*ಸೂಪಾ ಹಿನ್ನೀರ ದಡದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಅಜ್ಜಿಯ ರಕ್ಷಣೆ: ಮಾನವೀಯತೆ ಮೆರೆದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಸೂಪಾ ಜಲಾಶಯದ ಡೊಣಪ ಗ್ರಾಮದ ಹಿನ್ನಿರಿನ ದಡದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧೆಯನ್ನು ಪೊಲೀಸರು ರಕ್ಷಿಸಿರುವ ಘಟನೆ ನಡೆದಿದೆ.
ಸುಮಾರು 75 ವರ್ಷ ವಯಸ್ಸಿನ ಅಜ್ಜಿಯನ್ನು ಜೋಯಿಡಾ ಪೊಲೀಸರು ರಕ್ಷಿಸಿದ್ದಾರೆ. ಪಿಎಸ್ಐ ಮಹೇಶ ಮಾಳಿ, ತಮಗೆ ಮಾಹಿತಿ ದೊರೆತ ತಕ್ಷಣ, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಅಗತ್ಯ ಸಿಬ್ಬಂದಿ ಹಾಗೂ ಅಗತ್ಯ ಸಾಮಗ್ರಿಗಳೊಂದಿಗೆ ಡೊಣಪ ಹಿನ್ನೀರು ಪ್ರದೇಶಕ್ಕೆ ತೆರಳಿ ಅಜ್ಜಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಜ್ಜಿ ಹಿನ್ನೀರ ದಡದಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ರಕ್ಷಿಸಿ ಆಸ್ಥತ್ರೆಗೆ ದಾಖಲಿಸಿದ್ದಾರೆ.

ರಕ್ಷಿಸಲ್ಪಟ್ಟ ಅಜ್ಜಿ ಕಲ್ಪನಾ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಕಾರವಾರದಿಂದ ಬಂದಿರುವ ಅಜ್ಜಿ ಕಲ್ಪನಾ ತನ್ನ ತವರು ಮನೆ ಗಂಗೋಡ ಗ್ರಾಮದ ರುಂಡಾಳಿಗೆ ಬಂದಿದ್ದರು. ಪತಿ, ಮಕ್ಕಳು ಯಾರೂ ಇಲ್ಲದ ಕಾರಣ ಅವರು ಕಾರವಾರ ಬಿಟ್ಟು ತವರು ಊರಾದ ಗಂಗೋಡ ಗ್ರಾಮಕ್ಕೆ ಆಗಮಿಸಿದ್ದರು. ಅಲ್ಲಿ ಸಂಬಂಧಿಕರಾದ ದುರ್ಗಾದಾಸ್ ಮಿರಾಶಿ ಎಂಬುವವರ ಮನೆಯಲ್ಲಿ ವಾಸವಾಗಿದ್ದರು. ಅಜ್ಜಿ ಕಲ್ಪನಾ ದುರ್ಗಾದಾಸ್ ಅವರ ಅಕ್ಕ ಎಂದು ತಿಳಿದುಬಂದಿದೆ. ತಮ್ಮ ಅಕ್ಕನಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಕೊಟ್ಟು ವಾಸಕ್ಕೆ ಅನುಕೂಲ ಮಾಡಿ ಕೊಟ್ಟಿದ್ದರು. ಮಾನಸಿಕವಾಗಿ ನೊಂದಿದ್ದ ಅಜ್ಜಿ ಕಲ್ಪನಾ, ಗಣೇಶ ಹಬ್ಬದ ಬಳಿಕ ರುಂಡಾಳಿ ಬಿಟ್ಟು ಬಂದಿದ್ದರು. ಸೂಪಾ ಹಿನ್ನೀರ ಬಳಿ ಅಜ್ಜಿಯನ್ನು ನೋಡಿದ ಕುಂಬಾರ್ವಾಡದ ಪ್ರಸನ್ನ ಗಾವುಡ ಹಾಗೂ ದಯಾನಂದ ಎಂಬುವವರು ಜೋಯಿಡಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಜ್ಜಿಯ ಸಹೋದರ ಅವರ ಆರೈಕೆ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ ಕಾರಣ ಜೋಯಿಡಾದ ಪ್ರಗತಿ ನಿಲಯ ಅನಾಥಾಶ್ರಮದವರೊಂದಿಗೆ ಮಾತನಾಡಿ ಅವರ ಒಪ್ಪಿಗೆಯಂತೆ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಲಾಗಿದೆ. ಇನ್ನು ಅನಾಥಾಶ್ರಮಕ್ಕೆ ತೆರಳುವ ಮುನ್ನ ಅಜ್ಜಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೊಸ ಬಟ್ಟೆಗಳನ್ನು ಕೊಡಿಸಿ ಪಿಎಸ್ಐ ಮಹೇಶ ಮಾಳಿ ಮಾನವೀಯತೆ ಮೆರೆದಿದ್ದಾರೆ. ಅಜ್ಜಿಯ ರಕ್ಷಣೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ, ಅಖಿಲೇಶ್, ಸುಜಾತಾ, ಸಾಂತ್ವನ ಕೇಂದ್ರದ ದುರ್ಗಾ ಗೌಡ, ಸ್ವಾತಿ, ಸುವರ್ಣ ಇತರರು ಇದ್ದರು.