ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ಬಾರಿ ಬೆಳಗಾವಿ ರಾಜಕಾರಣಿಗಳಿಗೆ ಬಂಪರ್ ಹೊಡೆದಂತಿದೆ. ಅಧಿಕಾರಿಗಳಿಗೆ ಪ್ರೊಟೋಕಾಲ್ ನಿರ್ವಹಣೆ ಮಾಡುವುದೇ ತಲೆನೋವಾಗುವಷ್ಟು ಅಧಿಕಾರವನ್ನು ಬೆಳಗಾವಿ ರಾಜಕಾರಣಿಗಳಿಗೆ ನೀಡಲಾಗುತ್ತಿದೆ.
ಇದೀಗ ಕುಡಚಿ ಶಾಸಕ ರಾಜೀವ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದು ರಾಜ್ಯ ಸಚಿವರ ಸ್ಥಾನಮಾನದ ಹುದ್ದೆಯಾಗಿದೆ.
ಲಕ್ಷ್ಮಣ ಸವದಿ ಮಂತ್ರಿಯಾಗುವ ಜೊತೆಗೆ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಅವರಿಗೆ ಉಪಮುಖ್ಯಮಂತ್ರಿಯ ಹುದ್ದೆಯ ಜೊತೆಗೆ ಸಾರಿಗೆ, ಕೃಷಿ ಇಲಾಖೆಗಳ ಜವಾಬ್ದಾರಿಯನ್ನೂ ನೀಡಲಾಗಿದೆ. ಶಶಿಕಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೊತೆಗೆ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಖಾತೆಯನ್ನೂ ಹೊಂದಿದ್ದಾರೆ.
ಶಂಕರಗೌಡ ಪಾಟೀಲ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಇದೂ ಸಹ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿದೆ. ಮಹಾಂತೇಶ ಕವಟಗಿಮಠ ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾಗಿ ನೇಮಕವಾಗಿದ್ದು, ಕ್ಯಾಬಿನೆಟ್ ರ್ಯಾಂಕ್ ಹೊಂದಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ಪಿ.ರಾಜೀವ ತಾಂಡಾ ಅಭಿವೃದ್ಧಿ ನಿಗಮಕ್ಕೆ ನೇಮಕವಾಗಿದ್ದಾರೆ. ಇನ್ನು ಜಿಲ್ಲೆಯವರೇ ಆಗಿರುವ ಸುರೇಶ ಅಂಗಡಿ ಕೇಂದ್ರ ಸಚಿವರಾಗಿದ್ದಾರೆ.
ಮುಂದಿನ ದಿನಗಳಲ್ಲಿ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ ಸಹ ಉನ್ನತ ಹುದ್ದೆಯನ್ನೇ ಅಲಂಕರಿಸುವುದು ಖಚಿತ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ