Karnataka News

*ಒಂದು ಲಕ್ಷ ಮನೆ ಯೋಜನೆ: ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ*

ಸರ್ಕಾರದ ಮಹತ್ವದ ತೀರ್ಮಾನ

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಯೂನಿಟ್ ವೆಚ್ಚ ಹೆಚ್ಚಳ ನಿರ್ಧಾರ ದಿಂದ ಆತಂಕ ಗೊಂಡಿದ್ದ 12,153 ಕುಟುಂಬಗಳಿಗೆ ಸಿಹಿ ಸುದ್ದಿ ನೀಡಿದ್ದು, ಪ್ರತಿ ಮನೆಗೆ ಒಂದು ಲಕ್ಷ ರೂ. ನಂತೆ 121 ಕೋಟಿ 53 ಲಕ್ಷ ರೂ.ಸರ್ಕಾರವೇ ಭರಿಸಲು ಒಪ್ಪಿಗೆ ನೀಡಿದ್ದಾರೆ.

ವಸತಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಗುರುವಾರ ಸಂಜೆ ವಿಧಾನ ಸೌಧದ ಮುಖ್ಯಮಂತ್ರಿ ಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರದ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿ ಯವರ ಮನವೊಲಿಸುವಲ್ಲಿ ಯಶಸ್ವಿಯಾದರು.

ಮುಖ್ಯಮಂತ್ರಿ ಯವರ ಒಂದು ಲಕ್ಷ ಮನೆ ಯೋಜನೆ ಗೆ 2017, ಸೆಪ್ಟೆಂಬರ್ 23 ರಂದು ಅಧಿಸೂಚನೆ ಹೊರಡಿಸಿ ಘಟಕ ವೆಚ್ಚ 6 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಕೇಂದ್ರ ಸರ್ಕಾರ 1.50 ಲಕ್ಷ, ರಾಜ್ಯ ಸರ್ಕಾರ ಸಾಮಾನ್ಯ ವರ್ಗಕ್ಕೆ 1.20 ಲಕ್ಷ, ಎಸ್ ಟಿ -ಎಸ್ ಸಿ ವರ್ಗಕ್ಕೆ 2 ಲಕ್ಷ ರೂ. ನಿಗದಿಯಾಗಿತ್ತು. ನಂತರ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರ್ಕಾರದಲ್ಲಿ ಘಟಕ ವೆಚ್ಚ 10 ಲಕ್ಷದ 60 ಸಾವಿರ ರೂ. ನಿಗದಿ ಮಾಡಲಾಗಿತ್ತು. ಇದಕ್ಕೆ 60 ಸಾವಿರ ರೂ. ಜಿಎಸ್ ಟಿ ಸೇರಿ 11 ಲಕ್ಷದ 20 ಸಾವಿರ ರೂ. ಆಗಿತ್ತು. ಇಷ್ಟು ಮೊತ್ತ ಭರಿಸಲು ಕಷ್ಟ ಎಂದು ಫಲಾನುಭವಿಗಳು ಸಚಿವರ ಬಳಿ ಮನವಿ ಮಾಡಿಕೊಂಡಿದ್ದರು.


ಇದೀಗ ಸರ್ಕಾರದ ಮಹತ್ವದ ತೀರ್ಮಾನ ದಿಂದ ಸಬ್ಸಿಡಿ ಹೊರತು ಪಡಿಸಿ ಸಾಮಾನ್ಯ ವರ್ಗ 7.50 ಲಕ್ಷ, ಎಸ್ ಸಿ -ಎಸ್ ಟಿ ವರ್ಗ 6.70 ಲಕ್ಷರೂ.ಕಟ್ಟಬೇಕಾಗುತ್ತದೆ. ಇದರಿಂದ 12,153 ಕುಟುಂಬ ಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಈ ಹಿಂದೆ ಕ್ರಮವಾಗಿ 8.50 ಲಕ್ಷ ಹಾಗೂ 7.70 ಲಕ್ಷ ರೂ. ಕಟ್ಟಬೇಕಿತ್ತು. ಈ ತೀರ್ಮಾನ 2020 ರಲ್ಲಿ ಘಟಕ ವೆಚ್ಚ ಹೆಚ್ಚಳ ತೀರ್ಮಾನದ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡಿರುವ 12,153 ಮಂದಿಗೆ ಮಾತ್ರ ಅನ್ವಯವಾಗಲಿದೆ. ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡದ ಆನ್ ಲೈನ್ ಅರ್ಜಿ ಗಳಿಗೆ ಅನ್ವಯ ಆಗದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟ ಪಡಿಸಿದ್ದಾರೆ.

ಫಲಾನುಭವಿಗಳು ಸರ್ಕಾರ ನಿಗದಿಪಡಿಸಿದ ಘಟಕ ವೆಚ್ಚ ತಮಗೆ ಹೊರೆ ಯಾಗುತ್ತಿರುವ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಅವರಲ್ಲಿ ಹಲವಾರು ಬಾರಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಸಂಬಂಧ ಶಾಸಕರ ಜತೆ ಮೂರು ಸಭೆ ನಡೆಸಿದ್ದ ಸಚಿವರು ಅಂತಿಮ ವಾಗಿ ಮುಖ್ಯಮಂತ್ರಿ ಯವರ ಬಳಿ ಶಾಸಕರನ್ನು ಕರೆದೊಯ್ದು ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಲ್ಲಿಯಶಸ್ವಿಯಾಗಿದ್ದಾರೆ.

ಇಂದಿನ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್. ಟಿ. ಸೋಮಶೇಖರ್, ಎಸ್. ಆರ್. ವಿಶ್ವನಾಥ್, ಮಂಜುಳಾ ಲಿಂಬಾವಳಿ, ಎಂ. ಕೃಷ್ಣಪ್ಪ, ಮುನಿರಾಜು,ಶಿವಣ್ಣ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button