
ವೇತನ ಸರಿಯಾಗಿ ನೀಡದೇ ಬಡ್ತಿ ಕೊಡದೇ ಕಿರುಕುಳ ಹಿನ್ನೆಲೆ
ಪ್ರಗತಿವಾಹಿನಿ ಸುದ್ದಿ: ಸರಿಯಾಗಿ ವೇತನ ಪಾವತಿಸದೇ, ಬೋನಸ್, ಬಡ್ತಿ ನೀಡದೇ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಓಲಾ ಸಹಾಯಕ ಇಂಜಿನಿಯರ್ ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರಸಿದ್ಧ ಎಲೆಕ್ಟ್ರಿಕ್ ದ್ವಿಚಕ್ರವಾಹನ ಕಂಪನಿ ಓಲಾ ಕಂಪನಿಯ ಹೋಮೋ ಲೊಗೇಷನ್ ಎಂಜಿನಿಯರ್ ಆಗಿದ್ದ ಅರವಿಂದ್ ಕೆ (38) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆ.28ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಸಾವನ್ನಪ್ಪಿದ ಏಳು ದಿನಗಳ ಬಳಿಕ ಕಂಪನಿ ಅವರ ಖಾತೆಗೆ 17.46 ಲಕ್ಷ ರೂಪಾಯಿ ಹಣ ಜಮೆ ಮಾಡಿದೆ. ಈ ಹಣ ಜಮೆಯಾಗುತ್ತಿದ್ದಂತೆ ಕುಟುಂಬದವರು ಅನುಮಾನಗೊಂಡು ಕಂಪನಿಯನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆದರೆ ಕಂಪನಿ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಕುಟುಂಬದವರಿಗೆ ಕಂಪನಿ ಬಗ್ಗೆ ಇನ್ನಷ್ಟು ಅನುಮಾನ ಕಾಡಿದೆ.
ಅರವಿಂದ್ ರೂಮ್ ನಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಸರಿಯಾದ ಸಮಯಕ್ಕೆ ಸಂಬಳ ಪಾವತಿಸುತ್ತಿರಲಿಲ್ಲ. ಬಡ್ತಿಗೆ ಕಿರುಕುಳ ನೀಡುತ್ತಿದ್ದರು. ಬೋನಸ್ ಸೇರಿದಂತೆ ಯಾವುದೇ ಪ್ರೋತ್ಸಾಹ ನೀಡದೇ ಕಿರುಕುಳ ನೀಡುತ್ತಿರುವುದಾಗಿ ಒತ್ತಡದಲ್ಲಿ ಕೆಲಸ ಮಾಡಬೇಕಾದ ಸ್ಥಿತಿಯಲ್ಲಿದ್ದುದಾಗಿ ಅರವಿಂದ್ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ಅರವಿಂದ್ ಸಹೋದರ ಡೆತ್ ನೋಟ್ ಸಮೇತ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓಲಾ ಎಲೆಕ್ಟ್ರಿಕ್ ಕಂಪನಿಯ ಸಿಇಓ ಭವೇಶ್ ಅಗರ್ವಾಲ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸುಬ್ರತ್ ಕುಮಾರ್ ಹಾಗೂ ಭವೇಶ್ ಅಗರ್ವಾಲ್ ಹಾಗೂ ಓಲಾ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದೆ.