್ನಮ್ಮ ನಗರ ಎಲ್ಲಿದೆ ಎಂದು ಗೊತ್ತಿದೆಯೋ ಇಲ್ಲವೋ ಎನ್ನುವ ಸಂಶಯ ಬರುವ ರೀತಿಯಲ್ಲಿದೆ ಇಲ್ಲಿನ ರಸ್ತೆಗಳು. ನಗರವೆಲ್ಲ ಸ್ಮಾರ್ಟ್ ಆಗುತ್ತಿದ್ದರೂ ಚನ್ನಮ್ಮ ನಗರದ ಮುಖ್ಯ ರಸ್ತೆ ಮಾತ್ರ ಯಾವುದೋ ಕುಗ್ರಾಮದ ರಸ್ತೆಯಂತಿದೆ.
ಇದೀಗ ಈ ರಸ್ತೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅವಾಂತರ. ಸುಮಾರು 20 ದಿನಗಳ ಹಿಂದೆ ಕೆಯುಡಬ್ಲ್ಯುಎಸ್ ಇಲ್ಲಿಯ ಮುಖ್ಯರಸ್ತೆಯನ್ನು ಅಗೆದು ಹೋಗಿದೆ. ಪೈಪ್ ಅಳವಡಿಸಿ, ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿದೆ. ಈಗ ರಸ್ತೆಯಲ್ಲಿ ವಾಹನಗಳ ಸಂಚಾರ ಆ ದೇವರಿಗೇ ಪ್ರೀತಿ. ಮೊದಲೇ ರಸ್ತೆ ದುರಸ್ತಿ ಇಲ್ಲ, ಮೇಲಿಂದ ಇವರ ಅವಾಂತರ ಬೇರೆ. ಇಡೀ ದಿನ ಸಂಚಾರಕ್ಕೆ ವಾಹನಗಳು ಪರದಾಟ ನಡೆಸಬೇಕಾಗಿದೆ. ರಸ್ತೆ ಅಗೆದ ನಂತರ ಇವರು ನಿದ್ರೆಗೆ ಜಾರಿರುವ ಶಂಕೆ ಇದೆ.
ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಲ್ಲಿ ಅಗೆದಿದ್ದು ಯಾರು? ಏಕೆ? ಯಾವಾಗ? ಯಾವ ಮಾಹಿತಿಯೂ ಇಲ್ಲ. ಕೊನೆಗೆ ಎಲ್ಲರನ್ನೂ ವಿಚಾರಿಸಿದವರಿಗೆ ಗೊತ್ತಾಗಿದ್ದು ಇದು ಕೆಯುಡಬ್ಲ್ಯುಎಸ್ ಅಧಿಕಾರಿಗಳ ಅವಾಂತರ ಎಂದು. ತಮ್ಮ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ಕನಿಷ್ಠ ತಿಳಿವಳಿಕೆಯೂ ಇಲ್ಲದಂತೆ ಇದ್ದಾರೆ ಅವರು.
ಈ ಕುರಿತು ಪ್ರಗತಿವಾಹಿನಿ ವಿಚಾರಿಸಿದಾಗ ನಾಳೆಯೇ ರಸ್ತೆ ಸರಿಪಡಿಸುವುದಾಗಿ ಕೆಯುಡಬ್ಲ್ಯುಎಸ್ ಅಧಿಕಾರಿ ಮಂಜುನಾಥ ಎನ್ನುವವರು ಹೇಳುತ್ತಾರೆ. ನಾಳೆಯೇ ಮಾಡಿಸುವವರಿಗೆ ಇಷ್ಟು ದಿನ ಅರ್ಧಕ್ಕರ್ಧ ರಸ್ತೆಯನ್ನು ಅಗೆದು ಕುಳಿತಿದ್ದು ನೆನಪಿರಲಿಲ್ಲವೇ?
ಇಂತಹ ನಿರ್ಲಕ್ಷ್ಯಕ್ಕೆ ಲಕ್ಷಾಂತರ ರೂ. ದಂಡ ಹಾಕುವ ಪದ್ಧತಿ ಜಾರಿಗೊಳಿಸಬೇಕು. ಸಮಯಮಿತಿಯಲ್ಲಿ ಯೋಜನೆ ಮುಗಿಸದಿದ್ದರೆ, ಅರ್ಧ ಕಾಮಗಾರಿ ಮಾಡಿಟ್ಟು ಹೋಗುವವರ ವಿರುದ್ಧ ಶಿಸ್ತ ಕ್ರಮ ಕೈಗೊಳ್ಳುವತನಕ ಇವೆಲ್ಲ ಸರಿಯಾಗುವುದಿಲ್ಲ.
ಶಾಸಕರ ಹೆಸರಿಗೆ ಕಳಂಕ
ವಿಶೇಷವೆಂದರೆ ಶಾಸಕ ಅಭಯ ಪಾಟೀಲ ಇಲ್ಲಿನ ಒಳ ರಸ್ತೆಗಳನ್ನೆಲ್ಲ ಮಾಡಿಸಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ತಮ್ಮ ಫೋಟೋ ಇರುವ ಫಲಕಗಳನ್ನು ಹಾಕಿಕೊಂಡಿದ್ದಾರೆ. ಈಗಿನ ರಸ್ತೆ ಅವ್ಯವಸ್ಥೆ ನೋಡುತ್ತಿರುವ ಜನರು ಅಭಯ ಪಾಟೀಲ ಅವರ ಫೋಟೋ ನೋಡಿ ಈ ಅವ್ಯವಸ್ಥೆಗೆ ತಮ್ಮ ಫೋಟೋ ಹಾಕಿಕೊಂಡಿದ್ದಾರೋ ಎಂದು ಪ್ರಶ್ನಿಸುವಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಶಾಸಕರು ಜನರಿಂದ ಬೈಸಿಕೊಳ್ಳಬೇಕಾಗಿದೆ.
ಶಾಸಕರು ಚನ್ನಮ್ಮ ನಗರ ಮುಖ್ಯರಸ್ತೆಗೆ ಆದಷ್ಟು ಬೇಗ ಕಾಯಕಲ್ಪ ನೀಡಿದರೆ ಜನರು ನಿತ್ಯ ಶಾಪ ಹಾಕುವುದರಿಂದ ಪಾರಾಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ