
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಆನ್ ಲೈನ್ ಗೇಮ್ ಗೆ ಬಲಿಯಾಗುತ್ತಿದ್ದಾರೆ. ಇಲ್ಲೊಂದು ಘಟನೆಯಲ್ಲಿ ಆನ್ ಲೈನ್ ಗೇಮ್ ವ್ಯಸನಕ್ಕೆ ಬಿದ್ದ ಮೂವರು ಸಹೋದರಿಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ.
ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ. ಪಖಿ(12), ಪ್ರಾಚಿ (14) ಹಾಗೂ ವಿಶಿಕಾ (16) ಆತ್ಮಹತ್ಯೆಗೆ ಶರಣಾದ ಮಕ್ಕಳು. ಮೂವರು ಸಹೋದರಿಯರು ಆನ್ ಲೈನ್ ಗೇಮ್ ಆಡುತ್ತಿದ್ದರು. ಆನ್ ಲೈನ್ ಗೇಮ್ ಆಡದಂತೆ ಪೋಷಕರು ಬೈದು ಬುದ್ಧಿ ಹೇಳಿ, ಮೊಬೈಲ್ ಕಿತ್ತುಕೊಂಡಿದ್ದರು.
ಇದರಿಂದ ನೊಂದ ಮೂವರು ಮಕ್ಕಳು ಅಪ್ಪ-ಅಮ್ಮ ಸಾರಿ ಎಂದು ಡೆತ್ ನೋಟ್ ಬರೆದಿಟ್ಟು, ಅಪಾರ್ಟ್ ಮೆಂಟ್ ನ ೯ ನೇ ಮಹಡಿಯಿಂದ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಮಕ್ಕಳು ಸದಾಕಾಲ ಒಟ್ಟಿಗೆ ಇರುತ್ತಿದ್ದರು. ಸ್ನಾನ, ಊಟ-ತಿಂಡಿ, ಆಟ, ಪಾಠ, ಶಾಲೆಗೆ ಹೋಗುವುದು ಹೀಗೆ ದಿನನಿತ್ಯದ ಕೆಲಸವನ್ನು ಒಟ್ಟಾಗಿ ಮಾಡುತ್ತಿದ್ದರು. ಇದೇ ವೇಳೆ ಮೂವರು ಮಕ್ಕಳು ಆನ್ ಲೈನ್ ಗೇಮ್ ಆಡುವುದನ್ನು ಇತ್ತೀಚೆಗೆ ತುಂಬಾ ಹಚ್ಚಿಕೊಂಡಿದ್ದರು. ಇದು ಪೋಷಕರಿಗೆ ನಿದ್ದೆಕೆಡಿಸಿತ್ತು. ಈಗ ಆನ್ ಲೈನ್ ಗೇಮ್ ಆಡಬಾರದು ಎಂದು ಮಕ್ಕಳಿಗೆ ಬುದ್ಧಿ ಹೇಳಿದ್ದೇ ತಪ್ಪಾಗಿದೆ. ಮೂವರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ.



