Kannada NewsKarnataka NewsLatest

ಖಾನಾಪುರ ಪೊಲೀಸರ ಕಾರ್ಯಾಚರಣೆ: ಒಂದು ಕೆಜಿ ಗಾಂಜಾ ವಶ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಖಾನಾಪುರ ಪೊಲೀಸರು ಭಾನುವಾರ ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಗಾಂಜಾ ಮಾರುತ್ತಿದ್ದ ಮೂವರು ಮತ್ತು ಖರೀದಿಸುತ್ತಿದ್ದ ಮೂವರು ಸೇರಿದಂತೆ ಒಟ್ಟು 6
ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಕಾರು ಮತ್ತು 1 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಭಾನುವಾರ ಪಟ್ಟಣದ ಶಾಹುನಗರ ಬಡಾವಣೆಯ ಮನೆಯೊಂದರ ಮೇಲೆ ನಡೆದ ಅನಿರೀಕ್ಷಿತ ದಾಳಿಯಲ್ಲಿ ಮನೆಯಲ್ಲಿ ಗಾಂಜಾ ಸಂಗ್ರಹಿಸಿದ್ದ ದೀಪಕ ಕುಡಾಳೆ, ವಿನೋದ
ಸೊಂಟಕ್ಕಿ ಮತ್ತು ತಾಯಿ ಸೊಂಟಕ್ಕಿ ಅವರನ್ನು ಹಾಗೂ ಗಾಂಜಾ ಖರೀದಿಗಾಗಿ ಬಂದಿದ್ದ
ಬೆಳಗಾವಿ ನಗರದ ಮೊಹ್ಮದ ಜಕಿ ಸನದಿ, ಸೈಯದ್ ನಿಹಾಲ ಬುಕಾರಿ ಮತ್ತು ಪಟ್ಟಣದ ನಿಶಾತ್
ಜುಂಜವಾಡಕರ, ಅಜಿಂ ಸೈಯದ್ ಅವರನ್ನು ಖಾನಾಪುರ ಪೊಲೀಸರು ಮಾಲುಸಮೇತ ವಶಕ್ಕೆ ಪಡೆದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಸಿ.ಪಿ.ಐ ಸುರೇಶ ಶಿಂಗಿ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಖಾನಾಪುರ ಠಾಣೆಯ
ಪಿ.ಎಸ್.ಐ ಬಸಗೌಡ ಪಾಟೀಲ, ಸಿಬ್ಬಂದಿ ಜಗದೀಶ ಕಾದ್ರೊಳ್ಳಿ, ಎಂ.ಎಂ ಮುಲ್ಲಾ, ಎಸ್.ಎಸ್
ತುರಮಂದಿ, ಮಂಜುನಾಥ ಮುಸಳಿ, ಪಿ.ವಿ ಲೋಕೂರೆ, ಎ.ವಿ ಜೋತೆನ್ನವರ, ಎಸ್.ಸಿ ಪೂಜಾರಿ
ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳ ಕೈವಾಡದ ಶಂಕೆ:  
ಭಾನುವಾರ ಪಟ್ಟಣದಲ್ಲಿ ಪತ್ತೆಯಾದ ಗಾಂಜಾ ಪ್ರಕರಣದಲ್ಲಿ ಮತ್ತಷ್ಟು
ಆರೋಪಿಗಳು ಭಾಗಿಯಾರುವ ಬಗ್ಗೆ ಪೊಲೀಸರಿಗೆ ಕುರುಹುಗಳು ಲಭಿಸಿದ್ದು, ಈ ಕುರಿತು
ತನಿಖೆಯನ್ನು ಮುಂದುವರೆಸಿ ಈ ಪ್ರಕರಣದ ಹಿಂದೆ ಇರುವ ಮತ್ತಷ್ಟು ಆರೋಪಿಗಳನ್ನು
ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಖಾನಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಷೇಧಿತ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುವಲ್ಲಿ ಕೆಲ ಯುವಕರು ಮತ್ತು ಪಟ್ಟಣದ
ರಾಜಕೀಯ ಪಕ್ಷವೊಂದರ ಮುಖಂಡರು ಭಾಗಿಯಾಗಿದ್ದಾರೆ ಎಂಬ ಸುಳಿವು ಲಭ್ಯವಾಗಿದ್ದು,
ಇಲಾಖೆಯ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ತಾಲೂಕಿನ ಹಲವೆಡೆ ಗಾಂಜಾ ಬೆಳೆಯುತ್ತಿದ್ದು, ಅದನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ
ಜಾಲವೊಂದು ಪಟ್ಟಣ ಸೇರಿದಂತೆ ನಂದಗಡ, ಲೋಂಡಾ ಮತ್ತು ಪಾರಿಶ್ವಾಡ ಗ್ರಾಮಗಳಲ್ಲಿ
ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈಗಾಗಲೇ ಬಂಧಿತ
ಆರೋಪಿಗಳಿಂದ ಈ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ
ಮುಂದುವರೆಸಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button